ಗದಗ: ಇಲ್ಲಿನ ವೀರೇಶ್ವರ ಪುಣ್ಯಾಶ್ರಮದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುಟ್ಟರಾಜ ಸ್ಮಾರಕ ಭವನದ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು, ಇನ್ನಷ್ಟು ದಿನಗಳು ಹೀಗೆ ಬಿಟ್ಟರೆ ಕಟ್ಟಿರುವ ಕಟ್ಟಡವೂ ಹಾಳಾಗುವ ಅಪಾಯವಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಈ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ₹6.24 ಕೋಟಿ ವ್ಯಯಿಸಿದೆ. ಉದ್ದೇಶಿತ ಕಟ್ಟಡ ಪೂರ್ಣಗೊಳಿಸಲು ಇನ್ನೂ ₹5– ₹7 ಕೋಟಿ ಹೆಚ್ಚುವರಿ ಹಣ ಬೇಕಿದೆ. ಸರ್ಕಾರಕ್ಕೆ ₹5 ಕೋಟಿ ದೊಡ್ಡದೇನೂ ಅಲ್ಲ. ಆದರೆ, ಅಂಧರು– ಅನಾಥರ ಬಾಳಿಗೆ ಬೆಳಕು ನೀಡುತ್ತಿರುವ, ಜಾತ್ಯತೀತ ನಿಲುವಿನ ವೀರೇಶ್ವರ ಪುಣ್ಯಾಶ್ರಮದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದ ಕಾರಣಕ್ಕೆ ಅನುದಾನ ಸಿಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಜತೆಗೆ, ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೂಡ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಬದ್ಧತೆ ಪ್ರದರ್ಶಿಸಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
‘ಗದಗ ನಗರದಲ್ಲಿನ ಭೀಮಸೇನ ಜೋಶಿ ಜಿಲ್ಲಾ ರಂಗಮಂದಿರದ ಉದ್ಘಾಟನೆಗೆ ಬಂದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ, ಸ್ಮಾರಕ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ನೀಡುವ ಕುರಿತು ಚರ್ಚಿಸಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ರಸ್ತಾವ ಸಲ್ಲಿಸಿ ಅನುದಾನ ಪಡೆಯಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ 2023ರ ಜೂನ್‌ನಲ್ಲಿಯೇ ಹೇಳಿದ್ದರು.
‘ಆದರೆ, ಈವರೆಗೂ ಅನುದಾನ ಬಿಡುಗಡೆ ಆಗದ ಕಾರಣ ಕಾಮಗಾರಿ ನನೆಗುದಿಗೆ ಬಿದ್ದಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ದೂರಿದ್ದಾರೆ.
ಭಿಕ್ಷೆ ಬೇಡುವ ಎಚ್ಚರಿಕೆ
‘ಹಲವು ವರ್ಷಗಳಿಂದ ಅನುದಾನಕ್ಕೆ ಬೇಡಿಕೆ ಇಟ್ಟರೂ ಸರ್ಕಾರ ಸ್ಪಂದಿಸಿಲ್ಲ. ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈಚೆಗೆ ನಾವು ವೀರೇಶ್ವರ ಪುಣ್ಯಾಶ್ರಮ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಾಂಕೇತಿಕವಾಗಿ ಭಿಕ್ಷಾಟನೆ ಕೂಡ ಮಾಡಿದ್ದೇವೆ. ಆ ದಿನ ಸಂಗ್ರಹವಾದ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೊಟ್ಟಿದ್ದೇವೆ’ ಎಂದು ಜೆಡಿಎಸ್ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಹೇಳಿದರು. ‘ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಈ ಬಾರಿಯ ಬಜೆಟ್‌ನಲ್ಲಿ ಕಟ್ಟಡ ಪೂರ್ಣಗೊಳಿಸಲು ಬೇಕಿರುವ ಅನುದಾನ ಮೀಸಲಿಡಬೇಕು. ಇಲ್ಲವಾದರೆ ವೀರೇಶ್ವರ ಪುಣ್ಯಾಶ್ರಮದ ಲಕ್ಷಾಂತರಿಂದ ಭಿಕ್ಷೆ ಸಂಗ್ರಹಿಸಿ ಕಟ್ಟಡ ಪೂರ್ಣಗೊಳಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.