ಆಲಮಟ್ಟಿ: ಕೃಷ್ಣೆಯ ನೀರಿನ ರಭಸದ ಅಲೆಗಳು ಅಪ್ಪಳಿಸುತ್ತವೆ, ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರುತ್ತಿದೆ. ಆದರೆ, ಇದಾವುದರ ಪರಿವೆಯೇ ಇಲ್ಲದೇ ನೀರಿನಲ್ಲಿಯೇ ಸೇತುವೆ ನಿರ್ಮಾಣದಲ್ಲಿ ತೊಡಗಿರುವ ಅಪಾರ ಕಾರ್ಮಿಕರ ದಂಡೇ ಕಾಣುತ್ತೇವೆ...
ಹೌದು, ಇದು ಗದಗ-ಹುಟಗಿ ರೈಲ್ವೆ ದ್ವಿಪಥ ನಿರ್ಮಾಣದಲ್ಲಿ ಬರುವ ಆಲಮಟ್ಟಿ ಮತ್ತು ಬೇನಾಳ ರೈಲು ನಿಲ್ದಾಣದ ಮಧ್ಯೆ ಬರುವ ಆಲಮಟ್ಟಿ ಜಲಾಶಯದ ಹಿನ್ನೀರು ಆವರಿಸಿರುವ ಪಾರ್ವತಿ ಕಟ್ಟಿ ಸೇತುವೆಯ ನಿರ್ಮಾಣದಲ್ಲಿ ಕಂಡು ಬಂದ ಚಿತ್ರಣ.
ಈ ಹಿನ್ನೀರಿನಲ್ಲಿ ಸದಾ ಯಾವತ್ತು ನೀರಿರುತ್ತದೆ. ಕಳೆದ ಒಂದು ವರ್ಷದಿಂದ ಈ ನೀರಿನಲ್ಲಿಯೇ ಸೇತುವೆ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಅಲ್ಲಿ ಉಪಯೋಗಿಸುವ ನಾನಾ ಬೃಹತ್ ಯಂತ್ರಗಳು ವಿಸ್ಮಯ ಮೂಡಿಸುತ್ತವೆ.
ಆಧುನಿಕ ತಂತ್ರಜ್ಞಾನ:
ಪೈಲ್ ಫೌಂಡೇಶನ್ ಮೂಲಕ ನೀರಿನಲ್ಲಿ ಈ ಸೇತುವೆ ನಿರ್ಮಿಸಲಾಗುತ್ತಿದೆ. ನೀರೊಳಗೆ ಸುಮಾರು 15 ಮೀಟರ್‌ನಿಂದ 20 ಮೀಟರ್ (50 ಅಡಿಯಿಂದ 70 ಅಡಿ) ಆಳದವರೆಗೂ ಗಟ್ಟಿ ಕಲ್ಲು ಹತ್ತುವವರೆಗೆ 5 ಮೀಟರ್ ವ್ಯಾಸದ ಬೃಹತ್ ಯಂತ್ರದ ಮೂಲಕ ಡ್ರಿಲ್ಲಿಂಗ್ ಮಾಡಲಾಗುತ್ತದೆ. ನೀರಿನ ಆಳದಲ್ಲಿ ಕಲ್ಲು ಹತ್ತಿದ ನಂತರವೂ ನಾಲ್ಕು ಮೀಟರ್ ಆಳದವರೆಗೂ ಕೊರೆಯಲಾಗುತ್ತದೆ. ನಂತರ ಅಲ್ಲಿಂದ 5 ಮೀಟರ್ ವ್ಯಾಸದ ಕಬ್ಬಿಣದ ಪೈಪ್ ಅಳವಡಿಸಲಾಗುತ್ತದೆ.
ಆ ಪೈಪ್ ನಲ್ಲಿ ಹೈಪ್ರೆಸ್ಸರ್ ನಲ್ಲಿ ಕಾಂಕ್ರಿಟ್ ಹಾಕಲಾಗುತ್ತದೆ. ಒಂದು ದೊಡ್ಡ ಪಿಲ್ಲರ್‌ಗೆ 8 ರಿಂದ 9 ಪಿಲ್ಲರ್‌ಗಳನ್ನು ನೀರಿನ ಮಟ್ಟಕ್ಕಿಂತ ಎತ್ತರ ನಿರ್ಮಿಸಲಾಗುತ್ತದೆ. ಅಲ್ಲಿ ಎಂಟು ಪಿಲ್ಲರ್‌ಗಳಿಗೆ ಒಂದು ಪ್ಲಾಟ್ ಫಾರ್ಮ್ ನಿರ್ಮಿಸಿ ಅದರ ಮೇಲೆ ಒಂದು ದೊಡ್ಡ ಪಿಲ್ಲರ್ ನಿರ್ಮಿಸಲಾಗುತ್ತದೆ. ಇಂತಹ ಒಟ್ಟು 8 ದೊಡ್ಡ ಪಿಲ್ಲರ್‌ಗಳನ್ನು ನದಿ ನೀರಿನಲ್ಲಿಯೇ ನಿರ್ಮಿಸಲಾಗಿದೆ ಎಂದು ರೈಲ್ವೆ ಎಂಜಿನಿಯರ್ ಮಾಹಿತಿ ನೀಡಿದರು.
440 ಮೀಟರ್ ಉದ್ದ 6 ಮೀಟರ್ ಅಗಲ:
ಕೃಷ್ಣಾ ನದಿ ಹಿನ್ನೀರಿನಲ್ಲಿ 440 ಮೀಟರ್ ಉದ್ದ ಹಾಗೂ 6 ಮೀಟರ್ ಅಗಲದ ಈ ಪಾರ್ವತಿ ಕಟ್ಟಿ ಸೇತುವೆಯ ಮೇಲೆ 9 ಕಬ್ಬಿಣದ ಗರ್ಡ್ (ಸ್ಟೀಲ್ ಗರ್ಡ್) ಅಳವಡಿಸಲಾಗುತ್ತದೆ.
ಸೇತುವೆ ಸಮುದ್ರ ಮಟ್ಟದಿಂದ 527.41 ಮೀಟರ್ ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿದೆ. ಆಲಮಟ್ಟಿ ಜಲಾಶಯ ಈಗಿರುವ 519.60 ಮೀಟರ್ ಎತ್ತರದಿಂದ 524.256 ಮೀಟರ್ ವರೆಗೆ ಎತ್ತರಿಸಿದರೂ ಈ ಸೇತುವೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನೆಲ ಮಟ್ಟದಿಂದ ಸುಮಾರು 23 ಮೀ (75 ಅಡಿ) ಎತ್ತರದವರೆಗೆ ಈ ಸೇತುವೆ ನಿರ್ಮಿಸಲಾಗಿದೆ.
ಮಾರ್ಚ್ 2026 ಕ್ಕೆ ಪೂರ್ಣ:
ಬಾಗಲಕೋಟೆಯಿಂದ ವಂದಾಲ ಮಧ್ಯೆ ಸುಮಾರು 45 ಕಿ.ಮೀ ಮಾತ್ರ ಏಕ ಪಥ ಮಾರ್ಗವಿದೆ. ಗದಗ-ಹುಟಗಿ ಮಾರ್ಗದ ದ್ವಿಪಥ ಕಾರ್ಯ ಪೂರ್ಣಗೊಳ್ಳಲು ಅಡ್ಡಿಯಾಗಿರುವ ಈ ಸೇತುವೆಯ ನಿರ್ಮಾಣ, ರೈಲ್ವೆ ಹಳಿ ಅಳವಡಿಕೆ ಮತ್ತೀತರ ಕಾರ್ಯಗಳು ಬಹುತೇಕ ಮಾರ್ಚ್ 2026 ಕ್ಕೆ ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.