ADVERTISEMENT

ಕೊತಬಾಳ | ವಾರಸಾ ನೋಂದಣಿಯಾಗದಿದ್ದರೆ ಸಮಸ್ಯೆ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:36 IST
Last Updated 10 ಜುಲೈ 2025, 4:36 IST
ಇ-ಪೋತಿ ಹಾಗು ವಾರಸಾ ಆಂದೋಲನಕ್ಕೆ ಕೊತಬಾಳ ಗ್ರಾಮದಲ್ಲಿ ಚಾಲನೆ ನೀಡಿ ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಮಾತನಾಡಿದರು
ಇ-ಪೋತಿ ಹಾಗು ವಾರಸಾ ಆಂದೋಲನಕ್ಕೆ ಕೊತಬಾಳ ಗ್ರಾಮದಲ್ಲಿ ಚಾಲನೆ ನೀಡಿ ಗದಗ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಮಾತನಾಡಿದರು   

ರೋಣ: ತಾಲ್ಲೂಕಿನ ಕೊತಬಾಳ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿ ಸಹಯೋಗದಲ್ಲಿ ಇ-ಪೋತಿ ಹಾಗೂ ವಾರಸಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಮಂಗಳವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ‘ರಾಜ್ಯದಾದ್ಯಂತ ಉಳುಮೆಯಾಗುತ್ತಿರುವ ಜಮೀನುಗಳಲ್ಲಿ ಬಹಳಷ್ಟು ಜಮೀನುಗಳ ಪಹಣಿಯಲ್ಲಿ ಮೃತ ರೈತರ ಹೆಸರುಗಳೇ ಇದ್ದು, ಇದರಿಂದಾಗಿ ಸರ್ಕಾರದಿಂದ ರೈತರಿಗೆ ದೊರೆಯಬೇಕಾದ ಸೌಲಭ್ಯಗಳು ದೊರೆಯದಂತಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ಕಂದಾಯ ಇಲಾಖೆ ಇ- ಪೋತಿ ಮತ್ತು ವಾರಸಾ ಆಂದೋಲನ ಹಮ್ಮಿಕೊಂಡಿದೆ’ ಎಂದು ಹೇಳಿದರು.

‘ಒಂದು ವೇಳೆ ವಾರಸಾದಾರರ ನೋಂದಣಿಯಾಗದಿದ್ದಲ್ಲಿ ವಾರಸುದಾರರು ಇಲ್ಲ ಎಂದು ದಾಖಲಿಸಲಾಗುವುದು. ಇಲಾಖೆ ವತಿಯಿಂದ ಕೇವಲ ಆಸ್ತಿಯ ವಾರಸುದಾರಿಕೆ ಮಾತ್ರ ನೋಂದಾಯಿಸಲಾಗುವುದು. ನಂತರ ನಿಯಮಗಳಿಗೆ ಅನುಸಾರವಾಗಿ ಒಪ್ಪಂದ ಮಾಡಿಕೊಳ್ಳುವ ಮೂಲಕ ತಾವುಗಳು ವಾಟ್ನಿ ಮಾಡಿಕೊಳ್ಳಬಹುದಾಗಿದೆ. ಒಮ್ಮೆ ಆಸ್ತಿಯ ಮೇಲೆ ವಾರಿಸು ದಾರಿ ನಮೂದಿಸಲ್ಪಟ್ಟರೆ ನಂತರ ನಿಮ್ಮ ಒಪ್ಪಿಗೆ ಇಲ್ಲದೆ ಆಸ್ತಿ ಮಾರಾಟ ಮಾಡಲು ಸಾಧ್ಯವಿಲ್ಲ ಇದರಿಂದ ನಿಮ್ಮ ಆಸ್ತಿ ಮೇಲಿನ ಹಕ್ಕಿಗೆ ರಕ್ಷಣೆಯು ದೊರಕಿದಂತಾಗುತ್ತದೆ’ ಎಂದರು.

ADVERTISEMENT

ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ 60 ಸಾವಿರ ಮರಣ ಹೊಂದಿದ ರೈತರ ಹೆಸರಿನ ಖಾತೆಗಳಿದ್ದು, ಮರಣ ಹೊಂದಿದ ರೈತರ ಮರಣ ಪ್ರಮಾಣ ಪತ್ರ ಇರದಿದ್ದರೆ ಸ್ಥಳೀಯ ಮಹಜರ್ ಮೂಲಕ ಸ್ಥಳದಲ್ಲಿಯೇ ಮರಣ ಪ್ರಮಾಣ ಪತ್ರ ಒದಗಿಸಲಾಗುವುದು. ಜೊತೆಗೆ ಇಲಾಖೆ ವತಿಯಿಂದ ಕಾಲುವೆ ಪರಿಹಾರದ ಸಮಸ್ಯೆಗಳ ಬಗ್ಗೆ ಕೂಡ ದಾಖಲಾತಿ ಸರಿಪಡಿಸುವಲು ಮುಂದಿನ ದಿನಮಾನಗಳಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ರೋಣ ತಹಶೀಲ್ದಾರ್ ನಾಗರಾಜ.ಕೆ, ಕೊತಬಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಗುಳಗುಳಿ, ಉಪಾಧ್ಯಕ್ಷ ಮುತ್ತಣ್ಣ ಅಸೂಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿದ್ದಣ್ಣ ಯಾಳಗಿ, ಗ್ರಾಮ ಲೆಕ್ಕಾಧಿಕಾರಿ ಕೀರ್ತಿ ಗಾಣಿಗೇರ, ಸೋಮು ನಾಗರಾಜ ಮುಂತಾದವರು ಇದ್ದರು.

ಮರಣ ಹೊಂದಿರುವ ರೈತರ ಪಟ್ಟಿ ಸಿದ್ಧಪಡಿಸಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಮನೆಯ ಬಾಗಿಲಿಗೆ ಬಂದಾಗ ನಿಖರವಾದ ಮಾಹಿತಿ ನೀಡಬೇಕು
ಸಿ.ಎನ್.ಶ್ರೀಧರ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.