ADVERTISEMENT

ಗದಗ | ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ: ಶರಣಬಸಪ್ಪ ಗುಡಿಮನಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:01 IST
Last Updated 28 ಅಕ್ಟೋಬರ್ 2025, 5:01 IST
ಗದಗ ನಗರದ ಹಳೆಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಗದಗ ನಗರದ ಹಳೆಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಗದಗ: ‘ಎಲ್ಲ ದಾನಗಳಿಗಿಂತ ಅನ್ನದಾನ ಶ್ರೇಷ್ಠವಾಗಿದೆ. ಎಷ್ಟೇ ಸಿರಿವಂತರಾದರೂ ಹಸಿದು ಬಂದವರಿಗೆ ಒಂದು ತುತ್ತು ಅನ್ನ ನೀಡದಿದ್ದರೆ ನಾವು ಗಳಿಸಿದ ಸಂಪತ್ತು ಶೂನ್ಯಕ್ಕೆ ಸಮಾನ’ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.

ನಗರದ ಮಹಾತ್ಮಾಗಾಂಧಿ ವೃತ್ತದ ಬಳಿಯ ಹಳೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಜೀವನದಲ್ಲಿ ದುಡ್ಡು ಗಳಿಸುವುದು ಮುಖ್ಯವಲ್ಲ. ಗಳಿಸಿದ ಹಣದಲ್ಲಿ ನಾವೆಷ್ಟು ಜನರಿಗೆ ಒಳ್ಳೆಯದನ್ನು ಮಾಡಿದ್ದೇವೆ ಎನ್ನುವುದು ಮುಖ್ಯವಾಗಿದೆ. ನಗರದಲ್ಲಿ ಹಸಿದವರಿಗೆ ಅನ್ನ ನೀಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿರುವ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಎಲ್ಲ ಪದಾಧಿಕಾರಿಗಳು ಕೂಡ ಈ ಕಾರ್ಯಕ್ಕೆ ನೆರವು ನೀಡುತ್ತೇವೆ’ ಎಂದು ಹೇಳಿದರು.

ADVERTISEMENT

ರಾಜೀವ್‌ಗಾಂಧಿ ನಗರದ ಬಡಾವಣೆ ಠಾಣೆಯ ಪಿಎಸ್‍ಐ ಮಾರುತಿ ಜೋಗದಂಡಕರ ಮಾತನಾಡಿ, ‘ಹಸಿದು ಬಂದವರಿಗೆ ಐದು ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿರುವುದು ಹೆಮ್ಮೆಯ ವಿಷಯ. ಈ ಕಾರ್ಯವನ್ನು ನಿರಂತರವಾಗಿ ನಡೆಸುತ್ತ ಬಂದಿರುವ ಆಡಳಿತ ಮಂಡಳಿ ಸೇವೆಗೆ ನಾವೆಲ್ಲರೂ ಕೈಜೋಡಿಸಬೇಕಿದೆ’ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಯದೇವ ಮೆಣಸಗಿ, ಪ್ರಕಾಶ ಉಗಲಾಟದ, ಸಹ ಗೌರವ ಕಾರ್ಯದರ್ಶಿ ಅಶೋಕ ಸಂಕಣ್ಣವರ ಅವರನ್ನು ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದ ಗೌರವಾಧ್ಯಕ್ಷ ಎಸ್.ಎಸ್. ಕಳಸಾಪೂರ, ಉಪಾಧ್ಯಕ್ಷ ಉಮೇಶ ಪೂಜಾರ, ಹಿರಿಯರಾದ ಮರಿಗುದ್ದಿ, ಪತ್ರಿಮಠ, ಸದಸ್ಯರಾದ ರಾಜಣ್ಣ ಮಲ್ಲಾಡದ, ಮುತ್ತು ಜಡಿ, ಸಮಾಜ ಸೇವಕ ಎಚ್.ಬಿ.ಸಿಂಗ್ರಿ, ನಿಲಯದ ಮೇಲ್ವಿಚಾರಕಿ ವಿಶಾಲಾಕ್ಷಿ ಬಡಿಗೇರ ಇದ್ದರು.

ಪ್ರಸಾದ ನಿಲಯದ ಖಜಾಂಚಿ ವೆಂಕಟೇಶ ಇಮರಾಪೂರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.