
ಗದಗ: ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮವು ಜಿಲ್ಲೆಯ ಕೊನೆಯ ಹಳ್ಳಿ. ಇಲ್ಲಿ 40 ವರ್ಷಗಳಿಂದಲೂ ರಸ್ತೆಗಳ ಅಭಿವೃದ್ಧಿಯಾಗಿಲ್ಲ. ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದ ಕಾರಣ ಅನೇಕ ಗರ್ಭಪಾತಗಳಾಗಿವೆ...
–ಹೀಗೆ ಹೇಳಿದ ಶಿಗ್ಲಿ ಗ್ರಾಮದ ಯುವಕರು ಸಚಿವ ಎಚ್.ಕೆ.ಪಾಟೀಲ ಅವರ ಮುಂದೆ ಗದ್ಗದಿತರಾದರು.
ಅವರ ಕಷ್ಟದ ತೀವ್ರತೆ ಅರಿತ ಸಚಿವರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕರೆದು, ಸಮಸ್ಯೆ ಏನೆಂದು ವಿಚಾರಿಸಿದರು. ತಕ್ಷಣವೇ ಗ್ರಾಮದ ಶಿರಸಂಗಿ ಲಿಂಗರಾಜ ವೃತ್ತದಿಂದ ನಾಯಕನೂರ ಮತ್ತು ದೊಡ್ಡೂರು ಕ್ರಾಸ್‌ವರೆಗೆ ರಸ್ತೆ ದುರಸ್ತಿ ಮಾಡುವಂತೆ ಸೂಚನೆ ನೀಡಿದರು.
ಇಂತಹ ಹತ್ತು ಹಲವು ಸಮಸ್ಯೆಗಳಿಗೆ ತುರ್ತು ಸ್ಪಂದನೆ ನೀಡಿದ ಕ್ಷಣಗಳಿಗೆ ಶುಕ್ರವಾರ ನಡೆದ ಜನತಾ ದರ್ಶನ ಕಾರ್ಯಕ್ರಮ ಸಾಕ್ಷಿಯಾಯಿತು.
ಕಷ್ಟಪಟ್ಟು ದುಡಿದಿಟ್ಟ ಹಣವನ್ನು ನಂಬಿಸಿ ಪಡೆದುಕೊಂಡು, ವಂಚಿಸಿದ ಬಗ್ಗೆ ಮಹಿಳೆಯರ ಗುಂಪೊಂದು ಸಚಿವರ ಮುಂದೆ ಅಳಲು ತೋಡಿಕೊಂಡಿತು.
ವಂಚಕಿ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ, ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಸಚಿವರು ಎಸ್‌ಪಿಗೆ ಸೂಚನೆ ನೀಡಿದರು.
ಮುಂಡರಗಿ ತಾಲ್ಲೂಕಿನ ಕದಾಂಪುರ ಗ್ರಾಮದ ಬಸವರೆಡ್ಡಿ ಕೆ. ನಾಗನೂರು, ತಮ್ಮ ಜಮೀನಿನಲ್ಲಿ ನೀರಿನ ಪೂರೈಕೆಯಿಂದ ಸುತ್ತಮುತ್ತಲಿನ ರೈತರಿಗೆ ಉಂಟಾಗಿರುವ ತೊಂದರೆ ಪರಿಹರಿಸಲು 25 ವೋಲ್ಟ್ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅನ್ನು 63 ವೋಲ್ಟ್ ಸಾಮರ್ಥ್ಯಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದರು.
ಗಜೇಂದ್ರಗಡ ತಾಲ್ಲೂಕಿನ ನಾಗರಸಕೊಪ್ಪದ ಗ್ರಾಮದ ಶರಣು ಎಸ್. ಸೊಬರದ, ಕೇಂದ್ರೀಯ ವಿದ್ಯಾಲಯ ನಿರ್ಮಾಣಕ್ಕೆ ಇರುವ ಅಡೆತಡೆ ನಿವಾಸಿಬೇಕು ಎಂದು ಮನವಿ ಸಲ್ಲಿಸಿದರು.
ಶಿರಹಟ್ಟಿ ತಾಲ್ಲೂಕಿನ ವಡವಿ ಹೊಸೂರು ಗ್ರಾಮದ ಪ್ರಭುಗೌಡ ಪಾಟೀಲ, ತಮ್ಮ ಹೊಲದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಹವಾಲು ಸಲ್ಲಿಸಿದರು. ಆಗ ಹೆಸ್ಕಾಂ ಅಧಿಕಾರಿಗಳು ಮತ್ತು ರೈತ ಮುಖಂಡರ ನಡುವೆ ತಿಕ್ಕಾಟ ನಡೆಯಿತು.
ರೋಣ ಗ್ರಾಮದ ಮೆಹಬೂಬ್ ಬಾಬುಸಾಬ್, ಪಡಿತರ ಚೀಟಿಯಲ್ಲಿ ನೌಕರರ ಹೆಸರು ಇರುವ ಕಾರಣ ವಿಧಿಸಲಾದ ₹86 ಸಾವಿರ ದಂಡ ರದ್ದುಪಡಿಸುವಂತೆ ಕೋರಿದರು.
ಎಲ್ಲರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಿಂದ ಬಂದ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿದರು. ಪಡಿತರ ವಿತರಣೆ ಸ್ಥಗಿತ, ಗದಗ ಬೆಟಗೇರಿ ಅವಳಿ ನಗರದ ವಿವಿಧ ವಾರ್ಡ್‌ಗಳ ಮೂಲಸೌಕರ್ಯ, ವಸತಿ ಯೋಜನೆಗಳ ಸಹಾಯಧನ ಬಿಡುಗಡೆ, ಸರ್ಕಾರಿ ನೌಕರಿ, ನಮ್ಮ ಹೊಲ ನಮ್ಮ ರಸ್ತೆ, ವೃದ್ಧಾಪ್ಯ ವೇತನ ಮಂಜೂರು, ಬಸ್ ಸೌಲಭ್ಯ ಸಹಿತ ಅನೇಕ ವೈಯಕ್ತಿಕ ಸಮಸ್ಯೆಗಳನ್ನು ಸಚಿವರ ಮುಂದೆ ಹೇಳಿಕೊಂಡರು.
ಸಚಿವರು ಸಮಾಧಾನದಿಂದ ಸಮಸ್ಯೆ ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಲಮಿತಿಯಲ್ಲಿ ಪರಿಹಾರ ನೀಡಲು ಸೂಚಿಸಿದರು.
ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಶಾಂತಿ ಶಿಸ್ತಿನಿಂದ ಜರುಗಿದ್ದು ಇದಕ್ಕೆ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಸಿಎಫ್ ಸೇರಿದಂತೆ ಎಲ್ಲ ಅಧಿಕಾರಿಗಳು ಕಾರಣಎಚ್.ಕೆ.ಪಾಟೀಲ ಸಚಿವ
1067 ಅಹವಾಲುಗಳು ಸ್ವೀಕೃತ
ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಜನಸಾಮಾನ್ಯರಿಂದ ಅಹವಾಲುಗಳ ಮಹಾಪೂರವೇ ಹರಿದು ಬಂತು. ಸಾರ್ವಜನಿಕರಿಂದ 767 ಅಹವಾಲುಗಳು ನೇರವಾಗಿ ದಾಖಲಾಗಿದ್ದವು. ಆನ್‌ಲೈನ್ ಮೂಲಕ 300 ಅರ್ಜಿಗಳು ಬಂದಿದ್ದು ಒಟ್ಟು 1067 ಅಹವಾಲುಗಳು ಜನತಾ ದರ್ಶನದಲ್ಲಿ ಸ್ವೀಕೃತವಾಗಿದ್ದವು. ಇವುಗಳಲ್ಲಿ 900 ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. 150 ಅಹವಾಲುಗಳನ್ನು ವಿವರವಾಗಿ ಪರಿಶೀಲಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.