ADVERTISEMENT

ಏಳು ದಿನ ಅಯ್ತು; ಆಟ ಇಲ್ಲ, ಪಾಠ ಇಲ್ಲ..!

ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳು; ಶಾಲೆ ನೆನೆದು ಕಣ್ಣೀರು

ವಿಜಯ ಸಣಾಪುರ
Published 13 ಆಗಸ್ಟ್ 2019, 19:30 IST
Last Updated 13 ಆಗಸ್ಟ್ 2019, 19:30 IST
ತೋಂಟದಾರ್ಯ ಮಠದ ಪ್ರವಾಹ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ತಮ್ಮ ತಾಯಂದಿರ ಜತೆಗೆ ಕುಳಿತಿರುವ ಮಕ್ಕಳು
ತೋಂಟದಾರ್ಯ ಮಠದ ಪ್ರವಾಹ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ತಮ್ಮ ತಾಯಂದಿರ ಜತೆಗೆ ಕುಳಿತಿರುವ ಮಕ್ಕಳು   

ಗದಗ: ನಡುಮಟ್ಟ ಬೆಳೆದುನಿಂತ ಗೋವಿಜೋಳ, ಆಳೆತ್ತರ ಬೆಳೆದ ಕಬ್ಬು, ಇನ್ನೇನು ಕಟಾವಿಗೆ ಬರುವ ಹೆಸರುಕಾಳು, ಹೊಂಬಣ್ಣ ಚೆಲ್ಲುತ್ತಾ ನಿಂತಿರುವ ಸೂರ್ಯಕಾಂತಿ, ಮೊಳಕೆಯೊಡಿದರುವ ಶೇಂಗಾ, ಈರುಳ್ಳಿ ಹೀಗೆ ಹಚ್ಚ ಹಸಿರಿನಿಂದ ನಳನಳಿಸುತ್ತಾ ಭೂಮಿಯ ಮೇಲಿನ ಸ್ವರ್ಗದಂತೆ ಕಾಣಿಸುತ್ತಿದ್ದ ಮಲಪ್ರಭಾ ನದಿ ದಂಡೆಯ ಮೇಲಿನ ಗ್ರಾಮಗಳು ಈಗ ಪ್ರವಾಹ ಇಳಿದ ನಂತರ ಕೆಸರು ಮಾತ್ರ ತುಂಬಿಕೊಂಡಿರುವ ಬಟಾ ಬಯಲಿನಂತೆ ಕಾಣುತ್ತಿದೆ.

ಈ ಹಚ್ಚಹಸಿರಿನ ಗ್ರಾಮಗಳಲ್ಲಿ ಶ್ರಾವಣ ಮಾಸದ ಸಾಲುಸಾಲು ಹಬ್ಬಗಳನ್ನು ಆಚರಿಸುತ್ತಾ, ಆಡುತ್ತಾ,ನಲಿಯುತ್ತಾ ಭುವಿಯ ಮೇಲಿನ ನಕ್ಷತ್ರಗಳಂತೆ ಶಾಲೆಗೆ ಹೋಗುತ್ತಿದ್ದ ಪುಟಾಣಿಗಳು ಈಗ ಮಾತು ಮರೆತವರಂತೆ ಕುಳಿತಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಎಂದೂ ಕಂಡು, ಕೇಳರಿಯದ ಮಹಾ ಪ್ರವಾಹ ಒಂದು ದೊಡ್ಡ ದುಸ್ವಪ್ನದಂತೆ ಅವರ ಕಣ್ಣೆದುರಿಗೆ ಬಂದು ನಿಂತಿದೆ. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳ ಮುಖದ ತುಂಬಾ ಆತಂಕ, ಭಯ ಮನೆ ಮಾಡಿದೆ. ಯಾರ ಕಣ್ಣಿಗೂ ಬೀಳದೇ, ಅಮ್ಮಂದಿರ ಸೆರಗಿನ ಹಿಂದೆ ಓಡಾಡಿಕೊಂಡಿರುವ ಈ ಪುಟಾಣಿಗಳು ಒಂದು ವಾರದಿಂದ ಆಟ, ಪಾಠ ಮರೆತಿದ್ದಾರೆ.

‘ಊರಿನಲ್ಲಿ ನೀರು ಬಂದಿದೆಯಂತೆ. ಅಪ್ಪ, ಅಮ್ಮ ನಮ್ಮನ್ನು ಕರೆದುಕೊಂಡು ಮಠದಲ್ಲಿ ಬಿಟ್ಟಿದ್ದಾರೆ. ಉಡೋಕೆ ಬಟ್ಟೆಯಿಲ್ಲ, ಏನೂ ಇಲ್ಲ. ನನ್ನ ಹೊಸ ಅಂಗಿ, ಪ್ಯಾಂಟೂ ಮನೆಯಲ್ಲಿ ಇದೆ. ಅವು ಏನಾಗಿದವೋ ಗೊತ್ತಿಲ್ಲ. ಇಲ್ಲೊಬ್ಬರು ಮೇಡಂ, ಹೊಸ ಅಂಗಿ, ಪ್ಯಾಂಟು ಕೊಟ್ಟಿದ್ದಾರೆ. ಅದನ್ನೆ ಉಟ್ಟಿದ್ದೀನಿ’. ಗದುಗಿನ ತೋಂಟದಾರ್ಯ ಮಠದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಹೊಳೆಆಲೂರಿನ 5ನೇ ತರಗತಿ ವಿದ್ಯಾರ್ಥಿ ಚಿದಾನಂದ ಕಳಪ್ಪ ಹೀಗೆ ಹೇಳುತ್ತಿದ್ದರೆ, ಅವರ ಅವರ ತಾಯಿಯ ಕಣ್ಣಲ್ಲಿ ಕಂಬನಿ ಮಿಡಿಯುತ್ತಿತ್ತು.

ADVERTISEMENT

ಚಿದಾನಂದ ಮಾತ್ರವಲ್ಲ ಹೊಳೆಆಲೂರು, ಹೊಳೆಮಣ್ಣೂರು, ಮೆಣಸಗಿ, ಗಾಡಗೋಳಿ, ಅಮರಗೋಳ ಸೇರಿದಂತೆ ಹಲವು ಗ್ರಾಮಗಳ ಮಕ್ಕಳು ತಮ್ಮ ಪಾಲಕರ ಜತೆಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಎಲ್ಲರ ಕಂಗಳಲ್ಲೂ ಅಭದ್ರತೆಯ ನೋಟ ಇದೆ. ಪ್ರತಿ ನಿತ್ಯ ಶಾಲೆಗೆ ಹೋಗುತ್ತಿದ್ದ ಮಕ್ಕಳು, ನೆರೆ ನೀರು ಗ್ರಾಮಕ್ಕೆ ನುಗ್ಗಿದಾಗ, ತಮ್ಮ ಪಠ್ಯಪುಸ್ತಕ, ಪಾಠಿಚೀಲ ಎಲ್ಲವನ್ನೂ ಬಿಟ್ಟು ಜೀವ ಉಳಿಸಿಕೊಳ್ಳಲು ಅಪ್ಪ,ಅಮ್ಮನ ಜತೆಗೆ ಓಡಿ ಬಂದಿದ್ದಾರೆ. ಈಗ ಪಠ್ಯಪುಸ್ತಕ, ಶಾಲೆಯಲ್ಲಿ ಶಿಕ್ಷಕರು ನೀಡಿದ ಮನೆಪಾಠ ಎಲ್ಲವನ್ನೂ ನೆನೆಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.

‘ಪಾಠಿಚೀಲ, ಬುಕ್, ಪೆನ್ನು, ನೋಟ್ಸ್ ಎಲ್ಲವೂ ನೀರು ಪಾಲಾಗಿದೆ. ಊರಿಗೆ ಮರಳಿದ ಕೂಡಲೇ ಪಾಠಿ ಚೀಲ ಹೊರತೆಗೆದು,ತೊಳೆದು, ಒಣಗಿಸಿ ಶಾಲೆ ಹೋಗುತ್ತೇವೆ’ ಎಂದು ಹೊಳೆ ಆಲೂರು ಗ್ರಾಮದ ಪುಟಾಣಿ ಜೀವನ್‌ ರಾಮು ಹೇಳಿದ. ‘ದಿನ ಶಾಲೆಯಲ್ಲಿ ಕಬಡ್ಡಿ, ಲಗೋರಿ, ಜೋಕಾಲಿ ಆಡ್ತಿದ್ವಿ. ಮಠಕ್ಕೆ ಬಂದು 7ದಿನ ಆಯ್ತು. ಆಟ ಇಲ್ಲ ಪಾಠ ಇಲ್ಲ’ ಎಂದು ಮುಗ್ದವಾಗಿ ಹೇಳಿದ.

‘ಅಪ್ಪ ಅಮ್ಮ ಹೇಳ್ತಿದ್ರು, ನಮ್ಮ ಮನೆ ಹಾರಿ ಹೋಗಿದೆ ಅಂತೆ. ಶಾಲೆಗೂ ನೀರು ನುಗ್ಗಿದೆಯಂತೆ. ಎತ್ತಿನ ಗಾಡಿ, ಆಟೋ ಎಲ್ಲನೂ ಕೊಚ್ಚಿಕೊಂಡು ಹೋಗಿವೆ. ಆಟ ಆಡೋಕೆ ಯಾವುದೇ ಸಾಮಾನು ಉಳಿದಿಲ್ಲ. ಇಲ್ಲಿ ಮಠದಲ್ಲಿ ಬೆಳಗ್ಗೆ ಚಹ,ಉಪ್ಪಿಟ್ಟು, ಅನ್ನ ಸಾರು ನೀಡ್ತಾರೆ. ನಾವು ಊರಿಗೆ ಹೋಗ್ತೀವಿ. ಆ.15ಕ್ಕೆ ಬಾವುಟ ಹಿಡಿದು ಸ್ವಾತಂತ್ರ್ಯ ದಿನ ಆಚರಿಸ್ತೀವಿ’ ಎಂದು ಪುಟಾಣಿಗಳು ಹೇಳುತ್ತಿದ್ದರು.

‘ಊರಲ್ಲಿ ನೀರು ಕಡಿಮೆ ಆಗಿದೆ. ಪುರುಷರು ಮನೆ ಸ್ವಚ್ಛ ಮಾಡೋದಕ್ಕೆ ಹೋಗಿದ್ದಾರೆ. ಇವತ್ತು, ನಾಳೆ ಇಲ್ಲಿಂದ ಹೊರಡುತ್ತೇವೆ. ಪ್ರವಾಹ ನೆನೆಸಿಕೊಂಡರೆ ಕೈ ಕಾಲು ನಡುಗುತ್ತದೆ. ಜೀವ ಉಳಿದದ್ದೇ ಹೆಚ್ಚು’ ಎಂದು ಹಸುಗೂಸನ್ನು ಎದೆಗವಚಿಕೊಂಡು ಹೊಳೆಆಲೂರಿನ ಗಿರಿಜವ್ವಾ ಹೊಸಮನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.