ADVERTISEMENT

Children's Day| ಗದಗ: ಹಾಕಿ, ಕುಸ್ತಿ, ಸೈಕ್ಲಿಂಗ್‌ನಲ್ಲಿ ಮಕ್ಕಳ ಕಮಾಲ್‌!

ಗದಗ ಕ್ರೀಡಾ ವಸತಿನಿಲಯದ ವಿದ್ಯಾರ್ಥಿಗಳ ಸಾಧನೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 14 ನವೆಂಬರ್ 2025, 4:30 IST
Last Updated 14 ನವೆಂಬರ್ 2025, 4:30 IST
ಆರೀಫಾ
ಆರೀಫಾ   

ಗದಗ: ಹಾಕಿ, ಕುಸ್ತಿ ಮತ್ತು ಸೈಕ್ಲಿಂಗ್‌ ಕ್ರೀಡೆಗಳಲ್ಲಿ ಇಲ್ಲಿನ ಕ್ರೀಡಾಪಟುಗಳು ಗದಗ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರದುದ್ದಗಲಕ್ಕೂ ಪಸರಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಮುತ್ತಿಕ್ಕಿ, ಗೆಲುವಿನ ನಗು ತುಳುಕಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಗದಗ ಜಿಲ್ಲಾ ಕ್ರೀಡಾ ವಸತಿನಿಲಯದಲ್ಲಿ ತರಬೇತಿ ಪಡೆಯುತ್ತಿರುವ ಅನೇಕ ಕ್ರೀಡಾಪಟುಗಳ ಇಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ. ‘ಮಕ್ಕಳ ದಿನಾಚರಣೆ’ ಹಿನ್ನಲೆಯಲ್ಲಿ ಅವರು ‘ಪ್ರಜಾವಾಣಿ’ ಜತೆಗೆ ಮಾತನಾಡಿದ್ದಾರೆ. 

ಕುಸ್ತಿ ಕೋಲ್ಮಿಂಚು ಆರೀಫಾ

ಗದಗ ನಗರದ ಕ್ರೀಡಾ ವಸತಿಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಆರೀಫಾ ಕುಕನೂರ ಕುಸ್ತಿ ಕ್ರೀಡೆಯ ಹೊಸತಾರೆಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈಕೆ ಕುಸ್ತಿ ಕ್ರೀಡೆ ಆಯ್ದುಕೊಳ್ಳಲು ಚಿಕ್ಕಮ್ಮ ಬಷೀರಾ ಅವರೇ ಪ್ರೇರಣೆ. ಗಂಗಾವತಿಯ ರೇಷ್ಮಾ ಬಾಬುಸಾಬ್‌ ದಂಪತಿಯ ಪುತ್ರಿ ಆರೀಫಾ ಪ್ರಸ್ತುತ ನಗರದ ವಿಡಿಎಸ್‌ಟಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾಳೆ. ಐದನೇ ತರಗತಿಗೆ ವಸತಿಶಾಲೆ ಸೇರಿದ ಆರೀಫಾಳನ್ನು ತರಬೇತುದಾರರಾದ ಶರಣಗೌಡ ಬೇಲೇರಿ ವಿನಾಯಕ ಅನುಷಾ ತರಬೇತುಗೊಳಿಸಿದ್ದಾರೆ. ನಾಲ್ಕು ವರ್ಷಗಳಿಂದ ಕುಸ್ತಿ ಕ್ರೀಡೆಯಲ್ಲಿ ತೊಡಗಿರುವ ಆರೀಫಾ ಶಿಗ್ಗಾಂವಿಯಲ್ಲಿ ನಡೆದ ಕುಸ್ತಿ ಹಬ್ಬದಲ್ಲಿ ತನ್ನ ಪಟ್ಟುಗಳ ಮೂಲಕ ಎದುರಾಳಿಯನ್ನು ಚಿತ್‌ ಮಾಡಿ ₹15 ಸಾವಿರ ನಗದು ಬಹುಮಾನ ಗೆದ್ದಿದ್ದಳು. ಹೊಸಪೇಟೆ ಹಾಗೂ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾಳೆ. ಕಳೆದ ವರ್ಷ 15 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಕ್ರೀಡಾ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ನೊಯ್ದಾದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾಳೆ. ‘ನಾನು ಕುಸ್ತಿ ಕ್ರೀಡೆ ಆಯ್ದುಕೊಳ್ಳಲು ಚಿಕ್ಕಮ್ಮ ಬಷೀರಾ ಅವರೇ ಕಾರಣ. ಅವರು ಕೂಡ ಉತ್ತಮ ಕುಸ್ತಿಪಟು. ಪ್ರಸ್ತುತ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಂತೆ ನಾನೂ ಕೂಡ ಹೆಚ್ಚಿನ ಸಾಧನೆ ಮಾಡಿ ಪೊಲೀಸ್‌ ಆಗುವೆ’ ಎಂದು ಆರೀಫಾ ಹೇಳಿದಳು.

ADVERTISEMENT
ಪ್ರಿಯಾಂಕಾ ಲಮಾಣಿ
ಸೈಕ್ಲಿಂಗ್‌ನಲ್ಲಿ ಪ್ರಿಯಾಂಕಾ ಛಾಪು

ಇಲ್ಲಿನ ಕ್ರೀಡಾ ವಸತಿನಿಲಯದಲ್ಲಿ ಸೈಕ್ಲಿಂಗ್‌ ತರಬೇತಿ ಪಡೆಯುತ್ತಿರುವ ಪ್ರಿಯಾಂಕಾ ಲಮಾಣಿ ಭರವಸೆಯ ಸೈಕ್ಲಿಸ್ಟ್‌ ಆಗಿ ಹೊರಹೊಮ್ಮಿದ್ದಾರೆ. ಒಂದೂವರೆ ವರ್ಷದಲ್ಲೇ ಎಲ್ಲರೂ ಮೂಗಿನ ಮೇಲೆ ಬೆರಳಿಡುವಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾಳೆ. ಪ್ರಿಯಾಂಕಾ ಲಮಾಣಿ ಕಳಸಾಪುರ ತಾಂಡಾದ ಹುಡುಗಿ. ಅಪ್ಪ– ಅಮ್ಮ ಕೂಲಿಕಾರ್ಮಿಕರು. ಪ್ರಸ್ತುತ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ. ಬಡತನದ ಹಿನ್ನಲೆ ಹೊಂದಿದ್ದರೂ ದುಬಾರಿ ಕ್ರೀಡೆಯಾದ ಸೈಕ್ಲಿಂಗ್‌ನಲ್ಲಿ ಪ್ರಿಯಾಂಕಾ ಸಾಧನೆಗೆ ಅಡ್ಡಿಯಾಗಿಲ್ಲ. ಹೋದಲ್ಲೆಲ್ಲಾ ಪ್ರಶಸ್ತಿ ಗೆಲ್ಲುವ ಮೂಲಕ ಭರವಸೆ ಮೂಡಿಸುತ್ತಿದ್ದಾಳೆ. ‘ಪ್ರಿಯಾಂಕಾ ಲಮಾಣಿ ಅತ್ಯುತ್ತಮ ಸೈಕ್ಲಿಸ್ಟ್‌. ಆದರೆ ಆಕೆಗೆ ಉತ್ತಮ ಸೈಕಲ್‌ ಇಲ್ಲದ ಕಾರಣ ಹಲವು ಅವಕಾಶಗಳಿಂದ ವಂಚಿತಳಾಗಿದ್ದಾಳೆ. ಅವಳಿಗೆ ಎಲ್ಲರಂತೆ ಒಂದೊಳ್ಳೆ ಸೈಕಲ್‌ ಸಿಕ್ಕರೆ ಮುಂದಿನ ವರ್ಷ ರಾಷ್ಟ್ರ ಮಟ್ಟದ ಪ್ರಶಸ್ತಿ ತರುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎನ್ನುತ್ತಾರೆ ಸೈಕ್ಲಿಂಗ್‌ ತರಬೇತುದಾರೆ ವಿದ್ಯಾ ಕುಲಕರ್ಣಿ. ‘ಬೇಸಿಕ್‌ ಸೈಕಲ್‌ನಲ್ಲೇ ಪ್ರಿಯಾಂಕಾ ಉತ್ತಮ ಸಾಧನೆ ಮಾಡಿದ್ದಾಳೆ. ಅವಳ ಕ್ರೀಡಾ ಸ್ಟ್ರಾಟರ್ಜಿ ಅಂತಃಶಕ್ತಿ ಅದ್ಭುತವಾಗಿದೆ. ಈಕೆಗೆ ಯಾರಾದರೂ ಒಂದೊಳ್ಳೆ ಸೈಕಲ್‌ ಕೊಡಿಸಲು ನೆರವಾದರೆ ಮುಂದೆ ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್‌ ಆಗುತ್ತಾಳೆ’ ಎಂಬ ಭರವಸೆ ವ್ಯಕ್ತಪಡಿಸಿದರು. ಅಂದಹಾಗೆ ಪ್ರಿಯಾಂಕಾ ಲಮಾಣಿ ಇದೇ ವರ್ಷ ಮಾರ್ಚ್‌ನಲ್ಲಿ ಹರಿಯಾಣದ ಪಂಚಕುಲದಲ್ಲಿ ನಡೆದ 21ನೇ ರಾಷ್ಟ್ರ ಮಟ್ಟದ ಎಂಟಿಬಿ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ 5ನೇ ಸ್ಥಾನ ಪಡೆದಿದ್ದಾಳೆ. ಜನವರಿದಲ್ಲಿ ಜಾರ್ಖಂಡ್‌ನ ರಾಂಚಿ ಹಾಗೂ ಬಿಹಾರದ ಪಾಟ್ನಾದಲ್ಲಿ ನಡೆದ ರಾಷ್ಟ್ರ ಮಟ್ಟದ ಸೈಕ್ಲಿಂಗ್‌ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದಳು. ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸೈಕ್ಲಿಂಗ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಗಳಿಸಿದ್ದಾಳೆ.

ಪ್ರತೀಕ್ಷಾ, ಪರಿಣಿತಾ ಹಾಕಿ ಮೋಡಿ

ಪ್ರತೀಕ್ಷಾ  ಪರಿಣಿತಾ

ಗದಗ ಜಿಲ್ಲೆಯ ಅನೇಕ ಹಾಕಿ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದ ಹಾಕಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಜಿಲ್ಲೆಯ ಹೆಸರನ್ನು ದೇಶದುದ್ದಗಲಕ್ಕೂ ಪಸರಿಸಿದ್ದಾರೆ. ಈಗ ಅದೇ ಹಾದಿಯಲ್ಲಿ ಸಾಗುತ್ತಿರುವ ಪ್ರತೀಕ್ಷಾ ಡಿ. ಚವ್ಹಾಣ ಪರಿಣಿತಾ ಎಸ್‌.ಗೋಕಾವಿ ಭರವಸೆಯ ಹಾಕಿ ಪ್ರತಿಭೆಗಳು. ಇವರಿಬ್ಬರೂ ಗದಗ ಕ್ರೀಡಾ ವಸತಿನಿಲಯದ ವಿದ್ಯಾರ್ಥಿಗಳು. ಪರಿಣಿತಾ ಅವರ ಕುಟುಂಬದವರೆಲ್ಲಾ ಹಾಕಿಪ್ರೇಮಿಗಳು. ಈಕೆಯ ಅಜ್ಜ ತಂದೆ ದೊಡ್ಡಪ್ಪ ದೊಡ್ಡಪ್ಪನ ಮಗ ಎಲ್ಲರೂ ಹಾಕಿ ಕ್ರೀಡಾಪಟುಗಳು. ಪ್ರತೀಕ್ಷಾ ಕುಟುಂಬದಲ್ಲಿ ಯಾರೂ ಹಾಕಿ ಆಟಗಾರರು ಇಲ್ಲದಿದ್ದರೂ ಸ್ವಯಂ ಆಸಕ್ತಿಯಿಂದ ಹಾಕಿ ಆಯ್ದುಕೊಂಡಿದ್ದಾಳೆ. ಇವರಿಬ್ಬರೂ ಈಚೆಗೆ ಬೆಂಗಳೂರಿನಲ್ಲಿ ನಡೆದ ಮಿನಿ ಕರ್ನಾಟಕ ಕ್ರೀಡಾಕೂಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ‘ಪ್ರತೀಕ್ಷಾ ಪರಿಣಿತಾ ಭರವಸೆಯ ಹಾಕಿ ಕ್ರೀಡಾಪಟುಗಳು. ತರಬೇತಿಗೆ ಸೇರಿದ ಒಂದು ವರ್ಷದಲ್ಲೇ ರಾಜ್ಯ ಮಟ್ಟದಲ್ಲಿ ಗೆಲುವು ಸಾಧಿಸಿ ಪದಕ ಗೆದ್ದಿದ್ದಾರೆ. ಹಾಕಿ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಇವರಿಗೆ ಇದೇ ರೀತಿ ಉತ್ತಮ ತರಬೇತಿ ಸಿಕ್ಕರೆ ರಾಷ್ಟ್ರಮಟ್ಟದ ತಾರೆಗಳಾಗಿ ಹೊರಹೊಮ್ಮುತ್ತಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಹಾಕಿ ತರಬೇತುದಾರ ಮಂಜುನಾಥ ಬಗಾಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.