
ಗದಗ: ‘ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಮೇಲೆ ನಡೆದಿರುವ ಲೋಕಾ ದಾಳಿ ಹಿಂದೆ ಷಡ್ಯಂತ್ರ ಅಡಗಿದೆ. ದಾಳಿಗೂ ಮುನ್ನ ದೊಡ್ಡ ಸಂಚು ನಡೆಸಿ, ಅವರನ್ನು ವ್ಯವಸ್ಥಿತ ರೀತಿಯಲ್ಲಿ ಪ್ರಕರಣದಲ್ಲಿ ಸಿಲುಕಿಸಿ, ಜೈಲಿಗೆ ಕಳುಹಿಸಿದ್ದಾರೆ’ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ತುಳಸಿಮನಿ ಆರೋಪ ಮಾಡಿದರು.
‘ಒಬ್ಬ ದಲಿತ ಶಾಸಕನ ಏಳ್ಗೆ ಸಹಿಸದೇ ಅನೇಕರು ಒಟ್ಟಾಗಿ ಅವರ ವಿರುದ್ಧ ಸಂಚು ಹೆಣೆದಿದ್ದಾರೆ. ಆದರೆ, ಇಂತಹ ದುಷ್ಟಕೂಟದ ಬಗ್ಗೆ ಶಾಸಕ ಚಂದ್ರು ಲಮಾಣಿ ಹೆದರುವ ಅವಶ್ಯಕತೆ ಇಲ್ಲ. ಅವರ ಬೆನ್ನಿಗೆ ಕರ್ನಾಟಕ ಬಂಜಾರ ಸಮಾಜ ಸದಾ ಇರಲಿದೆ’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶಾಸಕ ಚಂದ್ರು ಅವರು ಬಡತನದಿಂದ ಮೇಲೆ ಬಂದ ವ್ಯಕ್ತಿ. ಇದನ್ನು ಕೆಲವರಿಗೆ ಸಹಿಸಲು ಆಗಲಿಲ್ಲ. ಹಾಗಾಗಿ, ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಉದ್ದೇಶದಿಂದ ದುಷ್ಟರೆಲ್ಲಾ ಒಂದಾಗಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ’ ಎಂದು ಕಿಡಿಕಾರಿದರು.
‘ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಗುತ್ತಿಗೆದಾರ ವಿಜಯ್ ಪೂಜಾರ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ. ಆತ ಕೂಡ ದಲಿತ ಸಮಾಜಕ್ಕೆ ಸೇರಿದ ವ್ಯಕ್ತಿ. ಒಬ್ಬ ದಲಿತ ಶಾಸಕನನ್ನು ಹಣಿಯಲು ದಲಿತ ಗುತ್ತಿಗೆದಾರ, ಸ್ವಾಮೀಜಿಯನ್ನೇ ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಬಂಜಾರ ಸಮುದಾಯವನ್ನು ಹಿಂದಿನಿಂದಲೂ ತುಳಿಯುತ್ತಲೇ ಬಂದಿದ್ದಾರೆ. ಒಳಮೀಸಲಾತಿ ವಿಷಯದಲ್ಲಿ ಅನ್ಯಾಯವಾಗಿದೆ. ಇಷ್ಟೆಲ್ಲಾ ಆದರೂ, ನಮ್ಮ ಸಮುದಾಯದ ಒಬ್ಬ ಶಾಸಕನನ್ನು ಟಾರ್ಗೆಟ್ ಮಾಡುತ್ತಿರುವುದು ಯಾಕೆ? ಮುಂದೆ ಇದೇ ವರ್ತನೆ ತೋರಿದರೆ ಸಮಾಜದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.
‘ಆದರಹಳ್ಳಿ ಮಠದ ಕುಮಾರ ಮಹಾರಾಜರು ಡಾ. ಚಂದ್ರು ಲಮಾಣಿ ಅವರನ್ನು ಶಾಸಕ ಸ್ಥಾನದಿಂದ ಇಳಿಸುವವರೆಗೆ ಹೋರಾಟ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಒಬ್ಬ ಸ್ವಾಮೀಜಿಯಾಗಿ ಈ ರೀತಿ ಹೇಳಿಕೆ ಕೊಡಬಹುದೇ? ನಮ್ಮಲ್ಲಿ ಮಠ ಪರಂಪರೆ ಇಲ್ಲ. ಆ ವ್ಯಕ್ತಿ ತಾನು ಬಂಜಾರ ಸಮಾಜದ ಸ್ವಾಮೀಜಿ ಎಂದು ಅವರೇ ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ಜನರು ಆರಿಸಿ ಕಳಿಸಿದ ಜನಪ್ರತಿನಿಧಿ ವಿರುದ್ಧ ದ್ವೇಷ ಕಾರುತ್ತಿದ್ದಾರೆ’ ಎಂದು ಕಿಡಿಕಾರಿದರು.
ಕರ್ನಾಟಕ ಬಂಜಾರ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ಪ ನಾಯ್ಕ, ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ನಾವು ಯಾರೂ ಕುಮಾರ ಮಹಾರಾಜ ಸ್ವಾಮೀಜಿಯನ್ನು ಕಡೆಗಣಿಸಿಲ್ಲ. ಕೀಳಾಗಿ ನೋಡಿಲ್ಲ. ಆದರೆ ಒಣ ರಾಜಕೀಯ ಮಾಡುವ ಮೂಲಕ ಅವರೇ ಆ ರೀತಿಯ ಪರಿಸ್ಥಿತಿ ತಂದಿಟ್ಟುಕೊಂಡಿದ್ದಾರೆ
–ಬಾಲಚಂದ್ರ ತುಳಸಿಮನಿ ಪ್ರಧಾನ ಕಾರ್ಯದರ್ಶಿ
‘ಷಡ್ಯಂತ್ರ ನಡೆಸಿ ಲೋಕಾಯುಕ್ತ ಬಲೆಗೆ’
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಾನಂದ ಮಾತನಾಡಿ ‘ಶಾಸಕ ಚಂದ್ರು ಲಮಾಣಿ ಅವರ ತೇಜೋವಧೆ ಮಾಡಲು ದಲಿತ ಶಾಸಕರಿಗೆ ತೊಂದರೆ ಕೊಡಬೇಕು ಅಂತಲೇ ಕೆಲವರು ಷಡ್ಯಂತ್ರ ನಡೆಸಿ ಲೋಕಾಯುಕ್ತ ಬಲೆಗೆ ಸಿಕ್ಕಿಸಿದ್ದಾರೆ’ ಎಂದು ದೂರಿದರು. ‘ಈ ಪ್ರಕಣದಲ್ಲಿ ಬಂಜಾರ ಸಮುದಾಯ ಸ್ವಾಮೀಜಿ ಕುಮಾರ ಮಹಾರಾಜ ಹಾಗೂ ಬೇರೆ ಪಕ್ಷದ ನಾಯಕರ ಕೈವಾಡವೂ ಇದೆ. ಗುತ್ತಿಗೆದಾರ ವಿಜಯ್ ಪೂಜಾರ ಕಾಮಗಾರಿಗೆ ಡಿಸೆಂಬರ್‌ನಲ್ಲಿ ಪೂಜೆ ಮಾಡಿದ್ದು ಫೆಬ್ರುವರಿವರೆಗೂ ಕೆಲಸ ಆರಂಭಿಸಲಿಲ್ಲ. ಕೆಲಸ ವಿಳಂಬ ಆಗಿದ್ದಕ್ಕೆ ಶಾಸಕರು ಪ್ರಶ್ನಿಸಿದ್ದರು. ಅದಕ್ಕೆ ಷಡ್ಯಂತ್ರ ಮಾಡಿ ಲೋಕಾ ಬಲೆಗೆ ಬೀಳಿಸಿದ್ದಾರೆ’ ಎಂದು ಆಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.