ಗದಗ: ‘ಲಿಂಗೈಕ್ಯ ಪಂ.ಪುಟ್ಟರಾಜ ಕವಿ ಗವಾಯಿಗಳ ಹೆಸರನ್ನು ಗದಗ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮವಹಿಸಬೇಕು’ ಎಂದು ಕ್ರಾಂತಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಬಾಕಳೆ ಆಗ್ರಹಿಸಿದರು.
ನವೀಕೃತಗೊಂಡಿರುವ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳ ಜತೆಗೂಡಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಗದುಗಿನ ವೀರೇಶ್ವರ ಪುಣ್ಯಾಶ್ರಮ ಅಂಧ ಅನಾಥರ ಬಾಳಿಗೆ ಬೆಳಕಾಗಿದೆ. ಪುಟ್ಟರಾಜ ಕವಿ ಗವಾಯಿಗಳು ಸಾವಿರಾರು ಮಂದಿ ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸಿ, ಅವರಿಗೆ ಸಾರ್ಥಕ ಬದುಕು ಕಟ್ಟಿಕೊಟ್ಟಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ಅಜರಾಮರಗೊಳಿಸುವ ಉದ್ದೇಶದಿಂದ ಗದುಗಿನ ರೈಲ್ವೆ ನಿಲ್ದಾಣಕ್ಕೆ ಅವರ ಹೆಸರಿಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಗೂ ಮುನ್ನ ನಗರದ ಭೂಮರಡ್ಡಿ ವೃತ್ತದಲ್ಲಿರುವ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ, ಪಾದಯಾತ್ರೆ ಮೂಲಕ ಗದಗ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರೈಲ್ವೆ ಸಚಿವರು, ರೈಲ್ವೆ ಇಲಾಖೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕ್ರಾಂತಿ ಸೇನಾ ಮಹಿಳಾ ಘಟಕದ ಅಧ್ಯಕ್ಷೆ ರಾಣಿ ಚಂದಾವರಿ, ಚನ್ನಮ್ಮಕ್ಕ ಮಾರನಬಸರಿ, ನಾಗಮ್ಮ, ಪೂಜಾ ಬೇವೂರ, ಅನುರಾಧ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಬೀಬ್, ಪ್ರಜಾ ಪರಿವರ್ತನ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಬಸಯ್ಯ ನಂದಿಕೋಲಮಠ, ಕರ್ನಾಟಕ ರಾಜ್ಯ ಪಂಡಿತ್ ಪುಟ್ಟರಾಜ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ಮುಳುಗುಂದ, ಸವಿತಾ ಸಮಾಜದ ಅಧ್ಯಕ್ಷ ಕೃಷ್ಣ ಹಡಪದ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.
ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಪುಟ್ಟರಾಜ ಗವಾಯಿಗಳವರ ಜನ್ಮದಿನದ ಒಳಗೆ (ಮಾರ್ಚ್ 3) ರೈಲ್ವೆ ನಿಲ್ದಾಣಕ್ಕೆ ಅವರ ಹೆಸರು ನಾಮಕರಣ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು.ಬಾಬು ಬಾಕಳೆ ಕ್ರಾಂತಿ ಸೇನಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.