ADVERTISEMENT

ಪ್ರವಾಹ: ಅಂಧ ಮಕ್ಕಳ ಬದುಕು ಬೀದಿಗೆ

ಹೊಳೆಆಲೂರಿನ ಜ್ಞಾನಸಿಂಧು ವಸತಿ ಶಾಲೆ: ಆತಂಕಗೊಂಡಿರುವ ಮಕ್ಕಳು ಮರಳಿ ಶಾಲೆಗೆ ಬರಲು ಹಿಂದೇಟು

ಜೋಮನ್ ವರ್ಗಿಸ್
Published 20 ಆಗಸ್ಟ್ 2019, 19:45 IST
Last Updated 20 ಆಗಸ್ಟ್ 2019, 19:45 IST
ಮಲಪ್ರಭಾ ಪ್ರವಾಹದಿಂದ ಹೊಳೆಆಲೂರಿನ ಜ್ಞಾನಸಿಂಧು ವಸತಿ ಶಾಲೆಗೆ ನೀರು ನುಗ್ಗಿದ್ದು, ಸಂಪೂರ್ಣ ಕೆಸರು ತುಂಬಿರುವ ಕೊಠಡಿಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸಿದರು
ಮಲಪ್ರಭಾ ಪ್ರವಾಹದಿಂದ ಹೊಳೆಆಲೂರಿನ ಜ್ಞಾನಸಿಂಧು ವಸತಿ ಶಾಲೆಗೆ ನೀರು ನುಗ್ಗಿದ್ದು, ಸಂಪೂರ್ಣ ಕೆಸರು ತುಂಬಿರುವ ಕೊಠಡಿಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸಿದರು   

ಗದಗ: ಮಲಪ್ರಭಾ ಪ್ರವಾಹವು ಜಿಲ್ಲೆಯ ಹೊಳೆಆಲೂರಿನ ಜ್ಞಾನಸಿಂಧು ವಸತಿ ಶಾಲೆಯ 75 ಅಂಧ ಮಕ್ಕಳ ಬದುಕನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದೆ. ನೆರೆ ಇಳಿದರೂ ಶಾಲೆಯ ಕೊಠಡಿಗಳ ತುಂಬಾ ಕೆಸರು ತುಂಬಿಕೊಂಡಿದೆ. ಮೊಣಕಾಲು ಮಟ್ಟದಲ್ಲಿ ನಿಂತಿರುವ ಕೆಸರನ್ನು ಸ್ವಚ್ಛಗೊಳಿಸಿ ಶಾಲೆ ಪುನರಾರಂಭಿಸಲು ಇನ್ನೂ ಕನಿಷ್ಠ ಎರಡು ವಾರಗಳಾದರೂ ಬೇಕಾಗುತ್ತದೆ.

ಪ್ರವಾಹ ಸಂಭವಿಸಿದ ಆ.7ರಂದು ಮಧ್ಯರಾತ್ರಿಯೇ, ಈ ಅಂಧ ಮಕ್ಕಳನ್ನು ಕರೆದುಕೊಂಡು ಶಾಲೆಯ ಮುಖ್ಯಸ್ಥ ಶಿವಾನಂದ ಕೇಲೂರ ಅವರು ಧಾರವಾಡಕ್ಕೆ ಹೋಗಿ ಅಲ್ಲಿನ ಕಲ್ಯಾಣ ಮಂಟಪವೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಈಗ ಪ್ರವಾಹ ಇಳಿದರೂ, ಅದರ ಆಘಾತದಿಂದ ಭಯಗೊಂಡಿರುವ ಈ ಮಕ್ಕಳು ಮತ್ತೆ ಮರಳಿ ಹೊಳೆಆಲೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಈ ಅಂಧ ಮಕ್ಕಳು ನಾಟ್ಯಯೋಗ ಮತ್ತು ಮಲ್ಲಗಂಬ ಪ್ರದರ್ಶನದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆದರೆ, ಪ್ರವಾಹದಿಂದ ಇವರ ಭವಿಷ್ಯಕ್ಕೆ ಕತ್ತಲು ಕವಿದಂತಾಗಿದೆ. ಮಲಪ್ರಭಾ ನದಿ ದಂಡೆಯಲ್ಲೇ ಈ ಶಾಲೆ ಇದ್ದು, ನೆರೆಯಿಂದ ಅಂದಾಜು ₹3.5 ಲಕ್ಷದಷ್ಟು ಹಾನಿಯಾಗಿದೆ.

ADVERTISEMENT

ಪ್ರವಾಸಕ್ಕೆ ಹೋಗುವುದಾಗಿ ಸ್ಥಳಾಂತರ: ‘ಪ್ರವಾಹ ಬಂದಿದೆ ಎಂದರೆ ಮಕ್ಕಳು ಭಯಪಡುತ್ತಾರೆಂದು, ಪ್ರವಾಸಕ್ಕೆ ಹೋಗುತ್ತಿರುವುದಾಗಿ ಸುಳ್ಳು ಹೇಳಿ ಮಕ್ಕಳನ್ನು ರಾತ್ರೋರಾತ್ರಿ ಕರೆತಂದೆವು. ಆದರೆ, ಹೊಳೆಆಲೂರಿನ ರೈಲು ನಿಲ್ದಾಣಕ್ಕೆ ಬಂದಾಗ ಅಲ್ಲಿ ಸಂತ್ರಸ್ತರ ದಂಡೇ ನೆರೆದಿತ್ತು. ಮಕ್ಕಳಿಗೆ ಏನೋ ಅಪಾಯ ಉಂಟಾಗಿದೆ ಎನ್ನುವುದರ ಸುಳಿವು ಲಭಿಸಿತು. ನಂತರ ಎಲ್ಲರಿಗೂ ಧೈರ್ಯ ತುಂಬಿ, ರೈಲಿನ ಮೂಲಕ ಧಾರವಾಡಕ್ಕೆ ಬಂದೆವು’ ಎಂದು ಅಂದಿನ ಘಟನೆಯನ್ನು ಶಿವಾನಂದ ಕೇಲೂರ ವಿವರಿಸಿದರು.

‘ಪ್ರವಾಹ ಬಂದ ಸಂದರ್ಭದಲ್ಲಿ ಜಿಲ್ಲೆಯಲ್ಲೇ ಸುರಕ್ಷಿತ ಸ್ಥಳದಲ್ಲಿ ಈ ಅಂಧ ಮಕ್ಕಳಿಗೆ ಆಶ್ರಯ ಒದಗಿಸಲು ಸಂಬಂಧಿಸಿದ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಂದಿಸಲಿಲ್ಲ. ಪ್ರವಾಹ ಇಳಿದ ನಂತರ ಕರೆ ಮಾಡಿ ಜಿಲ್ಲೆ ಬಿಟ್ಟು ಯಾಕೆ ಹೊರಗೆ ಹೋಗಿದ್ದೀರಿ ಎಂದು ವಿಚಾರಿಸಿದ್ದಾರೆ’ ಎಂದು ಶಿವಾನಂದ ದೂರಿದರು.

ಶಾಶ್ವತ ಸ್ಥಳಾಂತರಕ್ಕೆ ಯೋಜನೆ: ನದಿ ದಂಡೆಯಲ್ಲಿರುವ ಈ ಶಾಲೆಗೆ ಪ್ರತಿ ಮಳೆಗಾಲದಲ್ಲೂ ಪ್ರವಾಹ ಭೀತಿ ಇದ್ದದ್ದೇ. ಹೀಗಾಗಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಶಿವಾನಂದ ಯೋಚಿಸುತ್ತಿದ್ದಾರೆ. ‘ಹೊಳೆಆಲೂರಿನ ರೈಲು ನಿಲ್ದಾಣದ ಸಮೀಪ ಜಮೀನು ಖರೀದಿಸಿದ್ದೇನೆ. ಅಲ್ಲಿ ಹೊಸ ಕಟ್ಟಡ ಕಟ್ಟಿ ಶಾಲೆಯನ್ನು ಸ್ಥಳಾಂತರಿಸುವ ಯೋಜನೆ ಇದೆ. ದಾನಿಗಳು ಕೈಜೋಡಿಸಿದರೆ ಈ ಅಂಧ ಮಕ್ಕಳ ಬಾಳಲ್ಲಿ ಬೆಳಕು ಮೂಡುತ್ತದೆ’ ಎಂದು ಅವರು ಹೇಳಿದರು.

**

"ಶಾಲೆಗೆ ಮೂಲಸೌಕರ್ಯ ಇಲ್ಲದ್ದರಿಂದ ಇಲಾಖೆ ಮುಖ್ಯಸ್ಥರು ಅನುದಾನ ತಡೆ ಹಿಡಿದಿದ್ದರು. ಈ ಬಗ್ಗೆ ಮತ್ತೆ ಅನುದಾನ ಬಿಡುಗಡೆಗೆ ಇಲಾಖೆಗೆ ಪತ್ರ ಬರೆಯಲಾಗಿದೆ"

– ಆಶು ನದಾಫ, ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ

**

"ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿ ನಿರ್ಲಕ್ಷ್ಯ ಮಾಡಿದ್ದರಿಂದ, ಪ್ರವಾಹ ಸಂದರ್ಭದಲ್ಲಿ, ಈ ಅಂಧ ಮಕ್ಕಳನ್ನು ಸ್ಥಳಾಂತರ ಮಾಡಲು ಪಟ್ಟ ಪಾಡು ಅಷ್ಟಿಷ್ಟಲ್ಲ"

- ಪಡಿಯಪ್ಪ ಪೂಜಾರ, ಜಿಲ್ಲಾ ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.