ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಗರ್‌ಹುಕುಂ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 22 ದಿನಗಳನ್ನು ಪೂರೈಸಿದ್ದು, ಬೇಡಿಕೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಮಂಗಳವಾರ ಬಾರುಕೋಲು ಚಳವಳಿ ನಡೆಸಿ ಆಕ್ರೋಶ ಹೊರಹಾಕಿದರು.
ಬಗರ್‌ಹುಕುಂ ಸಾಗುವಳಿದಾರರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯಕ್ಕಾಗಿ ಜಮೀನು ಕಳೆದುಕೊಂಡ ರೈತರು ಸರ್ಕಾರ ತಕ್ಷಣವೇ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ‘ನೂರಾರು ವರ್ಷಗಳಿಂದ ರೈತರು ಅರಣ್ಯ ಜಮೀನುಗಳನ್ನು ಉಪಜೀವನಕ್ಕಾಗಿ ಸಾಗುವಳಿ ಮಾಡುತ್ತಿದ್ದು, ಕಪ್ಪತ್ತಗುಡ್ಡವನ್ನು ಸಂರಕ್ಷಣೆ ಮಾಡಿರುವ ಬಗರ್‌ಹುಕುಂ ರೈತರಿಗೆ ಹಾಗೂ ಅರಣ್ಯ ಅವಲಂಬಿತರಿಗೆ ಸರ್ಕಾರ ಹಕ್ಕುಪತ್ರ ನೀಡದೆ ಕಿರುಕುಳ ನೀಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ಸರ್ವೆ ನಂ.143/2ಬಿ/ಬ/1ಬಿ/2ರ 124 ಎಕರೆ ಹಾಗೂ ಸರ್ವೆ ನಂ.179/ಬಿ 128 ಎಕರೆ 35 ಗುಂಟೆ ಜಮೀನುಗಳನ್ನು ನಾಲ್ಕು ತಲೆಮಾರುಗಳಿಂದ ನೂರಾರು ಕುಟುಂಬಗಳು ಉಪಯೋಗಿಸುತ್ತಿದ್ದರೂ ಪರಿಹಾರ ನೀಡದೆ ಒಕ್ಕಲೆಬ್ಬಿಸಿರುವುದು ಖಂಡನೀಯ. ತಕ್ಷಣವೇ ಇವರಿಗೆ ಪರಿಹಾರ ಕೊಡಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
‘ಚಳಿ, ಮಳೆ, ಬಿಸಿಲು, ಗಾಳಿ ಎನ್ನದೇ 22 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಇದನ್ನು ಖಂಡಿಸಿ ಬುಧವಾರ ಜಿಲ್ಲಾಡಳಿತದ ಎದುರು ಟೋಪಿ ಚಳವಳಿ ಮಾಡಲಾಗುವುದು’ ಎಂದು ತಿಳಿಸಿದರು.
ಈ ವೇಳೆ ಎನ್.ಟಿ. ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ್, ಫಿರೋಜ್ ನದಾಫ್ ಸೇರಿದಂತೆ ಜಿಲ್ಲೆಯ ಅನೇಕ ರೈತರು, ಮಹಿಳೆಯರು ಹಾಗೂ ಹೋರಾಟಗಾರರು ಇದ್ದರು.
ರೈತರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಆಗ ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರವೇ ಹೊಣೆಯಾಗಲಿದೆರವಿಕಾಂತ ಅಂಗಡಿ ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.