ADVERTISEMENT

ಹುಲಕೋಟಿಗೆ ಪ್ರತಿದಿನ ನೀರು, ಇಲ್ಲಿಗ್ಯಾಕಿಲ್ಲ: ಬಿಜೆಪಿ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:49 IST
Last Updated 23 ಜುಲೈ 2025, 2:49 IST
ಗದಗ ಬೆಟಗೇರಿ ಅವಳಿ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಬಿಜೆಪಿ ಗದಗ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರಸಭೆ ಎದುರು ಬೃಹತ್‌ ಪ್ರತಿಭಟನೆ ನಡೆಯಿತು
ಗದಗ ಬೆಟಗೇರಿ ಅವಳಿ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಬಿಜೆಪಿ ಗದಗ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರಸಭೆ ಎದುರು ಬೃಹತ್‌ ಪ್ರತಿಭಟನೆ ನಡೆಯಿತು   

ಗದಗ: ಅವಳಿ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಬಿಜೆಪಿ ಗದಗ ಜಿಲ್ಲಾ ಘಟಕದ ಸದಸ್ಯರು, ಕಾರ್ಯಕರ್ತರು ಹಾಗೂ ನಗರಸಭೆ ಸದಸ್ಯರು ಮಂಗಳವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು. ನಗರಸಭೆ ಗೇಟ್‌ಗೆ ಬೀಡ ಜಡಿದು ಆಕ್ರೋಶ ವ್ಯಕ್ತಪಡಿಸಿದರು. ನೀರಿನ ವಿಚಾರಕ್ಕಾಗಿ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿ ಮತ್ತು ಪೊಲೀಸರ ಜತೆಗೆ ತಿಕ್ಕಾಟ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಿಂದ ನಗರಸಭೆ ಕಚೇರಿವರೆಗೆ ಖಾಲಿ ಕೊಡ ಹಿಡಿದು ಬಂದ ಪ್ರತಿಭಟನಕಾರರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ವಿರುದ್ಧ ಘೋಷಣೆ ಕೂಗಿದರು. 40 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಎಚ್‌.ಕೆ.ಪಾಟೀಲ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಬಾಯಿ ಬಾಯಿ ಬಡೆದುಕೊಂಡು, ಖಾಲಿ ಕೊಡ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಅವರು, ಪ್ರತಿಭಟನಕಾರರ ಜತೆಗೆ ಮಾತನಾಡಲು ಪ್ರಯತ್ನಿಸಿದರು. ಸಭೆ ನಡೆಸಿ ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ವೇಳೆ ನಗರಸಭೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿರುವ ನೀರಿನ ಸಮಸ್ಯೆ ಬಗ್ಗೆ ಅಲವತ್ತುಕೊಂಡರು. 

ADVERTISEMENT

ಬಿಗಿ ಬಂದೋಬಸ್ತ್‌:

ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ನಗರಸಭೆ ಸುತ್ತ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.

ಮೂವರು ಡಿವೈಎಸ್‌ಪಿ, ನಾಲ್ವರು ಸಿಪಿಐ, 10 ಮಂದಿ ಪಿಎಸ್‌ಐ ಸೇರಿದಂತೆ ಐವತ್ತಕ್ಕೂ ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಚಂದ್ರು ತಡಸದ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮಿ ದಿಂಡೂರ, ಮುಖಂಡರಾದ ಎಂ.ಎಂ.ಹಿರೇಮಠ, ಸುಧೀರ ಕಾಟಿಗೇರ, ಅನಿಲ ಅಬ್ಬಿಗೇರಿ ಸೇರಿ ಮುಖಂಡರು ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಸದಸ್ಯರು ಖಾಲಿ ಕೊಡ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು 

‘ಯು ಕಾಂಟ್‌ ಡಿಕ್ಟೇಟ್‌ ಮೀ’

‘ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಭೆ ನಡೆಸಿ ಚರ್ಚಿಸೋಣ. ಐದು ಮಂದಿ ಮುಖಂಡರು ಬನ್ನಿ’ ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಶ್ರೀಧರ್‌ ಅವರು ಪ್ರತಿಭಟನಕಾರರಿಗೆ ತಿಳಿಸಿದರು. ಆಗ ಬಿಜೆಪಿ ಮುಖಂಡರು ಹಾಗೂ ಸದಸ್ಯರು ‘ಬರೀ ಐದು ಜನರು ಬೇಡ. ನಗರಸಭೆಯ ಬಿಜೆಪಿಯ ಸದಸ್ಯರನ್ನೆಲ್ಲಾ ಸೇರಿಸಿಕೊಂಡು ಸಭೆ ನಡೆಸಿ’ ಎಂದು ಆಗ್ರಹಿಸಿದರು. ಆಗ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ‘ಯು ಕಾಂಟ್‌ ಡಿಕ್ಟೇಟ್‌ ಮೀ’ ಎಂದು ಸಿಟ್ಟಾದರು. ಆಗ ಪ್ರತಿಭಟನಕಾರರು ‘ಪ್ರಜಾಪ್ರಭುತ್ವ ಸರ್‌ ಇದು. ನೀವು ಹೇಳಿದಂತೆ ಕೇಳೋದಲ್ಲ. ನಾವು ಡಿಕ್ಟೇಟರ್ಸ್‌ ಅಲ್ಲ; ಸಾರ್ವಜನಿಕರ ಪ್ರತಿನಿಧಿಗಳು. ನೀರಿನ ಸಮಸ್ಯೆ ಕೇಳಲು ಬಂದರೆ ಭೇಟಿಯಾಗುವುದಿಲ್ಲ. ಸದಸ್ಯರ ಸಮಸ್ಯೆ ಕೇಳೋರಿಲ್ಲ’ ಎಂದು ಜಿಲ್ಲಾಧಿಕಾರಿ ಜತೆಗೆ ವಾಗ್ವಾದಕ್ಕಿಳಿದರು.  ಈ ವೇಳೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಬಿಜೆಪಿ ಮುಖಂಡರನ್ನು ಸಮಾಧಾನಪಡಿಸಿದರು.

ಮಳೆಗಾಲದಲ್ಲೂ ನೀರಿಗೆ ತತ್ವಾರ: ಸಂಕನೂರ ಕಿಡಿ 

ಅವಳಿ ನಗರದಲ್ಲಿ ಮಳೆಗಾಲದಲ್ಲೂ ನೀರಿನ ಅಭಾವ ಎದುರಾಗಿದೆ. 15–20 ದಿನಕ್ಕೊಮ್ಮೆ ನೀರು ಬರುತ್ತಿದೆ. ಹಮ್ಮಿಗಿ ಜಾಕ್‌ವೆಲ್‌ನಿಂದ 46 ಕಿ.ಮೀ.ವರೆಗಿನ ಪೈಪ್‌ಲೈನ್‌ನಲ್ಲಿರುವ ಅವ್ಯವಸ್ಥೆಯೇ ಇದಕ್ಕೆ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ ಹೇಳಿದರು. ನೀರು ಸರಬರಾಜು ಮಾಡಲು ಕಳಪೆ ಪೈಪ್‌ಗಳನ್ನು ಅಳವಡಿಸಿರುವುದರಿಂದ ಪದೇ ಪದೇ ಒಡೆಯುತ್ತಿವೆ. ಸಚಿವ ಎಚ್‌.ಕೆ.ಪಾಟೀಲರು ಹುಲಕೋಟಿಗೆ ನೀರು ಕೊಡುವಷ್ಟೇ ಕಾಳಜಿಯನ್ನು ಗದಗ ನಗರದತ್ತಲೂ ತೋರಬೇಕು ಎಂದು ಆಗ್ರಹಿಸಿದರು. ನಗರಸಭೆಗೆ ಸೇರಿದ 56 ಕೊಳವೆಬಾವಿಗಳು ಕೆಟ್ಟಿವೆ. ಅವುಗಳನ್ನು ರಿಪೇರಿ ಮಾಡಿಲು ತ್ವರಿತ ಕ್ರಮವಹಿಸಬೇಕು. ನೀರಿನ ಪರಿಸ್ಥಿತಿ ಬಗೆಹರಿಸಲು ಏನು ಕ್ರಮಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸಂಪೂರ್ಣ ರಿಪೇರಿಯಾದರೆ ಕನಿಷ್ಠ ವಾರಕ್ಕೊಮ್ಮೆ ನೀರು ಕೊಡುವ ವ್ಯವಸ್ಥೆ ಆಗಲಿದೆ. ದೀಪಾವಳಿ ವೇಳೆಗೆ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಸುವುದಾಗಿ ಡಿಸಿ ತಿಳಿಸಿದ್ದಾರೆ ಎಂದು ಹೇಳಿದರು.

ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಚಿವ ಎಚ್‌.ಕೆ.ಪಾಟೀಲ ಅವರು ಈಗಲಾದರೂ ಗಂಭೀರ ಕ್ರಮವಹಿಸಬೇಕು. ಇಲ್ಲವಾದರೆ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯಲಿವೆ.
ಎಸ್‌.ವಿ.ಸಂಕನೂರ, ವಿಧಾನ ಪರಿಷತ್‌ ಸದಸ್ಯ
ಹುಲಕೋಟಿ ಕುರ್ತಕೋಟಿ ಬಿಂಕದಕಟ್ಟಿಯಲ್ಲಿ ಪ್ರತಿದಿನ ನೀರು ಬರುತ್ತದೆ. ಆದರೆ ಅವಳಿ ನಗರದಲ್ಲಿ ನೀರಿಲ್ಲ. ಸಚಿವ ಎಚ್‌.ಕೆ.ಪಾಟೀಲ ಮಲತಾಯಿ ಧೋರಣೆ ಅನುಸರಿಸುವುದರ ಜತೆಗೆ ಗದುಗಿಗೆ ನೀರು ಕೊಡಲು ವಿಫಲರಾಗಿದ್ದಾರೆ.
–ವಿಜಯಲಕ್ಷ್ಮಿ ಮಾನ್ವಿ, ಬಿಜೆಪಿ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.