ಗದಗ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದವು. ಆದರೆ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಅವಧಿಯಲ್ಲಿ ಇಂತಹ ಕೆಟ್ಟ, ಭ್ರಷ್ಟ ಹಾಗೂ ಅಭಿವೃದ್ಧಿ ಶೂನ್ಯ ಸರ್ಕಾರವನ್ನು ನೋಡಿಲ್ಲ’ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದರು.
‘ನೀರಾವರಿ ಯೋಜನೆಗಳು, ಹೊಸ ರಸ್ತೆ ಕೆಲಸಗಳು ಆಗಿಲ್ಲ. ಬೆಲೆಗಳು ಗಗನಕ್ಕೇರಿವೆ. ಮದ್ಯದ ಬೆಲೆ ಶೇ 400ರಷ್ಟು ಹೆಚ್ಚಾಗಿದೆ. ಮನೆಗಂದಾಯ, ನೀರಿನ ಕರ, ವಿದ್ಯುತ್ ದರ ಹೆಚ್ಚಿಸಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಹಾಕಿದ್ದಾರೆ. ಎರಡು ವರ್ಷಗಳ ಬಜೆಟ್‌ನಲ್ಲಿ ₹38 ಸಾವಿರ ಕೋಟಿ ಎಸ್‌ಇಪಿ ಟಿಎಸ್‌ಪಿ ಹಣವನ್ನು ಕಾಂಗ್ರೆಸ್ ಸರ್ಕಾರ ಅನ್ಯ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಂಡಿದೆ’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.
‘ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಹಿಂದೂ ಹಬ್ಬಗಳ ಸಂದರ್ಭದಲ್ಲಿ ಕೋಮು ಗಲಭೆ ಸೃಷ್ಟಿಸಿ ಪೊಲೀಸರ ಸರ್ವಗಾವಲು ಹಾಕುವ ಮೂಲಕ ಹಬ್ಬಗಳನ್ನು ನೆಮ್ಮದಿಯಾಗಿ ಆಚರಿಸಲು ತಡೆ ಒಡ್ಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಹರಿಹಾಯ್ದರು.
‘ಅಹಿಂದ ನಾಯಕ ಎಂದು ಕರೆದುಕೊಳ್ಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಮು ಸೌಹಾರ್ದ ಹಾಳು ಮಾಡುತ್ತಿದ್ದಾರೆ. ಒಡೆದಾಳುವ ನೀತಿಯಲ್ಲಿ ಸಿಎಂ ನಿಸ್ಸೀಮರು’ ಎಂದು ಆರೋಪ ಮಾಡಿದರು.
‘ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್‌ಸಿಗೆ ಶೇ 17, ಎಸ್‌ಟಿಗೆ ಶೇ 7ರಷ್ಟು ಮೀಸಲಾತಿ ಹೆಚ್ಚಿಸಿದ್ದರು. ಆದರೆ, ಕಾಂಗ್ರೆಸ್ ಶಾಸಕರು ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿಲ್ಲ ಎಂದು ಸದನದಲ್ಲಿ ಸುಳ್ಳು ಹೇಳಿದ್ದರು. ಈಗ ಶೇ 17ರಷ್ಟು ಮೀಸಲಾತಿಯಲ್ಲಿ ಎಡ, ಬಲ, ತೃತೀಯ ಎಂದು ಕಾಂಗ್ರೆಸ್ ಹಂಚಿಕೆ ಮಾಡಿದೆ. ಹಾಗಿದ್ದರೆ ಶೇ 17ರಷ್ಟು ಮೀಸಲು ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದರು.
ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮುಖಂಡರಾದ ಮಂಜುನಾಥ ಮುಳಗುಂದ, ವಿಜಯಲಕ್ಷ್ಮಿ ಮಾನ್ವಿ, ಎಂ.ಎಂ.ಹಿರೇಮಠ ಇದ್ದರು.
‘ತಿದ್ದುಪಡಿ ಮಾಡದಿದ್ದರೆ ಹೋರಾಟ’
‘ನ್ಯಾಯಮೂರ್ತಿ ನಾಗಮೋಹನದಾಸ್ ಹಾಗೂ ಮಾಧುಸ್ವಾಮಿ ವರದಿ ವೈಜ್ಞಾನಿಕವಾಗಿದ್ದು ಸರ್ಕಾರ ಅವರ ವರದಿಯನ್ನು ಸಂಪೂರ್ಣ ಜಾರಿಗೊಳಿಸಬೇಕಿತ್ತು’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
‘ಆದರೆ ಸಚಿವರಾದ ಡಾ. ಜಿ. ಪರಮೇಶ್ವರ ಶಿವಾನಂದ ತಂಗಡಗಿ ಮಹದೇವಪ್ಪ ಅವರು ಯಾವ ಜನಾಂಗಕ್ಕೂ ಉಪಯೋಗವಾಗದಂತಹ ಒಳಮೀಸಲಾತಿ ಜಾರಿಗೆ ತರಲು ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ. ಸರ್ಕಾರಕ್ಕೆ ಈಗಲೂ ತಿದ್ದುಪಡಿ ಮಾಡಲು ಅವಕಾಶವಿದೆ. ತಿದ್ದುಪಡಿಗೆ ಮುಂದಾಗದಿದ್ದರೆ ಸರ್ಕಾರ ಬಗ್ಗಿಸಲು ಹೋರಾಟ ಮಾಡಲಾಗುವುದು’ ಎಂದರು.
‘ಸೆ. 22ರಂದು ಆರಂಭವಾಗುವ ಜಾತಿಗಣತಿಗೆ ನಮ್ಮ ಸಂರ್ಪೂಣ ವಿರೋಧವಿದೆ. ಒಳ ಮೀಸಲಾತಿ ಸಂಬಂಧ ನಡೆದಿರುವ ಈಗಾಗಲೇ ವೈಜ್ಞಾನಿಕ ಜಾತಿಗಣತಿ ಆಗಿದೆ. ಹಾಗಾಗಿ ಮತ್ತೊಮ್ಮೆ ಗಣತಿ ಮಾಡುವುದು ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.