
ಗದಗ: ‘ಏರ್ ಫ್ರೆಶ್ನರ್ ಸ್ಫೋಟಿಸಿ ಬಾಲಕಿಯ ಮುಖ ಸುಡುವಂತೆ ಮಾಡಿದ ಆರೋಪದ ಮೇಲೆ ಅಲ್ತಾಫ್ ಎಂಬುವನನ್ನು ಬಂಧಿಸಿ, ಕ್ರಮ ಕೈಗೊಳ್ಳಲಾಗಿದೆ’ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.
‘ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಮುಖ ಮತ್ತು ಎದೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಆದರೆ, ಅದು ಆ್ಯಸಿಡ್ ದಾಳಿಯಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಘಟನಾ ಸ್ಥಳದಲ್ಲಿ ಆ್ಯಸಿಡ್ ಅಂಶ ಕಂಡು ಬಂದಿಲ್ಲ. ಕಸ ಸುಟ್ಟಿರುವ ರಾಶಿ ಮಧ್ಯದಲ್ಲಿ ಏರ್ ಫ್ರೆಶ್ನರ್ ಕ್ಯಾನ್ ಇತ್ತು. ಬೆಂಕಿಯ ಶಾಖ ಮತ್ತು ಒತ್ತಡದಿಂದ ಕ್ಯಾನ್ ಸಿಡಿದಿದೆ. ತೊಂದರೆ ನೀಡಲೆಂದೇ ಆರೋಪಿಯು ಅಲ್ಲಿ ಏರ್ ಫ್ರೆಶ್ನರ್ ಇಟ್ಟಿದ್ದನೆಂದು ಬಾಲಕಿ ದೂರು ನೀಡಿದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.
‘ಎಲ್ಲರೂ ಅಕ್ಕಪಕ್ಕದ ಮನೆಯವರು. ಬಾಲಕಿಯನ್ನು ಚುಡಾಯಿಸಿದ್ದಕ್ಕೆ ಆಕೆಯ ತಾಯಿಯು ಆಸೀಫ್‌ಗೆ ಒಮ್ಮೆ ಎಚ್ಚರಿಕೆ ನೀಡಿದ್ದರಂತೆ. ತನಿಖೆ ಬಳಿಕ ಹೆಚ್ಚಿನ ವಿವರ ಗೊತ್ತಾಗಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.