ADVERTISEMENT

ಗದಗ: ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗ ಕಣ್ಣುಬಿಟ್ಟ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 20:19 IST
Last Updated 7 ನವೆಂಬರ್ 2025, 20:19 IST
   

ಗದಗ: ರೋಗಿ ಸತ್ತಿದ್ದಾನೆ ಎಂದು ವೈದ್ಯರು ದೃಢೀಕರಿಸಿದ್ದರಿಂದ ದೇಹವನ್ನು ಮನೆಗೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುವ ವೇಳೆ ಅಚ್ಚರಿಯ ರೀತಿಯಲ್ಲಿ ವ್ಯಕ್ತಿ ಎಚ್ಚರವಾದ ಘಟನೆ ಬೆಟಗೇರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಬೆಟಗೇರಿ ನಿವಾಸಿ 38 ವರ್ಷದ ನಾರಾಯಣ ವನ್ನಾಲ ಎಂಬ ವ್ಯಕ್ತಿ ಸತ್ತು ಬದುಕಿದವರು.

ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ನಾರಾಯಣ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರು ಇವರಿಗೆ ಆರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಐಸಿಯುಗೆ ಸ್ಥಳಾಂತರಿಸಿದ್ದರು. ಬಳಿಕ ರೋಗಿ ಸತ್ತಿದ್ದಾನೆ ಎಂದು ದೃಢಪಡಿಸಿದ್ದರು.

ADVERTISEMENT

ಕುಟುಂಬದವರು ದೇಹವನ್ನು ಬೆಟಗೇರಿಯ ನಿವಾಸಕ್ಕೆ ತಂದು, ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆಸ್ಪತ್ರೆಯಿಂದಲೇ ದೂರದ ಊರುಗಳಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿ, ಅಂತ್ಯಸಂಸ್ಕಾರಕ್ಕೆ ಬರುವಂತೆ ತಿಳಿಸಿದ್ದರು. ನಗರದ ವಿವಿಧೆಡೆ ಶ್ರದ್ಧಾಂಜಲಿ ಪೋಸ್ಟರ್‌ಗಳನ್ನೂ ಹಾಕಿಸಿದ್ದರು.

‘ಧಾರವಾಡದ ಆಸ್ಪತ್ರೆಯಿಂದ ಆಂಬುಲೆನ್ಸ್‌ನಲ್ಲಿ ತಂದ ದೇಹವನ್ನು ಕೆಳಕ್ಕೆ ಇಳಿಸುತ್ತಿದ್ದಂತೆ ನಾರಾಯಣ ಅವರು ಉಸಿರಾಡಲು ಆರಂಭಿಸಿ, ಕಣ್ಣು ಕೂಡ ಬಿಟ್ಟರು. ಇದರಿಂದ ನಮಗೆಲ್ಲಾ ಆಶ್ಚರ್ಯದ ಜತೆಗೆ ಸಂತೋಷವೂ ಆಯಿತು. ಕೂಡಲೇ ಅವರನ್ನು ಬೆಟಗೇರಿಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಮುಂದುವರಿಸಿದ್ದೇವೆ’ ಎಂದು ವನ್ನಾಲ ಅವರ ಕುಟುಂಬದವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.