ಗದಗ: ‘ಸರ್ಕಾರಗಳು ಮಾಡದ ಕೆಲಸವನ್ನು ಮಠ ಮಾನ್ಯಗಳು ಭಕ್ತರ ನೆರವಿನೊಂದಿಗೆ ಯಶಸ್ವಿಯಾಗಿ ಮಾಡುತ್ತಿವೆ. ಅನ್ನದಾನೇಶ್ವರ ಸಂಸ್ಥೆ ಸ್ವಾತಂತ್ರ್ಯ ಪೂರ್ವದಲ್ಲೇ ಶಿಕ್ಷಣಕ್ಕೆ ಒತ್ತು ನೀಡಿದ್ದು, ದೂರದೃಷ್ಟಿತ್ವಕ್ಕೆ ಸಾಕ್ಷಿಯಾಗಿದೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಹಾಲಕೆರೆ ಮಠದ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಆನಂದಾಶ್ರಮ ನೂತನ ಕಟ್ಟಡಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
‘ಅನ್ನದಾನೇಶ್ವರ ಮಠವು ಅನ್ನ, ಅರಿವು ಮತ್ತು ಆಶ್ರಯದ ಮೂಲಕ ಬಡ ಮಕ್ಕಳ ಭವಿಷ್ಯ ರೂಪಿಸುವ ಮಹೋನ್ನತ ಕಾರ್ಯ ನಿರ್ವಹಿಸುತ್ತಿದೆ. ಕಿವುಡ ಮತ್ತು ಮೂಕ ಮಕ್ಕಳಿಗೆ ಕೈಗಾರಿಕಾ ತರಬೇತಿ ಸಂಸ್ಥೆ ತೆರೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ. ಮಠಗಳ ಕೆಲಸಗಳನ್ನು ನೋಡಿ ನಾವು ಕಲಿಯುವುದು, ಅಳವಡಿಸಿಕೊಳ್ಳುವುದು ಸಾಕಷ್ಟು ಇದೆ’ ಎಂದು ಹೇಳಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘12ನೇ ಶತಮಾನದ ಬಸವಾದಿಶರಣರು ಹಾಗೂ ಅವರ ವಾರಸುದಾರರಾಗಿರುವ ವೀರಶೈವ ಲಿಂಗಾಯತ ಮಠಾಧೀಶರು ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಳ್ಳುವುದರ ಜೊತೆಗೆ ಅಕ್ಷರ, ಅನ್ನ, ಜ್ಞಾನ ದಾಸೋಹದ ಮೂಲಕ ಸಮಾಜದಲ್ಲಿನ ಮೇಲು-ಕೀಳು ತೊಡೆದು ಹಾಕಿದ್ದಾರೆ’ ಎಂದರು.
‘ಮನುಷ್ಯನಿಂದ ಮನುಷ್ಯನ ಶೋಷಣೆ, ಸಮಾಜದಲ್ಲಿ ಮೇಲು-ಕೀಳು, ಹುಟ್ಟಿನಿಂದ ಇರುವ ಕಳಂಕವನ್ನು ತೊಡೆದುಹಾಕಲು ಬಸವಣ್ಣನವರು ವರ್ಗರಹಿತ, ಶೋಷಣೆ ಮುಕ್ತ ಸಮಾಜಕ್ಕಾಗಿ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು. ಬಸವತತ್ವದಿಂದ, ಬಸವಣ್ಣನವರ ಸಂದೇಶದಿಂದ ಲಿಂಗಬೇಧವಿಲ್ಲದ, ಶೋಷಣೆಮುಕ್ತ ಸಮಾಜ ನಿರ್ಮಾಣ ಸಾಧ್ಯ’ ಎಂದು ತಿಳಿಸಿದರು.
ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಹತ್ತಾರು ವರ್ಷಗಳಲ್ಲಿ ಮಾಡಬೇಕಾದ ಕಾರ್ಯವನ್ನು ಮುಪ್ಪಿನ ಬಸವಲಿಂಗ ಶ್ರೀಗಳು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಿದ್ದು ಅವರ ಶಿಕ್ಷಣದ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಮೂಲಕ ಗುರುಗಳ ಮಾರ್ಗದರ್ಶನವನ್ನು ಸಾರ್ಥಕಗೊಳಿಸಿದ್ದಾರೆ’ ಎಂದರು.
ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ‘ಮಠದ ಭಕ್ತರು ಹಾಗೂ ಸಂಸ್ಥೆಯ ಸಿಬ್ಬಂದಿ ತಮ್ಮ ಕುಟುಂಬವನ್ನೇ ಮರೆತು ಸಂಸ್ಥೆಯ ಶ್ರೇಯೋಭಿವೃದ್ಧಿಗೋಸ್ಕರ ದುಡಿದ ಪರಿಣಾಮವೇ ಇಂದು ನಗರದಲ್ಲಿ ಶಿಕ್ಷಣ ಸಂಸ್ಥೆ ನಿರ್ಮಾಣವಾಗಲು ಸಾಧ್ಯವಾಗಿದೆ’ ಎಂದು ಹೇಳಿದರು.
ಸುತ್ತೂರು ಸಂಸ್ಥಾನಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ಮಹಾವಿದ್ಯಾಲಯವನ್ನು ಉದ್ಘಾಟಿಸಿದರು. ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಆನಂದಾಶ್ರಮ ಕಟ್ಟಡವನ್ನು ಉದ್ಘಾಟಿಸಿದರು.
ನಂದವಾಡಗಿ ಹಿರೇಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸಂತೆಕೆಲೂರ ಘನಮಠೇಶ್ವರಮಠದ ಗುರುಬಸವ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ ನೇತೃತ್ವ ವಹಿಸಿದ್ದರು.
ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ, ಉಮೇಶಗೌಡ ಪಾಟೀಲ, ಸಿದ್ದು ಪಾಟೀಲ, ಸೇರಿದಂತೆ ಹಾಲಕೆರೆಯ ಶಾಖಾಮಠಗಳ ಭಕ್ತರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಇದ್ದರು.
ಪ್ರಾಚಾರ್ಯ ವೈ.ಸಿ. ಪಾಟೀಲ ಸ್ವಾಗತಿಸಿದರು. ಎಸ್.ಎನ್. ಹೂಲಗೇರಿ ಮತ್ತು ಎಫ್.ಎನ್. ಹುಡೇದ ನಿರೂಪಿಸಿದರು.
ಶಿಕ್ಷಣ ಕೇತ್ರಕ್ಕೆ ಗಡಿ ಇಲ್ಲ. ಶಿಕ್ಷಣ ಸಚಿವನಾಗಿ ಜಾತಿ ಧರ್ಮ ಪ್ರಾಂತ್ಯಕ್ಕೆ ನಾನು ಸೀಮಿತಗೊಳ್ಳುವುದಿಲ್ಲ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆ.– ಮಧು ಬಂಗಾರಪ್ಪ, ಶಿಕ್ಷಣ ಸಚಿವ
ಶಾಲಾ–ಕಾಲೇಜುಗಳು ಕೇವಲ ವಿದ್ಯಾಭ್ಯಾಸ ನೀಡುವುದಲ್ಲ. ಮೌಲ್ಯಯುತ ಸಂಸ್ಕಾರಯುತ ಸುಸಂಸ್ಕೃತ ಶಿಕ್ಷಣ ನೀಡುವ ಮಹತ್ವದ ಉದ್ದೇಶ ಹೊಂದಿರಬೇಕು.– ಮುಪ್ಪಿನ ಬಸವಲಿಂಗ ಸ್ವಾಮೀಜಿ, ಅನ್ನದಾನೇಶ್ವರ ಮಠ ನರೇಗಲ್
ಹಣ ಆಸ್ತಿ ಎಲ್ಲವೂ ನಶ್ವರ. ಶಾಶ್ವತವಾಗಿ ಉಳಿಯುವ ಏಕೈಕ ಸಂಪತ್ತು ಜ್ಞಾನ. ರಾಜ್ಯದ ಅನೇಕ ಮಹನೀಯರು ಮಠಗಳಲ್ಲಿಯೇ ವಿದ್ಯಾಭ್ಯಾಸ ಪಡೆದು ತಮ್ಮ ಬದುಕು ರೂಪಿಸಿಕೊಂಡಿದ್ದಾರೆ.– ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು
‘ಶಿಕ್ಷಕರ ನೇಮಕಾತಿ ಬೇಗ ನಡೆಯಲಿ’
‘ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವೇಗ ಪಡೆಯಬೇಕು’ ಎಂದು ಶಾಸಕ ಜಿ.ಎಸ್.ಪಾಟೀಲ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದರು. ‘ಉತ್ತರ ಕರ್ನಾಟಕದಲ್ಲಿ ಶತಮಾನಗಳಿಂದಲೇ ಶಿಕ್ಷಣ ಸಂಸ್ಥೆಗಳು ಭಕ್ತರ ಸಹಕಾರದಲ್ಲಿ ಬೆಳೆಯುತ್ತಾ ಬಂದಿವೆ. ಅನೇಕ ಶಿಕ್ಷಕರು ನಿವೃತ್ತಿ ಹೊಂದಿರುವುದರಿಂದ ಹುದ್ದೆಗಳು ಖಾಲಿ ಇದ್ದರೂ ಗುಣಮಟ್ಟ ಕುಸಿಯದಂತೆ ಮಠಗಳು ಸ್ವತಃ ಸಂಬಳ ನೀಡಿ ಸಂಸ್ಥೆ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.
ದೇಶಕ್ಕೆ ಒಂದೇ ಶಿಕ್ಷಣ ನೀತಿ ಇರಲಿ: ಕಾರಜೋಳ
‘ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವಿದ್ದರೆ ರಾಜ್ಯ ಶಿಕ್ಷಣ ನೀತಿಯಲ್ಲಿ ದ್ವಿಭಾಷಾ ಸೂತ್ರ ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿ ಶಿಕ್ಷಣ ನೀತಿ ದ್ವಂದ್ವದಲ್ಲಿದ್ದು ರಾಷ್ಟ್ರ ಹಾಗೂ ರಾಜ್ಯ ಶಿಕ್ಷಣ ನೀತಿ ಬೇರೆ ಬೇರೆಯಾಗಿದ್ದರೆ ಬಡವರ ಮಕ್ಕಳಿಗೆ ಅನ್ಯಾಯವಾಗುತ್ತದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
‘ದೇಶದ ವಿವಿಧ ರಾಜ್ಯಗಳಲ್ಲಿ ಪ್ರಪಂಚದ ನೂರಾರು ದೇಶಗಳಲ್ಲಿ ಪೈಪೋಟಿಗೆ ಮಕ್ಕಳು ತಯಾರಾಗುವಂತಾಗಲು ದೇಶದಲ್ಲಿ ಒಂದೇ ಶಿಕ್ಷಣ ನೀತಿ ಜಾರಿಯಾಗಬೇಕು. ಮಾಜಿ ಸಿ.ಎಂ ಬಂಗಾರಪ್ಪ ಅವರಿಗಿದ್ದ ಸಾಮಾಜಿಕ ಕಳಕಳಿಯನ್ನು ನೀವು ಮುಂದುವರಿಸಿಕೊಂಡು ಹೋಗಬೇಕಾದರೆ ರಾಜ್ಯದಲ್ಲೂ ಕೇಂದ್ರ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.