ADVERTISEMENT

ಗದಗ | ಏಜೆಂಟರ ಹಾವಳಿ ತಪ್ಪಿಸಲು ಕ್ರಮವಹಿಸಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:22 IST
Last Updated 6 ಜನವರಿ 2026, 2:22 IST
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ರೈತರ ಜತೆಗಿನ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ಮಾತನಾಡಿದರು
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ರೈತರ ಜತೆಗಿನ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ಮಾತನಾಡಿದರು   

ಗದಗ: ‘ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆದ ಎಲ್ಲ ರೈತರಿಗೆ ಘೋಷಣೆ ಮಾಡಿರುವ ₹250 ಪ್ರೋತ್ಸಾಹ ಧನವನ್ನು ಏಜೆಂಟರ ಹಾವಳಿ ತಪ್ಪಿಸಿ ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು. ಒಂದು ವಾರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಹಾಗೂ ಖರೀದಿ ಕೇಂದ್ರದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ರೈತ ಮುಖಂಡರ ಜತೆಗೆ ಸೋಮವಾರ ಸಭೆ ನಡೆಸಿ ಅವರು ಮಾತನಾಡಿದರು. 

‘ಕಳೆದ ವರ್ಷ ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ₹2 ಸಾವಿರಕ್ಕಿಂತ ಹೆಚ್ಚು ದರ ಸಿಗುತ್ತಿತ್ತು. ಈ ವರ್ಷ ಬೆಲೆ ಸಂಪೂರ್ಣ ಕುಸಿದಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಲಕ್ಷ್ಮೇಶ್ವರದಲ್ಲಿ ರೈತರು ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ಅಲ್ಲಿಗೆ ಜಿಲ್ಲಾಧಿಕಾರಿ ಬಂದು ಸರ್ಕಾರಕ್ಕೆ ಎಲ್ಲ ಮಾಹಿತಿ ನೀಡಿದ್ದರು. ಸರ್ಕಾರ ಮೊದಲು 10 ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳುವುದಾಗಿ ಹೇಳಿತ್ತು. ಈಗ ಖರೀದಿ ಬಹಳ ಮಂದಗತಿಯಲ್ಲಿ ನಡೆಯುತ್ತಿದೆ. ಇದುವರೆಗೂ ಒಂದು ಲಕ್ಷ ಟನ್ ಕೂಡ ಖರೀದಿಯಾಗಿಲ್ಲ. ಖರೀದಿ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ’ ಎಂದು ಕಿಡಿಕಾರಿದರು. 

ADVERTISEMENT

‘ರೈತರು ತರುವ ಮೆಕ್ಕೆಜೋಳವನ್ನು ಖರೀದಿ ಕೇಂದ್ರದವರು ಖರೀದಿಸಬೇಕು. ಆದರೆ, ರೈತರ ಸಂಕಷ್ಟ ನೀಗಿಸುವ ಯಾವುದೇ ಕ್ರಮ ಕಾಣಿಸುತ್ತಿಲ್ಲ. ಈಗ ರೈತರಿಗೆ ₹250 ಪ್ರೋತ್ಸಾಹಧನ ಕೊಡುವ ಹೊಸ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಮೆಕ್ಕೆಜೋಳ ಬೆಳೆಗಾರರಿಗೆ ಸರ್ಕಾರ ₹250 ಪ್ರೋತ್ಸಾಹಧನವನ್ನು ಯಾವ ರೀತಿ ನೀಡುತ್ತಾರೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕು’ ಎಂದು ಆಗ್ರಹಿಸಿದರು.

‘ಖರೀದಿ ಕೇಂದ್ರಕ್ಕೆ ತರುವ ಮೆಕ್ಕೆಜೋಳವನ್ನು ಒಂದು ವಾರದಲ್ಲಿ ಖರೀದಿಸಿ, ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈಗಾಗಲೇ ಸಮಯ ಬಹಳ ಆಗಿದೆ. ಸರ್ಕಾರ ಘೋಷಣೆ ಮಾಡಿರುವ ಹೊಸ ಯೋಜನೆಯಲ್ಲಿ ಅವ್ಯವಹಾರ ಆಗುವ ಆತಂಕ ಇದೆ. ಹಿಂದೆ ಹುಬ್ಬಳ್ಳಿಯಲ್ಲಿ ಈರುಳ್ಳಿ ಖರೀದಿ ಸಂದರ್ಭದಲ್ಲಿ ಅವ್ಯವಹಾರ ನಡೆದಿತ್ತು. ಗೋವಿನಜೋಳ ಖರೀದಿ ಸಂದರ್ಭದಲ್ಲಿಯೂ ಆಗಿತ್ತು. ಸರ್ಕಾರದ ಯೋಜನೆಯ ದುರ್ಲಾಭ ಪಡೆದುಕೊಳ್ಳುವವರು ಇರುತ್ತಾರೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ‘ಅರ್ಹರಿಗೆ ಸರ್ಕಾರದ ಸಹಾಯಧನ ತಲುಪಲಿ. ಈ ಪ್ರಕ್ರಿಯೆ ಅನುಷ್ಠಾನದಲ್ಲಿ ಅಕ್ರಮ ಆಗದಿರಲಿ’ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್‌ ಸೇರಿದಂತೆ ಅಧಿಕಾರಿಗಳು ಹಾಗೂ ರೈತ ಮುಖಂಡರಾದ ರವಿಕಾಂತ ಅಂಗಡಿ, ಮಂಜುನಾಥ ಮಾಗಡಿ, ಪೂರ್ಣಾಜಿ ಕರಾಠೆ, ನಾಗರಾಜ ಚಿಂಚಲಿ, ಹೊನ್ನಪ್ಪ ವಡ್ಡರ, ಠಾಕಪ್ಪ ಸಾತಪುತೆ, ಬಸವರಾಜ ಹೀರೆಮನಿ, ಪವನ ಬಂಕಾಪುರ, ಉಮೇಶ ವಡ್ಡರ, ಮಂಜು ಇದ್ದರು.

ವಾರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ ಮಂದಗತಿಯಲ್ಲಿ ನಡೆದಿರುವ ಖರೀದಿ ಪ್ರಕ್ರಿಯೆ– ಬೇಸರ ಖರೀದಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಯದಂತೆ ನಿಗಾವಹಿಸಿ

ಏಜೆಂಟರಿಗೆ ಪ್ರೋತ್ಸಾಹಧನ ತಲುಪದೇ ನೇರವಾಗಿ ರೈತರಿಗೆ ತಲುಪುವ ರೀತಿಯಲ್ಲಿ ನೋಡಿಕೊಳ್ಳಬೇಕು. ನಿಜವಾದ ರೈತರ ಮಾಹಿತಿ ಪಡೆದು ಅವರು ಮಾರಿರುವ ಮೆಕ್ಕೆಜೋಳ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಬೇಕು
ಬಸವರಾಜ ಬೊಮ್ಮಾಯಿ ಸಂಸದ
ಮೆಕ್ಕೆಜೋಳ ₹1900 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾದರೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹250 ಪಾವತಿಸಲಾಗುವುದು. ಯೋಜನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಸಂಸ್ಥೆಯ ಮೂಲಕ ಅನುಷ್ಠಾನ ಮಾಡಲಾಗುತ್ತದೆ.
ಸಿ.ಎನ್.ಶ್ರೀಧರ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.