ADVERTISEMENT

ಗಳಲೆ ರೋಗ: ಗದಗದ ಬಿಂಕದಕಟ್ಟಿ ಮೃಗಾಲಯದಲ್ಲಿ ಮುನ್ನೆಚ್ಚರಿಕೆ

ಎಚ್‌ಎಸ್‌ ಸೋಂಕಿನಿಂದ ನೀಲ್‌ಗಾಯ್‌ ಸಾವು; ತಜ್ಞರ ಸಲಹೆಯಂತೆ ಸಸ್ಯಾಹಾರಿ ಪ್ರಾಣಿಗಳ ಆವರಣಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 6:38 IST
Last Updated 9 ಫೆಬ್ರುವರಿ 2026, 6:38 IST
ಗದಗ ತಾಲ್ಲೂಕಿನ ಬಿಂಕದಕಟ್ಟಿ ಮೃಗಾಲಯದ ಸಸ್ಯಾಹಾರಿ ಪ್ರಾಣಿಗಳ ವಿಭಾಗಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ
ಗದಗ ತಾಲ್ಲೂಕಿನ ಬಿಂಕದಕಟ್ಟಿ ಮೃಗಾಲಯದ ಸಸ್ಯಾಹಾರಿ ಪ್ರಾಣಿಗಳ ವಿಭಾಗಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ   

ಗದಗ: ಇಲ್ಲಿನ ಬಿಂಕದಕಟ್ಟಿ ಮೃಗಾಲಯದ ನೀಲ್‌ಗಾಯ್‌ ಪ್ರಾಣಿ ಹೆಮರಾಜಿಕ್ ಸೆಪ್ಟಿಸೆಮಿಯಾ (ಗಳಲೆ ರೋಗ) ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಇತರೆ ಪ್ರಾಣಿಗಳ ಆರೋಗ್ಯ ರಕ್ಷಣೆಗಾಗಿ ಮೃಗಾಲಯದ ಆಡಳಿತವು ಬಿಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಮೂರೂವರೆ ವರ್ಷದ ನೀಲ್‌ಗಾಯ್‌ ಫೆ.3ರಂದು ಮೃತಪಟ್ಟಿತ್ತು. ಶವಪರೀಕ್ಷೆ 4ರಂದು ನಡೆದಿದ್ದು, 7ರಂದು ವರದಿ ಬಂದಿದೆ. ನೀಲ್‌ಗಾಯ್‌ ಸಾವಿಗೆ ಎಚ್‌.ಎಸ್‌ ಸೋಂಕು ಕಾರಣ ಎಂಬುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.

ನೀಲ್‌ಗಾಯ್‌ ಮೃತಪಟ್ಟ ಬೆನ್ನಲ್ಲೆ, 4ರಂದು ಬಿಂಕದಕಟ್ಟಿ ಮೃಗಾಲಯದಲ್ಲಿ ಧಾರವಾಡ ವೃತ್ತದ ಸಿಸಿಎಫ್‌ ಮತ್ತು ಗದಗ ಡಿಎಫ್‌ಒ ನೇತೃತ್ವದಲ್ಲಿ ಪಶುವೈದ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಪಾಲಿಕ್ಲಿನಿಕ್‌ ತಜ್ಞರ ಜತೆಗೆ ತುರ್ತು ಆರೋಗ್ಯ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಚರ್ಚೆಯಾದಂತೆ, ಮೃಗಾಲಯದಲ್ಲಿರುವ ಚುಕ್ಕೆ ಜಿಂಕೆ, ಕಡವೆ, ಕೃಷ್ಣಮೃಗ ಮತ್ತು ನೀಲ್‌ಗಾಯ್‌ ಪ್ರಾಣಿಗಳ ವಿಭಾಗದ ಪ್ರವೇಶವನ್ನು ಒಂದು ವಾರದವರೆಗೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಆತಂಕದ ಪರಿಸ್ಥಿತಿ ಮುಂದುವರಿದಲ್ಲಿ, ಅದನ್ನು 21 ದಿನಗಳವರೆಗೆ ವಿಸ್ತರಿಸಲು ಮೃಗಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.

ADVERTISEMENT

ಸದ್ಯಕ್ಕೆ ಆತಂಕದ ಪರಿಸ್ಥಿತಿ ಇಲ್ಲ: ‘ನೀಲ್‌ಗಾಯ್‌ ಮೃತಪಟ್ಟ ಕಾರಣ ಮೃಗಾಲಯದಲ್ಲಿನ ಇತರೆ ಸಸ್ಯಾಹಾರಿ ಪ್ರಾಣಿಗಳ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಸದ್ಯಕ್ಕೆ ಆತಂಕದ ಪರಿಸ್ಥಿತಿ ಇಲ್ಲ’ ಎಂದು ಮೃಗಾಲಯದ ಆರ್‌ಎಫ್‌ಒ ಸ್ನೇಹಾ ಕೊಪ್ಪಳ ತಿಳಿಸಿದ್ದಾರೆ.

‘ಎಚ್.ಎಸ್‌ ಸೋಂಕು ವೇಗವಾಗಿ ಹರಡುತ್ತದೆ. ಸಾಮಾನ್ಯವಾಗಿ 24ರಿಂದ 48 ಗಂಟೆಯೊಳಗೆ ಇತರೆ ಪ್ರಾಣಿಗಳಲ್ಲೂ ಅದರ ಪರಿಣಾಮ ಕಾಣಿಸಿಕೊಳ್ಳುತ್ತದೆ. ಆದರೆ, ನೀಲ್‌ಗಾಯ್‌ ಸತ್ತು ಕೆಲ ದಿನಗಳಾದರೂ ಎಚ್‌.ಎಸ್‌ ಸೋಂಕಿನ ಲಕ್ಷಣಗಳು ಇತರೆ ಪ್ರಾಣಿಗಳಲ್ಲಿ ಗೋಚರಿಸಿಲ್ಲ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಮೃಗಾಲಯದ ಸಿಬ್ಬಂದಿ ಹಾಗೂ ಇಲ್ಲಿಗೆ ಬರುವ ಪ್ರವಾಸಿಗರ ಮನೆಗಳಲ್ಲಿ ಸಾಕು ಪ್ರಾಣಿಗಳಿದ್ದರೆ ಅಲ್ಲಿಂದಲೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಪ್ರಾಣಿ ಪಾಲಕರಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ. 

ಗ್ರೀನ್‌ಶೇಡ್‌ ನೆಟ್‌ಗಳನ್ನು ಅಳವಡಿಸಿ, ಸೋಂಕು ನಿವಾರಕ ದ್ರಾವಣಗಳನ್ನು ಸಿಂಪಡಿಸಲಾಗಿದೆ. ಈ ಕುರಿತು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಫಲಕಗಳನ್ನು ಅಳವಡಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆ ಬಿಗಿಗೊಳಿಸಲಾಗಿದೆ. 

ಸ್ನೇಹಾ ಕೊಪ್ಪಳ
ಎಚ್‌.ಎಸ್‌ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಬಿಂಕದಕಟ್ಟಿ ಮೃಗಾಲಯದಲ್ಲಿನ ಕೆಲ ವಿಭಾಗದ ಪ್ರವೇಶವನ್ನು ಪ್ರವಾಸಿಗರಿಗೆ ಒಂದು ವಾರ ನಿರ್ಬಂಧಿಸಲಾಗಿದೆ.
ಪ್ರವಾಸಿಗರು ಸಹಕಾರ ನೀಡಿದ್ದಾರೆ ಸ್ನೇಹಾ ಕೊಪ್ಪಳ ಮೃಗಾಲಯದ ಆರ್‌ಎಫ್‌ಒ

ಮುನ್ನೆಚ್ಚರಿಕಾ ಕ್ರಮ ಏನೇನು?

* ಪ್ರಾಣಿ ಮನೆ ಆವರಣದಲ್ಲಿ ಸ್ವಚ್ಛತೆಗೆ ಕ್ರಮ

* ಮೃಗಾಲಯದ ವೀಕ್ಷಕರ ಪಥಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ

* ಪ್ರತಿ ಪ್ರಾಣಿಗಳಿಗೂ ಪ್ರಾಣಿಪಾಲಕರ ಕಣ್ಗಾಗಲು.

* ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ಚಿಕಿತ್ಸಾ ಸೌಲಭ್ಯ

* ಪ್ರಾಣಿಗಳಿಗೆ ಸ್ವಚ್ಛ ಆಹಾರ ನೀರು ಪೂರೈಕೆಗೆ ಕ್ರಮ 

* ಆಹಾರದ ಜತೆಗೆ ಪೋಷಕಾಂಶಗಳು ನೀರಿನ ಜತೆಗೆ ಇಲೆಕ್ಟ್ರೋಲೈಟ್‌ ಒದಗಿಸಲು ಕ್ರಮ

ವೈದ್ಯರಿಂದ ವಿಶೇಷ ನಿಗಾ

ಮೃಗಾಲಯದ ಪ್ರಾಣಿ ವೈದ್ಯರು ಮತ್ತು ಬೆಂಗಳೂರಿನ ತಜ್ಞ ವೈದ್ಯ ಪ್ರಯಾಗ್‌ ಅವರು ಮೃಗಾಲಯದಲ್ಲೇ ಉಳಿದು ಪ್ರಾಣಿಗಳ ಆರೋಗ್ಯ ಕಾಳಜಿ ಮಾಡುತ್ತಿದ್ದಾರೆ. ಅವುಗಳಿಗೆ ಪ್ರತಿರೋಧಕಗಳ ಔಷಧ ಮತ್ತು ಸಪ್ಲಿಮೆಂಟ್‌ಗಳನ್ನು ಸೇರಿಸಿದ ಆಹಾರದ ಪೂರೈಕೆ ಮಾಡಲಾಗುತ್ತಿದೆ. ಫೆ.4ರಿಂದಲೇ ಔಷಧೋಪಚಾರ ಆರಂಭಗೊಂಡಿರುವುದರಿಂದ ಈವರೆಗೆ ಬೇರೆ ಪ್ರಾಣಿಗಳ ಜೀವಕ್ಕೆ ಅಪಾಯ ಎದುರಾಗಿಲ್ಲ. ಇಲ್ಲಿನ ಪ್ರಾಣಿಗಳ ಆರೋಗ್ಯ ಸ್ಥಿತಿಗತಿ ಕುರಿತು ಮೃಗಾಲಯದ ಅಧಿಕಾರಿಗಳು ಒಂದು ತಾಸಿಗೊಮ್ಮೆ ಪೌಷ್ಟಿಕ ತಜ್ಞರು ವೈದ್ಯರ ಜತೆಗೆ ಹಂಚಿಕೊಂಡು ಅವರ ಸಲಹೆಯಂತೆ ಉಪಚಾರ ಮುಂದುವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.