ADVERTISEMENT

ಏಳು ಶಾಲಾ ವಾಹನಗಳ ಮೇಲೆ ಪ್ರಕರಣ ದಾಖಲು

ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಶಾಲಾ ವಾಹನಗಳ ತಪಾಸಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 2:46 IST
Last Updated 20 ಡಿಸೆಂಬರ್ 2025, 2:46 IST
ಗದಗ ಆರ್‌ಟಿಒ ಅಧಿಕಾರಿಗಳು ಅವಳಿ ನಗರದಲ್ಲಿನ ಶಾಲಾ ವಾಹನಗಳ ತಪಾಸಣೆ ನಡೆಸಿದರು
ಗದಗ ಆರ್‌ಟಿಒ ಅಧಿಕಾರಿಗಳು ಅವಳಿ ನಗರದಲ್ಲಿನ ಶಾಲಾ ವಾಹನಗಳ ತಪಾಸಣೆ ನಡೆಸಿದರು   

ಗದಗ: ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಇತ್ತೀಚೆಗೆ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯದಿಂದ 4 ವರ್ಷದ ವಿದ್ಯಾರ್ಥಿ ಮೃತಪಟ್ಟ ಘಟನೆಯನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಅಧಿಕಾರಿಗಳು ಜಿಲ್ಲೆಯಲ್ಲಿರುವ ಎಲ್ಲ ಶಾಲಾ-ಕಾಲೇಜು ವಾಹನಗಳ ದಾಖಲಾತಿ ಪರಿಶೀಲನೆ ನಡೆಸಿ, ಚುರುಕು ಮುಟ್ಟಿಸಿದ್ದಾರೆ.

ಶಾಲಾ ವಾಹನಗಳ ಫಿಟ್‌ನೆಸ್, ವಿಮೆ ಸೇರಿ ವಾಹನಗಳ ಸ್ಥಿತಿಯನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಮಾರ್ಗಸೂಚಿಗಳನ್ನು ಕಟ್ಟನಿಟ್ಟಾಗಿ ಅನುಸರಿಸುವಂತೆ ಸೂಚಿಸಿದ್ದಾರೆ. ನಿಯಮ ಉಲ್ಲಂಘಿಸಿರುವ ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ.

ADVERTISEMENT

ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ ಹಾಗೂ ಹಿರಿಯ ಮೋಟಾರ್‌ ವಾಹನ ನಿರೀಕ್ಷಕರಾದ ಅರುಣ ಕಟ್ಟಿಮನಿ, ಬಾಲಚಂದ್ರ ತೊದಲಬಾಗಿ ಅವರ ನೇತೃತ್ವದಲ್ಲಿ ಗದಗ ಬೆಟಗೇರಿ ಅವಳಿ ನಗರದಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಯಿತು.

ಶಾಲಾ ವಾಹನಗಳಿಗೆ ಸಂಬಂಧಪಟ್ಟ ಕಾಗದ ಪತ್ರಗಳು, ಫಿಟ್‌ನೆಸ್, ವಿಮೆ, ಪರ್ಮಿಟ್, ವಾಹನ ಚಾಲನಾ ಪರವಾನಗಿ ಪತ್ರ, ಟ್ಯಾಕ್ಸ್ ಸೇರಿ ದಾಖಲಾತಿಗಳನ್ನು ಪರಿಶೀಲಿಸಿದ ಅಧಿಕಾರಿಗಳು ಟ್ಯಾಕ್ಸ್ ತುಂಬಿರದ, ಪರ್ಮಿಟ್ ಇಲ್ಲದ ಹಾಗೂ ಶಾಲಾ ವಾಹನಗಳ ರಹದಾರಿ ಉಲ್ಲಂಘನೆ ಮಾಡಿದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿದರು.

ಅದರಂತೆ, ನಗರದಲ್ಲಿ ಒಟ್ಟು 31 ಶಾಲಾ ವಾಹನಗಳನ್ನು ತಪಾಸಣೆ ಮಾಡಿದ ಅಧಿಕಾರಿಗಳು, ನಿಯಮ ಉಲ್ಲಂಘನೆ ಮಾಡಿದ ಏಳು ಶಾಲಾ ವಾಹನಗಳ ಮೇಲೆ ಪ್ರಕರಣ ದಾಖಲಿಸಿದರು. 

ಸರಿಯಾದ ಸಮಯಕ್ಕೆ ದಾಖಲಾತಿ ನವೀಕರಣ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸುವಂತೆ ಆರ್‌ಟಿಒ ಅಧಿಕಾರಿಗಳು ವಾಹನ ಚಾಲಕರು ಹಾಗೂ ಸಹ ಚಾಲಕರಿಗೆ ಅರಿವು ಮೂಡಿಸಿದರು.

ಶಾಲಾ ವಿದ್ಯಾರ್ಥಿಗಳು ವಾಹನ ಏರಿ, ಸೀಟ್‌ನಲ್ಲಿ ಕುಳಿತ ಮೇಲೆ ಮುಂದೆ ಸಾಗಬೇಕು. ವಾಹನದಿಂದ ಕೆಳಗಿಳಿದ ನಂತರ ಮಕ್ಕಳು ರಸ್ತೆ ದಾಟಿದ ಬಳಿಕ ಮುಂದೆ ಸಾಗಬೇಕು. ಶಾಲಾ ವಾಹನದ ಬಾಗಿಲನ್ನು ಸರಿಯಾಗಿ ಲಾಕ್ ಮಾಡಿಕೊಳ್ಳಬೇಕು. ಕಡಿಮೆ ವೇಗದಲ್ಲಿ ವಾಹನ ಚಾಲನೆ ಮಾಡಬೇಕು, ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಬೇಕು. ವಾಹನದ ಇಂಡಿಕೇಟರ್, ಹೆಡ್‌ಲೈಟ್ಸ್ ಸುಸ್ಥಿತಿಯಲ್ಲಿರಬೇಕು ಎಂಬುದಾಗಿ ತಿಳಿವಳಿಕೆ ನೀಡಿದರು.

‘ಈಗಾಗಲೇ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಶಾಲಾ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು, ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ನವೀಕರಿಸಿಕೊಳ್ಳಬೇಕು, ಪರಿಣತಿ ಹೊಂದಿರುವ ಚಾಲಕರು ಹಾಗೂ ಸಹಾಯಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ತಿಳಿವಳಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಶಾಲಾ ವಾಹನಗಳನ್ನು ಸೀಜ್ ಮಾಡಲಾಗುವುದು’ ಎಂದು ಆರ್‌ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಎಚ್. ಕಿಲ್ಲೇರ ನಿರ್ದೇಶನದ ಅನ್ವಯ ವಿಶೇಷ ತಂಡವನ್ನು ರಚಿಸಿ ಗದಗ ಜಿಲ್ಲೆಯಲ್ಲಿರುವ ಶಾಲಾ ವಾಹನಗಳ ತಪಾಸಣೆ ನಡೆಸಲಾಗಿದೆ
-ಅರುಣ ಕಟ್ಟಿಮನಿ ನಿರೀಕ್ಷರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯ ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.