ಲಕ್ಷ್ಮೇಶ್ವರ: ಪ್ರತಿ ನಗರ, ಪಟ್ಟಣಗಳಲ್ಲಿ ಜನರ ಓಡಾಟಕ್ಕೆ ಫುಟ್‍ಪಾತ್ ನಿರ್ಮಿಸುವುದು ಕಡ್ಡಾಯ. ಆದರೆ ಅಂಗಡಿಕಾರರು, ಬೀದಿಬದಿ ವ್ಯಾಪಾರಸ್ಥರು ಫುಟ್‍ಪಾತ್‍ನ್ನು ಅತಿಕ್ರಮಣ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುವುದು ನಿರಂತರವಾಗಿ ನಡೆದಿದೆ. ಸದ್ಯ ಇದೇ ಸಮಸ್ಯೆ ಲಕ್ಷ್ಮೇಶ್ವರ ಹಾಗೂ ತಾಲ್ಲೂಕಿನ ಜನತೆಯನ್ನು ಕಾಡುತ್ತಿದೆ.
ಪಟ್ಟಣದ ಬಜಾರ್ ರಸ್ತೆ ಫುಟ್‍ಪಾತ್ ಅತಿಕ್ರಮಣದಿಂದಾಗಿ ನರಳುತ್ತಿದೆ. ಕೆಲ ವರ್ಷಗಳ ಹಿಂದೆ ಪುರಸಭೆ ಪಟ್ಟಣದ ಶಿಗ್ಲಿ ಕ್ರಾಸ್‍ನಿಂದ ಬಜಾರ್‌ದಲ್ಲಿನ ಹಾವಳಿ ಹನುಮಪ್ಪನ ದೇವಸ್ಥಾನದ ಮೂಲಕ ದೂದಪೀರಾಂ ದರ್ಗಾವರೆಗಿನ ರಸ್ತೆಯನ್ನು ವಿಸ್ತರಣೆ ಮಾಡಿ ನಂತರ ಹೊಸ ರಸ್ತೆಯೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಶಿಗ್ಲಿ ಕ್ರಾಸ್‍ನಿಂದ ಹಾವಳಿ ಹನುಮಪ್ಪನ ದೇವಸ್ಥಾನದವರೆಗೆ ಫುಟ್‍ಪಾತ್ ನಿರ್ಮಿಸಿತ್ತು. ಆದರೆ, ಈಗ ಫುಟ್‍ಪಾತ್ ಎಂಬುದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಅದು ನೋಡಲು ಕಾಣುತ್ತದೆ. ಆದರೆ ಸಾರ್ವಜನಿಕರು ಸಂಚರಿಸಲು ಆಗುತ್ತಿಲ್ಲ. ಪುರಸಭೆ ನಿರ್ಮಿಸಿದ ಪಾದಚಾರಿ ಮಾರ್ಗದ ಎರಡೂ ಕಡೆ ಒತ್ತುವರಿ ಆಗಿರುವುದೇ ಇದಕ್ಕೆ ಪ್ರಮುಖ ಕಾರಣ.
ಪುರಸಭೆ ನಿರ್ಮಿಸಿರುವ ಫುಟ್‍ಪಾತ್ ಮೇಲೆ ಕೆಲ ಅಂಗಡಿಕಾರರು ವಿವಿಧ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ. ಕೆಲವರು ಉಪ್ಪಿನ ಚೀಲ ಇಟ್ಟಿದ್ದರೆ ಬಟ್ಟೆ ಅಂಗಡಿಯವರು ಗಾದಿಗಳ ರಾಶಿಯನ್ನೂ ಬಾಂಡೆ ಅಂಗಡಿಯವರು ಹಂಡೆ, ಗುಂಡಿಗಳನ್ನು ಅಂಗಡಿಯಿಂದ ಹೊರಗೆ ಅಂದರೆ ಫುಟ್‍ಪಾತ್ ಮೇಲೆ ಇಡುತ್ತಿರುವುದರಿಂದ ಪಾದಚಾರಿ ಮಾರ್ಗ ಕಾಣೆಯಾಗಿದ್ದು ಎಲ್ಲೂ ಖುಲ್ಲಾ ಇಲ್ಲ. ಹಾಗಾಗಿ ಜನರು ಬಜಾರದಲ್ಲಿ ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಕೆಲವು ಕಡೆ ಫುಟ್‍ಪಾತ್ ಮೇಲೆ ಬೀದಿಬದಿ ವ್ಯಾಪಾರಸ್ಥರು ಬಟ್ಟೆ, ಚಪ್ಪಲಿ, ಪ್ಲಾಸ್ಟಿಕ್, ಹೂ, ಹಣ್ಣು ಸೇರಿದಂತೆ ಬೇರೆ ಬೇರೆ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ಇದೂ ಸಹ ಫುಟ್‍ಪಾತ್ ಮುಚ್ಚಲು ಮತ್ತೊಂದು ಕಾರಣವಾಗಿದೆ. ಮತ್ತೆ ಕೆಲ ಬೀದಿಬದಿ ವ್ಯಾಪಾರಸ್ಥರು ಫುಟ್‍ಪಾತ್‍ನಿಂದ ಮುಂದೆ ಬಂದು ವ್ಯಾಪಾರ ಮಾಡುತ್ತಿರುವುದರಿಂದ ವಿಸ್ತರಣೆ ನಂತರವೂ ರಸ್ತೆ ಕೂಡ ಈಗ ಕಿರಿದಾಗಿದೆ.
ಲಕ್ಷ್ಮೇಶ್ವರದಲ್ಲಿ ಫುಟ್‍ಪಾತ್ ಎಂಬುದು ಕೇವಲ ನೆಪಕ್ಕೆ ಮಾತ್ರ ಎನ್ನುವ ಪರಿಸ್ಥಿತಿ ಇದೆ. ಪ್ರತಿ ಸೋಮವಾರ, ಶುಕ್ರವಾರ ಹಾಗೂ ಹಬ್ಬ ಹರಿ ದಿನಗಳಲ್ಲಿ ಬಜಾರದಲ್ಲಿ ಜನಸಂದಣಿಯೊಂದಿಗೆ ವಾಹನದಟ್ಟಣೆಯೂ ಹೆಚ್ಚಿರುತ್ತದೆ. ಈ ಸಮಯದಲ್ಲಿ ಜನರ ಸುಗಮ ಸಂಚಾರ ಕನಸಿನ ಮಾತು. ಅದೇ ಫುಟ್‍ಪಾತ್ ತೆರವು ಇದ್ದರೆ ಅವರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಫುಟ್‍ಪಾತ್ ಅತಿಕ್ರಮಣ ಆಗಿರುವುದರಿಂದ ಜನರು ರಸ್ತೆಯಲ್ಲಿ ಓಡಾಡುವುದು ಅನಿವಾರ್ಯವಾಗಿದೆ. ಹೀಗಾಗಿ ರಸ್ತೆ ವಾಹನಗಳ ದಟ್ಟಣೆಯೊಂದಿಗೆ ಜನರಿಂದ ತುಂಬಿರುತ್ತದೆ.
ಇದರೊಂದಿಗೆ ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ಬೈಕ್‍ಗಳನ್ನು ನಿಲ್ಲಿಸುತ್ತಾರೆ. ರಸ್ತೆಯಲ್ಲಿ ಓಡಾಡುವ ಜನರಿಗೆ ವಾಹನಗಳು ಡಿಕ್ಕಿಯಾಗಿ ಅಪಘಾತಗಳೂ ಸಂಭವಿಸುತ್ತಿವೆ. ಶಿಗ್ಲಿ ಕ್ರಾಸ್‍ನಿಂದ ಇತಿಹಾಸ ಪ್ರಸಿದ್ಧ ದೂದಪೀರಾಂ ದರ್ಗಾಕ್ಕೆ ಹೋಗಲು ಬಜಾರ ರಸ್ತೆ ಪ್ರಮುಖ ಮಾರ್ಗವಾಗಿದೆ. ಆದರೆ ಬಜಾರದಲ್ಲಿ ಯಾವಾಗಲೂ ಜನರೊಂದಿಗೆ ಹಾಗೂ ವಾಹನದಟ್ಟಣೆ ಇರುತ್ತದೆ. ಹೀಗಾಗಿ ದರ್ಗಾಕ್ಕೆ ತೆರಳುವ ವಾಹನ ಸವಾರರಿಗೆ ಇನ್ನಿಲ್ಲದ ಸಮಸ್ಯೆ ಆಗುತ್ತಿದೆ. ಫುಟ್‍ಪಾತ್ ಅತಿಕ್ರಮಣವೇ ಇಷ್ಟಕ್ಕೆಲ್ಲ ಕಾರಣ. ಸಾರ್ವಜನಿಕರು ತೊಂದರೆ ಪಡುತ್ತಿದ್ದರೂ ಸಹ ಪುರಸಭೆ ಮಾತ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ.
ಇನ್ನು ಲಕ್ಷ್ಮೇಶ್ವರ ವೇಗವಾಗಿ ಬೆಳೆಯುತ್ತಿದ್ದು ವಿವಿಧ ಕೆಲಸ ಕಾರ್ಯಗಳಿಗಾಗಿ ಪ್ರತಿದಿನ ತಾಲ್ಲೂಕಿನ ಹತ್ತಾರು ಹಳ್ಳಿಗಳಿಂದ ಸಾವಿರಾರು ಜನರು ಬಜಾರಕ್ಕೆ ಬಂದು ಹೋಗುತ್ತಾರೆ. ಆದರೆ ಫುಟ್‍ಪಾತ್ ಇಲ್ಲದ ಕಾರಣ ಅವರಿಗೂ ತೊಂದರೆ ಆಗುತ್ತಿದೆ. ಈಗಲಾದರೂ ಪುರಸಭೆ ಜನರಿಗೆ ಅನುಕೂಲವಾಗುವಂತೆ ಫುಟ್‍ಪಾತ್ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಜಾರದಲ್ಲಿ ಎಲ್ಲೆಲ್ಲಿ ಫುಟ್‍ಪಾತ್ ಅತಿಕ್ರಮಣ ಆಗಿದೆ ಎಂಬುದನ್ನು ಪರಿಶೀಲಿಸಿ ಆದಷ್ಟು ಬೇಗ ತೆರವುಗೊಳಿಸಲಾಗುವುದು. ಸಾರ್ವಜನಿಕರು ಯಾವುದೇ ಭಯ ಇಲ್ಲದೆ ಬಜಾರದಲ್ಲಿ ಓಡಾಡುವ ವಾತಾವರಣ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದುಮಹೇಶ ಹಡಪದ ಪುರಸಭೆ ಮುಖ್ಯಾಧಿಕಾರಿ
ಲಕ್ಷ್ಮೇಶ್ವರ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು ಮುಖ್ಯವಾಗಿ ಬಜಾರದಲ್ಲಿನ ಅಂಗಡಿಗಳ ಮುಂದೆ ಇರುವ ಫುತ್‍ಪಾತ್‍ನ್ನು ವ್ಯಾಪಾರಸ್ಥರು ಅತಿಕ್ರಮಣ ಮಾಡಿದ್ದಾರೆ. ವ್ಯವಹಾರಕ್ಕಾಗಿ ಬಜಾರಕ್ಕೆ ಬರುವ ಸಾರ್ವಜನಿಕರಿಗೆ ಇದರಿಂದಾಗಿ ಸಮಸ್ಯೆ ಆಗುತ್ತಿದೆ. ಆದಕಾರಣ ಫುಟ್‍ಪಾತ್ ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು
ಎಸ್.ಎಸ್.ವಡಕಣ್ಣವರ, ಸ್ಥಳೀಯ ನಿವಾಸಿ
ಶಿಗ್ಲಿ ಕ್ರಾಸ್‍ನಿಂದ ಬಜಾರ ಹಾವಳಿ ಹನುಮಪ್ಪನ ದೇವಸ್ಥಾನದವರೆಗೆ ರಸ್ತೆಯ ಎರಡೂ ಬದಿ ಇರುವ ಫುಟ್‍ಪಾತ್ ಅತಿಕ್ರಮಣಗೊಂಡಿದೆ. ಕೆಲ ಅಂಗಡಿಕಾರರು ವಿವಿಧ ವಸ್ತುಗಳನ್ನು ಫುಟ್‍ಪಾತ್ ಮೇಲೆಯೇ ಒಟ್ಟಿದ್ದಾರೆ. ಅವುಗಳನ್ನು ತೆರವು ಮಾಡಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು
ನಾಗರಾಜ ಚಿಂಚಲಿ, ಲಕ್ಷ್ಮೇಶ್ವರ
ಲಕ್ಷ್ಮೇಶ್ವರದ ಬಜಾರದಲ್ಲಿ ಪುರಸಭೆ ವತಿಯಿಂದ ನಿರ್ಮಿಸಿರುವ ಫುಟ್‍ಪಾತ್ ಅತಿಕ್ರಮಣ ಆಗಿದೆ.ಇದರಿಂದಾಗಿ ಜನರಿಗೆ ಪೇಟೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಅತಿಕ್ರಮಣ ಶೀಘ್ರ ತೆರವು ಮಾಡಬೇಕು
ಈಶ್ವರ ಕೋಷ್ಠಿ, ಲಕ್ಷ್ಮೇಶ್ವರ
ಲಕ್ಷ್ಮೇಶ್ವರದ ಬಜಾರದಲ್ಲಿ ನಿರ್ಮಿಸಿರುವ ಫುಟ್‍ಪಾತ್ ಎಲ್ಲೂ ಖುಲ್ಲಾ ಇಲ್ಲ. ಶುಕ್ರವಾರ ಮತ್ತು ಸೋಮವಾರ ಬಜಾರ ಜನರಿಂದ ತುಂಬಿರುತ್ತದೆ. ಆದರೆ ಫುಟ್‍ಪಾತ್ ಅತಿಕ್ರಮಣ ಆಗಿರುವುದರಿಂದ ಅವರಿಗೆ ತೊಂದರೆ ಆಗುತ್ತಿದೆ
ಬಿ.ಎಸ್. ಬಾಳೇಶ್ವರಮಠ, ವಕೀಲ, ಲಕ್ಷ್ಮೇಶ್ವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.