ADVERTISEMENT

’ವಸತಿ ಸಚಿವ ನಾ ಅದೇನಿ, ಮೊದಲು ಹೆಣ್ಣಮಗಳಿಗೆ ಮನೆ ಕೊಡಿ’

ನರಗುಂದ ತಾಲ್ಲೂಕಿನ ನೆರೆ ಪೀಡಿತ ಸ್ಥಳಕ್ಕೆ ವಸತಿ ಸಚಿವ ಸೋಮಣ್ಣ ಭೇಟಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 20:15 IST
Last Updated 6 ನವೆಂಬರ್ 2019, 20:15 IST
ನರಗುಂದ ತಾಲ್ಲೂಕಿನ ಪ್ರವಾಹ ಪೀಡಿತ ಕೊಣ್ಣೂರು ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ವಸತಿ ಸಚಿವ ಸೋಮಣ್ಣ, ತಗಡಿನ ಶೆಡ್‌ನಲ್ಲಿ ನಡೆಯುತ್ತಿರುವ ತಾತ್ಕಾಲಿಕ ಶಾಲೆಯನ್ನು ವೀಕ್ಷಿಸಿದರು. ಸಚಿವ ಸಿ.ಸಿ.ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಇದ್ದಾರೆ
ನರಗುಂದ ತಾಲ್ಲೂಕಿನ ಪ್ರವಾಹ ಪೀಡಿತ ಕೊಣ್ಣೂರು ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ವಸತಿ ಸಚಿವ ಸೋಮಣ್ಣ, ತಗಡಿನ ಶೆಡ್‌ನಲ್ಲಿ ನಡೆಯುತ್ತಿರುವ ತಾತ್ಕಾಲಿಕ ಶಾಲೆಯನ್ನು ವೀಕ್ಷಿಸಿದರು. ಸಚಿವ ಸಿ.ಸಿ.ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಇದ್ದಾರೆ   

ನರಗುಂದ: ‘ವಸತಿ ಸಚಿವ ನಾ ಅದೇನಿ, ಮೊದಲು ಈ ಹೆಣ್ಣುಮಗಳಿಗೆ ಮನೆ ಕೊಡು, ಆಮೇಲೆ ಮುಂದೆ ನೋಡೋಣ’ ಎಂದು ವಸತಿ ಸಚಿವ ವಿ. ಸೋಮಣ್ಣ, ಬುಧವಾರ ಕೊಣ್ಣೂರು ಗ್ರಾಮ ಪಂಚಾಯ್ತಿ ಪಿಡಿಒ ಸಂಕನಗೌಡರಿಗೆ ಗದರಿದ ಘಟನೆ ನಡೆಯಿತು.

ತಾಲ್ಲೂಕಿನ ನೆರೆ ಪೀಡಿತ ಪ್ರದೇಶಗಳ ಪರಿಶೀಲನೆಗೆ ಬಂದ ಸೋಮಣ್ಣ ಅವರ ಎದುರು, ಕೊಣ್ಣೂರು ಗ್ರಾಮದ ಸಂತ್ರಸ್ತೆ ಯಮನವ್ವ ಹೊರಕೇರಿ ಅವರು, ‘ನಮ್ಮ ಮನಿ ಬಿದ್ದೈತಿ ನಮಗ ಮನಿ ಕೊಟ್ಟಿಲ್ರಿ, ಬದುಕು ಬೀದಿಗೆ ಬಿದ್ದೈತಿ’ ಎಂದು ಕೈಮುಗಿದು ಬೇಡಿಕೊಂಡರು.

ಪಿಡಿಒ ಸಂಕನಗೌಡ್ರ ಅವರು ಸಂತ್ರಸ್ತೆಗೆ ಮನೆ ಕೊಡಲು ಇರುವ ತಾಂತ್ರಿಕ ಸಮಸ್ಯೆಯನ್ನು ವಿವರಿಸಲು ಮುಂದಾದರು. ಇದನ್ನು ಅರ್ಧದಲ್ಲೇ ತಡೆದ ಸಚಿವರು, ‘ಯಾವುದೇ ಸಮಸ್ಯೆ ಹೇಳಬೇಡ, ಅವಳು ಮೊದಲೇ ವಿಧವೆ ಅದಾಳ, ಆಕೆ ಏನು ಮಾಡಬೇಕು, ಆಧಾರ ಕಾರ್ಡ್‌ ಐತಲ್ಲೋ, ಅದರ ಮೂಲಕ ಮನೆ ಕೊಡಬೇಕು ಅಷ್ಟೇ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲರ ಎದುರೇ ತಾಕೀತು ಮಾಡಿದರು.

ADVERTISEMENT

ಕೊಣ್ಣೂರು ಗ್ರಾಮದ ಕೆಲವು ಸಂತ್ರಸ್ತರು ತಮಗೆ ಇನ್ನೂ ಆರಂಭಿಕ ಪರಿಹಾರ ₹10 ಸಾವಿರ ಲಭಿಸಿಲ್ಲ ಎಂದು ಸಚಿವರ ಎದುರು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸೋಮಣ್ಣ, ‘ಯಾರಿಗೆ ತಲುಪಿಲ್ಲ ಎನ್ನುವುದನ್ನು ಪರಿಶೀಲಿಸಿ, ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹದಿಂದ ಕುಸಿದುಬಿದ್ದ ಶತಮಾನ ಕಂಡ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ವೀಕ್ಷಿಸಿದ ಅವರು, ಮೊದಲು ಈ ಕಟ್ಟಡವನ್ನು ಅಭಿವೃದ್ಧಿಪಡಿಸಿ, ಮಾದರಿ ಶಾಲೆಯನ್ನಾಗಿ ರೂಪಿಸಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.