ADVERTISEMENT

ಬಿಜೆಪಿಗೆ ಬಲ ತುಂಬಿ: ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್‌ ಮನವಿ

ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್‌ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 4:27 IST
Last Updated 30 ನವೆಂಬರ್ 2021, 4:27 IST
ಗದುಗಿನ ಬಂಜಾರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯನ್ನು ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು
ಗದುಗಿನ ಬಂಜಾರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯನ್ನು ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು   

ಗದಗ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳಿಂದಾಗಿ ಗ್ರಾಮಗಳು ಅಭಿವೃದ್ಧಿಗೊಂಡಿವೆ. ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇದ್ದು, ನನ್ನನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ಬಲ ತುಂಬಬೇಕು’ ಎಂದು ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್‌ ಮನವಿ ಮಾಡಿದರು.

ನಗರದ ಬಂಜಾರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ, ‘ಸದ್ಯದ ಪರಿಸ್ಥಿತಿಯಲ್ಲಿ ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಈ ಬಾರಿ ವಿಧಾನ ಪರಿಷತ್ 20 ಸ್ಥಾನಗಳಲ್ಲಿ ಗೆದ್ದು ಬಹುಮತ ಹೊಂದುವ ವಿಶ್ವಾಸವಿದೆ. ಈ ಬಾರಿ ಪ್ರದೀಪ್‌ ಶೆಟ್ಟರ ಅವರಿಗೆ ಹಾಕುವ ಮತಗಳು ಬಿಜೆಪಿ ಶಕ್ತಿ ತುಂಬಲಿವೆ’ ಎಂದು ಹೇಳಿದರು.

ADVERTISEMENT

‘ನಗರಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಗದುಗಿನಲ್ಲಿ ಪಕ್ಷದ ಧ್ವಜ ಹಾರಾಡಬೇಕು. ಮುಂದೆ ಬರುವ ಜಿಲ್ಲಾ ಪಂಚಾಯ್ತಿ ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನೂ ಗೆಲ್ಲುವ ಜವಾಬ್ದಾರಿ ಪಕ್ಷದ ಮುಖಂಡರ ಮೇಲಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ಶೆಟ್ಟರ ಕುಟುಂಬ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಸದಸ್ಯರಿಗೆ ತಿಳಿಸುವ ಮೂಲಕ ಮೊದಲ ಪ್ರಾಶಸ್ತ್ಯದ ಮತವನ್ನು ದೊರಕುವಂತೆ ಮಾಡಬೇಕು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ ಮಾತನಾಡಿ, ‘27 ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿಯ 223 ಹಾಗೂ ಪಟ್ಟಣ ಪಂಚಾಯ್ತಿಯಲ್ಲಿ 100 ಮಂದಿ ಸದಸ್ಯರಿದ್ದಾರೆ. ಅವರೆಲ್ಲರೂ ಇತರ ಸದಸ್ಯರ ಮನ ಒಲಿಸಿ ಬಿಜೆಪಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ ತೆಂಗಿನಕಾಯಿ ಮಾತನಾಡಿ, ‘ಪ್ರದೀಪ್ ಶೆಟ್ಟರ್ ಮೂರನೇ ಬಾರಿಗೆ ಸ್ಪರ್ಧಿಸಿದ್ದಾರೆ. ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಹೇಳಿದರು.

ಶಾಸಕ ಕಳಕಪ್ಪ ಬಂಡಿ, ಶಾಸಕ ರಾಮಣ್ಣ ಲಮಾಣಿ, ರಾಜು ಕುರಡಗಿ, ಎಂ.ಎಸ್.ಕರಿಗೌಡ್ರ, ಬಿಜೆಪಿ ಒಬಿಸಿ ಕಾರ್ಯದರ್ಶಿ ರವಿ ದಂಡಿನ, ಭೀಮಸಿಂಗ ರಾಠೋಡ, ನಾರಾಯಣ ಜರತಾಘರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.