ADVERTISEMENT

ಗದಗ | ಸತ್ಯ, ಅಹಿಂಸೆ ವಿಶಿಷ್ಟ ಮೌಲ್ಯಗಳು: ತೋಂಟದ ಶ್ರೀ

ಇಷ್ಟಲಿಂಗ ಸಮಾನತೆಯ ಸಂಕೇತ: 2,766ನೇ ಶಿವಾನುಭವ ಕಾರ್ಯಕ್ರಮಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 7:03 IST
Last Updated 12 ಅಕ್ಟೋಬರ್ 2025, 7:03 IST
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಕಾರಣರಾದ ತೋಂಟದ ಸಿದ್ದರಾಮ ಸ್ವಾಮೀಜಿಯನ್ನು ಗದಗ ಜಿಲ್ಲೆಯ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿದರು.
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಕಾರಣರಾದ ತೋಂಟದ ಸಿದ್ದರಾಮ ಸ್ವಾಮೀಜಿಯನ್ನು ಗದಗ ಜಿಲ್ಲೆಯ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿದರು.    

ಗದಗ: ‘ಸತ್ಯ ಮತ್ತು ಅಹಿಂಸೆ ದುರ್ಗುಣಗಳನ್ನು ದೂರ ಮಾಡಿ ಸದ್ಗುಣಗಳು ಹೊರಹೊಮ್ಮುವಂತೆ ಮಾಡುತ್ತವೆ. ಅವು ಉತ್ತಮ ಬದುಕು ರೂಪಿಸುವ ವಿಶಿಷ್ಟ ಮೌಲ್ಯಗಳು’ ಎಂದು ಸಿದ್ದರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ತೋಂಟದಾರ್ಯ ಮಠದಲ್ಲಿ ಈಚೆಗೆ ನಡೆದ 2,766ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. 

‘ಮಹಾತ್ಮ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೂ ಯಾವ ಅಧಿಕಾರ ಬಯಸಲಿಲ್ಲ. ಸತ್ಯ, ಅಹಿಂಸೆ ಮತ್ತು ಸಮಾನತೆಯ ಹಾದಿಯಲ್ಲಿ ಬಸವಣ್ಣ ಮತ್ತು ಗಾಂಧೀಜಿ ಸಾಗಿದರು. ದಯವೇ ಧರ್ಮದ ಮೂಲ. ಅಹಿಂಸೆಗೆ ತಲೆಬಾಗದ ವ್ಯಕ್ತಿಗಳೇ ಇಲ್ಲ. ಸಾಮಾಜಿಕ, ಧಾರ್ಮಿಕ, ಸತ್ಯ ಅಹಿಂಸೆಯಂತಹ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಇಷ್ಟಲಿಂಗ ಧರಿಸಬೇಕು. ಜಂಗಮಸೇವೆ ಮಾಡಬೇಕು. ಇಷ್ಟಲಿಂಗ ಸಮಾನತೆಯ ಸಂಕೇತ’ ಎಂದು ಹೇಳಿದರು.

ADVERTISEMENT

ಶರಣ ರವೀಂದ್ರ ಆರ್. ಪಟ್ಟಣ ಮಾತನಾಡಿ, ‘ಸತ್ಯ ಮತ್ತು ಅಹಿಂಸೆ ಎಲ್ಲಾ ಧರ್ಮಗಳ ಸಾರ. ಗಾಂಧೀಜಿಯವರ ದಿವ್ಯ ವ್ಯಕ್ತಿತ್ವವನ್ನು ಲಾರ್ಡ್ ಮೌಂಟ್ ಬ್ಯಾಟನ್, ಮಾರ್ಟಿನ್ ಲೂಥರ್ ಕಿಂಗ್ ಸೇರಿದಂತೆ ಅನೇಕ ಬ್ರಿಟಿಷ್‌ ಅಧಿಕಾರಿಗಳು ಮೆಚ್ಚಿದ್ದಾರೆ’ ಎಂದರು. 

ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಲಿಂಗಾಯತ ಮಹಾಸಭಾ ಅಧ್ಯಕ್ಷ ಕೆ.ಎಸ್.ಚಟ್ಟಿ ಮಾತನಾಡಿದರು.

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ತಿಂಗಳ ಪರ್ಯಂತ ದುಡಿದ ಸಿದ್ದರಾಮ ಸ್ವಾಮೀಜಿಯವರನ್ನು ಗದಗ ಜಿಲ್ಲಾ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಮಹೇಶ್ ರವಿಕುಮಾರ್ ಪುರಾಣಿಕಮಠ ಧರ್ಮಗ್ರಂಥ ಪಠಿಸಿದರು. ಮಹಾಂತೇಶ ರವಿಕುಮಾರ್ ಪುರಾಣಿಕಮಠ ವಚನ ಚಿಂತನ ನಡೆಸಿಕೊಟ್ಟರು. 

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಇದ್ದರು.

ಐ.ಬಿ.ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.