ADVERTISEMENT

ಮೋದಿ ಸುನಾಮಿಯಲ್ಲಿ ಕೊಚ್ಚಿ ಹೋದ ಕಾಂಗ್ರೆಸ್‌: ಶೆಟ್ಟರ್‌

ಗದಗ ವಿಧಾನಸಭಾ ಮತಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 16:28 IST
Last Updated 8 ಜೂನ್ 2019, 16:28 IST
ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಸದ ಶಿವಕುಮಾರ ಉದಾಸಿ ಅವರು ಗದುಗಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು
ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಸದ ಶಿವಕುಮಾರ ಉದಾಸಿ ಅವರು ಗದುಗಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು   

ಗದಗ: ‘ಮೋದಿ ಎಂಬ ಸುನಾಮಿಯಲ್ಲಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಗಿದೆ. ಸ್ವಾತಂತ್ರ್ಯ ಸಿಕ್ಕಾಗ ಗಾಂಧೀಜಿ ಹೇಳಿದಂತೆ ಕಾಂಗ್ರೆಸ್ಸಿಗರು ಗೌರವಯುತವಾಗಿ ಕಾಂಗ್ರೆಸ್ ಪಕ್ಷ ವಿಸರ್ಜಿಸಬೇಕು. ಪೂರ್ಣ ಪ್ರಮಾಣದಲ್ಲಿ ಕೊಚ್ಚಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ, ಜನರೇ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ವಿಸರ್ಜಿಸುತ್ತಾರೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಹಾವೇರಿ– ಗದಗ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಸದ ಶಿವಕುಮಾರ ಉದಾಸಿ ಅವರು ಶುಕ್ರವಾರ ಸಂಜೆ ಇಲ್ಲಿನ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ ಮತದಾರರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಲೋಕಸಭೆ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕಿದವರು ಅಕ್ಕ ಪಕ್ಕ ಕುಳಿತು ಮೈತ್ರಿ ಸರ್ಕಾರ ನಡೆಸುತ್ತಿದ್ದಾರೆ. ಇಂತಹ ಸರ್ಕಾರ ಬಹಳ ದಿನ ಇರುವುದಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‍ನವರು ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಶಿವಕುಮಾರ ಉದಾಸಿ ಜನಸಾಮಾನ್ಯರಿಗೆ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು. ಆದರೆ, ಜನ ನನ್ನನ್ನು ಕೈಬಿಡಲಿಲ್ಲ’ ಎಂದುಸಂಸದ ಶಿವಕುಮಾರ ಉದಾಸಿ ಹೇಳಿದರು.

‘ಗದಗ ಮತ್ತು ಹಾವೇರಿ ನಗರದಲ್ಲಿ ಫುಡ್ ಪಾರ್ಕ್ ನಿರ್ಮಿಸಲಾಗುವುದು. ಗದುಗಿನಲ್ಲಿ ಆಸ್ಸಾಂ ಮಾದರಿಯ ಸ್ಪೋರ್ಟ್ಸ್ ಸಿಟಿ ನಿರ್ಮಾಣಕ್ಕೆ ಚಿಂತನೆ, ಜತೆಗೆ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು’ ಎಂದರು.

‘ಕಾಂಗ್ರೆಸ್‍ ದುರಾಡಳಿತದಿಂದ ಅಪಮೌಲ್ಯಗೊಂಡಿದ್ದ ರಾಜಕಾರಣವನ್ನು ಮೋದಿ ಅವರು ಮರು ಸ್ಥಾಪನೆ ಮಾಡಿದ್ದಾರೆ’ ಎಂದುಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ. ಪಾಟೀಲ, ಶ್ರೀಪತಿ ಉಡುಪಿ, ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಮುಖಂಡ ಅನಿಲ ಮೆಣಸಿನಕಾಯಿ, ಶಹರ ಘಟಕದ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಕಾಂತಿಲಾಲ ಬನ್ಸಾಲಿ, ಶ್ರೀಕಾಂತ ಖಟವಟೆ, ವಿಜಯಕುಮಾರ ಗಡ್ಡಿ, ಡಾ. ಶೇಖರ ಸಜ್ಜನರ, ಈಶಣ್ಣ ಮುನವಳ್ಳಿ, ಎಂ.ಎಸ್. ಕರಿಗೌಡರ, ಎಸ್.ಟಿ. ಮೇಲಗಿರಿ, ಎಂ.ಎಂ. ಹಿರೇಮಠ, ಸಿದ್ದು ಪಲ್ಲೇದ, ಆನಂದ ಶೇಠ, ಪ್ರಕಾಶ ಬಾಕಳೆ, ಭದ್ರೇಶ ಕುಸ್ಲಾಪೂರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಶ್ವಿನಿ ಜಗತಾಪ, ಶಾರದಾ ಹಿರೇಮಠ, ಅನಿಲ ಅಬ್ಬಿಗೇರಿ ಇದ್ದರು.

ತೆರೆದ ವಾಹನದಲ್ಲಿ ಮೆರವಣಿಗೆ
ಗದಗ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಸದ ಶಿವಕುಮಾರ ಉದಾಸಿ ಅವರು ನಗರದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಇಲ್ಲಿನ ಒಕ್ಕಲಗೇರಿಯ ರಾಚೋಟೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಜುಮ್ಮಾ ಮಸೀದಿ, ಚವಡಿ ಕೂಟ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು.

ಮೆರವಣಿಗೆಯುದ್ದಕ್ಕೂ ಪಕ್ಷದ ಕಾರ್ಯಕರ್ತರು, ಯುವಕರು ಪರಸ್ಪರ ಬಣ್ಣ ಎರಚಿಕೊಂಡು, ಸಂಭ್ರಮಿಸುತ್ತ, ಪ್ರಧಾನಿ ಮೋದಿ ಹಾಗೂ ಸಂಸದ ಶಿವಕುಮಾರ ಉದಾಸಿ ಅವರ ಪರವಾದ ಘೋಷಣೆಗಳನ್ನು ಕೂಗಿದರು.

ಮೈತ್ರಿ ಸರ್ಕಾರ, ಕಂಪನಿಯೊಂದಿಗೆ ಡೀಲ್: ಆರೋಪ
‘ಮೈತ್ರಿ ಸರ್ಕಾರ ಹಾಗೂ ಜಿಂದಾಲ್ ಕಂಪನಿ ಮಧ್ಯೆ ಡೀಲ್ ನಡೆದಿದೆ. ಸಾಧ್ಯವಾದಷ್ಟು ಹಣವನ್ನು ಡೀಲ್ ಮೂಲಕ ತೆಗೆದುಕೊಂಡು ಮನೆಗೆ ಹೋಗಲು ಹುನ್ನಾರ ನಡೆಸಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್‌ ಆರೋಪಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೈತಿಕತೆ ಇದ್ದರೆ, ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.