ADVERTISEMENT

ಲಕ್ಷ್ಮೇಶ್ವರ: ವೀಳ್ಯದೆಲೆ ಕೃಷಿಯಲ್ಲಿ ಅರಳಿದ ಬದುಕು

ಕಳೆದ 25 ವರ್ಷಗಳಿಂದ ಕೃಷಿ: ಯುವರೈತರಿಗೆ ಮಾದರಿಯಾದ ನಾಗರಾಜ ಚಿಂಚಲಿ

ನಾಗರಾಜ ಎಸ್‌.ಹಣಗಿ
Published 11 ಆಗಸ್ಟ್ 2023, 6:36 IST
Last Updated 11 ಆಗಸ್ಟ್ 2023, 6:36 IST
ರೈತ ನಾಗರಾಜ ಚಿಂಚಲಿ ವೀಳ್ಯದೆಲೆ ಕೊಯ್ಯುತ್ತಿರುವುದು
ರೈತ ನಾಗರಾಜ ಚಿಂಚಲಿ ವೀಳ್ಯದೆಲೆ ಕೊಯ್ಯುತ್ತಿರುವುದು   

ಲಕ್ಷ್ಮೇಶ್ವರ: ಕಳೆದ 25 ವರ್ಷಗಳಿಂದ ಇಲ್ಲಿನ ರೈತ ನಾಗರಾಜ ಚಿಂಚಲಿ ಎಲೆಬಳ್ಳಿ ಕೃಷಿ ಮಾಡುತ್ತಿದ್ದು, ಉತ್ತಮ ಲಾಭ ಗಳಿಸುತ್ತಾ ಬೇರೆ ರೈತರಿಗೆ ಮಾದರಿಯಾಗಿದ್ದಾರೆ.

ಗ್ರಾಮದ ಬಸಣ್ಣ ಬೆಟಗೇರಿ ಅವರ ಒಂದು ಎಕರೆ ಹೊಲವನ್ನು ಲಾವಣಿ ಪಡೆದು, ಅದರಲ್ಲಿ ನಾಲ್ಕೂವರೆ ಸಾವಿರ ಎಲೆಬಳ್ಳಿ ಹಚ್ಚಿದ್ದು, ಕರಿ ವೀಳ್ಯದೆಲೆ ಬೆಳೆಯುತ್ತಿದ್ದಾರೆ. ಪೂಜೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಹಾಗೂ ಸಮಾರಂಭಗಳ ವೇಳೆ ಈ ವೀಳ್ಯದೆಲೆಗೆ ಬೇಡಿಕೆ ಹೆಚ್ಚು.

ತಾಂಬೂಲಕ್ಕೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವೀಳ್ಯದೆಲೆಯನ್ನು ಹೆಚ್ಚು ಬಳಸಲಾಗುತ್ತಿದ್ದು, ಹೀಗಾಗಿ ವರ್ಷದ ಹನ್ನೆರಡು ತಿಂಗಳೂ ಬೇಡಿಕೆ ಇರುತ್ತದೆ.

ADVERTISEMENT

ಒಮ್ಮೆ ನಾಟಿ ಮಾಡಿದ ಬಳ್ಳಿ 15ರಿಂದ 20 ವರ್ಷಗಳವರೆಗೆ ಇರಲಿದೆ. ಸದ್ಯ ಇವರ ತೋಟದಲ್ಲಿ 7ರಿಂದ 8 ವರ್ಷಗಳ ಹಿಂದಿನ ಬಳ್ಳಿ ಉತ್ತಮ ಫಲ ನೀಡುತ್ತಿದೆ. ಆದರೆ, ಕಳೆದ ವರ್ಷ ಸುರಿದ ಭಾರೀ ಮಳೆಗೆ ಎರಡು ಸಾವಿರ ಬಳ್ಳಿಗಳು ಸಂಪೂರ್ಣ ಕೊಳೆತು ನಾಶವಾಗಿದ್ದವು. ಹೀಗಾಗಿ ಮತ್ತೆ ₹80 ಸಾವಿರ ರೂಪಾಯಿ ಖರ್ಚು ಮಾಡಿ ಬಳ್ಳಿಗಳನ್ನು ನಾಟಿ ಮಾಡಿದ್ದಾರೆ.

‘ಎಲೆಬಳ್ಳಿ ನಾಟಿಗೆ ಜುಲೈ ಸೂಕ್ತ. ನಾಟಿ ಮಾಡುವ ಪೂರ್ವದಲ್ಲಿ ಬಳ್ಳಿ ಹಬ್ಬುವ ಸಲುವಾಗಿ ಆಸರೆಯಾಗಿ ಸಾಲಿನಿಂದ ಸಾಲಿಗೆ ಐದು ಅಡಿ ಅಂತರದಲ್ಲಿ ನುಗ್ಗೆ ಗಿಡಗಳನ್ನು ಬೆಳೆಸಬೇಕು. ನಂತರ ನುಗ್ಗೆ ಗಿಡಕ್ಕೊಂದರಂತೆ ಒಂದು ಅಡಿ ಎತ್ತರ ಬೆಳೆದ ಬಳ್ಳಿಯನ್ನು ನಾಟಿ ಮಾಡಬೇಕು. ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಕೇವಲ ಸಗಣಿ ಗೊಬ್ಬರ ಮಾತ್ರ ಬಳಸಿದರೆ ಬಳ್ಳಿ ಚೆನ್ನಾಗಿ ಬೆಳೆದು ಮೂರು ತಿಂಗಳಲ್ಲಿ ಫಸಲು ನೀಡುತ್ತದೆ ಎಂದು ರೈತ ನಾಗರಾಜ ಚಿಂಚಲಿ ಹೇಳಿದರು.

ಮುಂಗಾರು ಗಾಳಿ ಎಲೆಬಳ್ಳಿಗೆ ಮಾರಕ. ಈ ಗಾಳಿಗೆ ಎಲೆಬಳ್ಳಿಗಳು ಕತ್ತರಿಸಿ ಬೀಳುತ್ತವೆ. ಇದು ತೋಟಕ್ಕೆ ದೊಡ್ಡ ವೈರಿ ಇದ್ದಂತೆ. ಇದನ್ನು ಹೊರತು ಪಡಿಸಿದರೆ ಈ ಬೆಳೆಗೆ ಹೆಚ್ಚಿನ ರೋಗಬಾಧೆ ಇಲ್ಲ

ಸೊಗಸಾಗಿ ಬೆಳೆದ ಎಲೆಬಳ್ಳಿ ತೋಟ
‘ಲಾಭದಾಯಕ ಬೆಳೆ’
ತಿಂಗಳಿಗೊಮ್ಮೆ ವೀಳ್ಯದೆಲೆ ಕೊಯ್ಲಿಗೆ ಬರುತ್ತದೆ. 12 ಸಾವಿರ ಎಲೆಗಳಿಗೆ ಒಂದು ಕಟ್ಟು ಎಂಬುದು ಲೆಕ್ಕ. ಒಂದು ಬಾರಿ ಎಲೆ ಬಿಡಿಸಿದಾಗ 5ರಿಂದ 6 ಕಟ್ಟು ಇಳುವರಿ ಬರುತ್ತದೆ. ಎಲೆಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಸದ್ಯ ಒಂದು ಕಟ್ಟು ಎಲೆಗಳಿಗೆ ₹3000 ಬೆಲೆ ಇದೆ. ಇದು ಕೆಲವೊಮ್ಮೆ ₹8ರಿಂದ 10 ಸಾವಿರದವರೆಗೂ ತಲುಪುತ್ತದೆ. ವರ್ಷಕ್ಕೆ ಎರಡು ಲಕ್ಷಕ್ಕೂ ಅಧಿಕ ಲಾಭ ಗಳಿಸಬಹುದು’ ಎಂದು ರೈತ ನಾಗರಾಜ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.