ADVERTISEMENT

ಜಿಲ್ಲೆಯಲ್ಲಿ ಶೇ 90.64ರಷ್ಟು ಮತದಾನ

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ: ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 16:16 IST
Last Updated 13 ಜೂನ್ 2022, 16:16 IST
ಗದುಗಿನ ಮುನ್ಸಿಪಲ್‌ ಕಾಲೇಜು ಎದುರು ಪೆಂಡಾಲ್‌ ಹಾಕಿ ಕುಳಿತಿದ್ದ ಬಿಜೆಪಿ ಮುಖಂಡರು
ಗದುಗಿನ ಮುನ್ಸಿಪಲ್‌ ಕಾಲೇಜು ಎದುರು ಪೆಂಡಾಲ್‌ ಹಾಕಿ ಕುಳಿತಿದ್ದ ಬಿಜೆಪಿ ಮುಖಂಡರು   

ಗದಗ: ವಿಧಾನ ಪರಿಷತ್‌ನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ಗದಗ ಜಿಲ್ಲೆಯಲ್ಲಿ ಮತದಾನವು ಶಾಂತಿಯುತವಾಗಿ ನಡೆಯಿತು. 3,300 ಮತದಾರರ ಪೈಕಿ 2,991 ಮಂದಿ ಮತದಾರರು ಹಕ್ಕು ಚಲಾಯಿಸಿದರು. ಅಂತಿಮವಾಗಿ ಶೇ 90.64ರಷ್ಟು ಮತದಾನ ದಾಖಲಾಯಿತು.

ಗದಗ ನಗರದಲ್ಲಿ ತೆರೆಯಲಾಗಿದ್ದ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಶಿಕ್ಷಕ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಜಿಲ್ಲೆಯಲ್ಲಿ ಬೆಳಿಗ್ಗೆ 10 ಗಂಟೆವರೆಗೆ ಶೇ 13.70, ಮಧ್ಯಾಹ್ನ 12ರ ವೇಳೆಗೆ ಶೇ 37.82, ಮಧ್ಯಾಹ್ನ 2ಕ್ಕೆ ಶೇ 60.24 ಹಾಗೂ ಸಂಜೆ 4ರ ವೇಳೆಗೆ ಶೇ 85.16ರಷ್ಟು ಮತದಾನವಾಗಿತ್ತು. ಅಂತಿಮವಾಗಿ,ಶೇ. 90.64ರಷ್ಟು ಮತದಾನ ಆಯಿತು.

ಮತಚಲಾಯಿಸಲು ಬಂದ ಶಿಕ್ಷಕರಿಗೆ ಮತಗಟ್ಟೆ ಹೊರಭಾಗದಲ್ಲಿ ಕೋವಿಡ್‌–19 ಮಾರ್ಗಸೂಚಿ ಅನ್ವಯ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಯಿತು. ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿ, ಮತದಾನ ಮಾಡಿದ್ದು ವಿಶೇಷವಾಗಿತ್ತು.

ADVERTISEMENT

ಮತಗಟ್ಟೆಗಳ ಹೊರಭಾಗದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳ ಬೆಂಬಲಿಗರು ಪೆಂಡಾಲ್‌ ಹಾಕಿ ಕುಳಿತಿದ್ದರು. ಶಿಕ್ಷಕ ಮತದಾರರಿಗೆ ಚೀಟಿ ನೀಡಿದರು. ಅಭ್ಯರ್ಥಿಗಳ ಬೆಂಬಲಿಗರು ಮತದಾರರ ಮನವೊಲಿಸಲು ಕೊನೆಯ ಗಳಿಗೆಯವರೆಗೂ ಯತ್ನಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಮತದಾನ ಪ್ರಕ್ರಿಯೆ ಮುಗಿದ ನಂತರ, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ‘ಗೆಲುವು ನಮ್ಮ ಅಭ್ಯರ್ಥಿಯದ್ದೇ’ ಎಂದು ಮುನ್ಸಿಪಲ್‌ ಕಾಲೇಜಿನ ಎದುರು ಕೂಗಿ ಸಂಭ್ರಮಿಸಿದರು. ಪಟಾಕಿಯನ್ನೂ ಸಿಡಿಸಿದರು.

ಸಚಿವ ಸಿ.ಸಿ. ಪಾಟೀಲ ಗದಗ ನಗರದಲ್ಲಿ ತೆರೆಯಲಾಗಿದ್ದ ಮತಗಟ್ಟೆಗಳ ಬಳಿಗೆ ತೆರಳಿ ಮತದಾನದ ಮಾಹಿತಿ ಪಡೆದರು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಮುಖಂಡರಾದ ಅನಿಲ್‌ ಮೆಣಸಿನಕಾಯಿ, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಮಾಜಿ ಅಧ್ಯಕ್ಷ ಮೋಹನ ಮಾಳಶೆಟ್ಟಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸದಸ್ಯ ರಾಘವೇಂದ್ರ ಯಳವತ್ತಿ, ಸಿದ್ದು ಪಲ್ಲೇದ, ಮಾಧವ ಗಣಾಚಾರಿ, ಶಿವರಾಜಗೌಡ ಹಿರೇಮನಿಪಾಟೀಲ, ಮಹಿಳಾ ಮುಖಂಡರಾದ ವಿಜಯಲಕ್ಷ್ಮಿ ಮಾನ್ವಿ, ಅಶ್ವಿನಿ ಜಗತಾಪ, ಜಯಶ್ರೀ ಉಗಲಾಟ ಇದ್ದರು.

ಗದಗ ನಗರದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ಮತಗಟ್ಟೆ ಬಳಿ ಹಾಕಿದ್ದ ಪಕ್ಷದ ಪೆಂಡಾಲ್‌ನಲ್ಲೇ ಠಿಕಾಣಿ ಹೂಡಿದ್ದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾಗಿದ್ದ ಮತಗಟ್ಟೆಗಳಿಗೆ ತೆರಳಿ ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.