ADVERTISEMENT

ಗದಗ | ಯೋಗಾಭ್ಯಾಸ ನಿತ್ಯ ಜೀವನದ ಭಾಗವಾಗಲಿ: ಡಾ. ಕಲ್ಲೇಶ ಮೂರಶಿಳ್ಳಿನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:01 IST
Last Updated 28 ಅಕ್ಟೋಬರ್ 2025, 5:01 IST
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ದತ್ತಿ ಉಪನ್ಯಾಸದಲ್ಲಿ ಡಾ. ಕಲ್ಲೇಶ ಮೂರಶಿಳ್ಳಿನ ಮಾತನಾಡಿದರು 
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ದತ್ತಿ ಉಪನ್ಯಾಸದಲ್ಲಿ ಡಾ. ಕಲ್ಲೇಶ ಮೂರಶಿಳ್ಳಿನ ಮಾತನಾಡಿದರು    

ಗದಗ: ‘ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿ ಪರಿಣಾಮದಿಂದ ಮನುಷ್ಯ ಇಂದು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಒಳಗಾಗಿದ್ದಾನೆ. ಇದರಿಂದ ಒತ್ತಡದ ಬದುಕು ನಿರ್ಮಾಣಗೊಂಡಿದೆ. ಈ ಹಿನ್ನಲೆಯಲ್ಲಿ ಯೋಗ ಚಟುವಟಿಕೆಗಳು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಲಿದ್ದು, ಯೋಗಾಭ್ಯಾಸ ನಮ್ಮ ನಿತ್ಯ ಜೀವನದ ಭಾಗವಾಗಬೇಕು’ ಎಂದು ಆಯುರ್ವೇದ ವೈದ್ಯ ಡಾ. ಕಲ್ಲೇಶ ಮೂರಶಿಳ್ಳಿನ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಯೋಗಬಂಧು ಸಂಗಮೇಶ ಮೇಲ್ಮುರಿ ಅವರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸದಲ್ಲಿ ‘ಯೋಗ ಮತ್ತು ಆರೋಗ್ಯ’ ವಿಷಯ ಕುರಿತು ಮಾತನಾಡಿದರು.

ಸಂಗಮೇಶ ಮೇಲ್ಮುರಿ ಅವರ ಸಂಸ್ಮರಣೆ ಮಾಡಿದ ಸಾಹಿತಿ ಅಂದಾನೆಪ್ಪ ವಿಭೂತಿ, ಎಲ್‌ಐಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ನಿವೃತ್ತಿಯಾದ ನಂತರ ಯೋಗ ಮತ್ತು ಆಯುರ್ವೇದ ಪ್ರಚಾರದಲ್ಲಿ ಅವರ ಸಾಧನೆ ತಿಳಿಸಿದರು. ದಾನಿಗಳಾಗಿ ಅನೇಕ ಸಮಾಜೋಪಯೋಗಿ ಕಾರ್ಯಗಳಲ್ಲಿ ಭಾಗಿಯಾಗಿದ್ದನ್ನು ಸ್ಮರಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ‘ಒಂದು ಕಾಲದಲ್ಲಿ ಅನ್ನದ ಕೊರತೆ ಇತ್ತು. ಆದರೆ, ಇಂದು ಆರೋಗ್ಯದ ಕೊರತೆ ಇದೆ. ಆರೋಗ್ಯ ಅನಕ್ಷರತೆಯಿಂದ ದುಡಿಮೆಯ ಬಹುಪಾಲನ್ನು ಆರೋಗ್ಯ ರಕ್ಷಣೆಗಾಗಿ ಕಳೆಯುವ ಸಂದರ್ಭ ಒದಗಿ ಬಂದಿದೆ. ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಆರೋಗ್ಯ ಶಿಕ್ಷಣ ನೀಡುವ ಅವಶ್ಯಕತೆ ಇದೆ’ ಎಂದರು.

ಕಾರ್ಯಕ್ರಮದಲ್ಲಿ ಡಾ. ಧನೇಶ ದೇಸಾಯಿ, ಡಾ. ಆರ್.ಎನ್.ಗೋಡಬೋಲೆ, ಡಾ. ಅರ್ಜುನ ಗೊಳಸಂಗಿ, ಅನ್ನದಾನಿ ಹಿರೇಮಠ, ಬಿ.ಎಸ್.ಹಿಂಡಿ, ವಿ.ಎಸ್.ದಲಾಲಿ, ಎಸ್.ಯು.ಸಜ್ಜನಶೆಟ್ಟರ, ರಾಜಶೇಖರ ಕರಡಿ, ರಾಜೇಶ್ವರಿ ಬಡ್ನಿ, ಅಶೋಕ ಸತ್ಯರಡ್ಡಿ, ಶಕುಂತಲಾ ಗಿಡ್ನಂದಿ, ಅಶೋಕ ಮತ್ತಿಗಟ್ಟಿ, ಜಯನಗೌಡ ಪಾಟೀಲ, ಅಮರೇಶ ರಾಂಪೂರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕೊಟ್ರೇಶ ಮೇಲ್ಮುರಿ ವೇದಿಕೆಯಲ್ಲಿದ್ದರು. ರಾಹುಲ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು.

ದೈಹಿಕ ಸಮಸ್ಯೆಗಳಿಗೆ ಮನಸ್ಸೇ ಮೂಲವಾಗಿರುವುದರಿಂದ ಮನಸ್ಸಿನ ನಿಗ್ರಹ ಯೋಗದಿಂದ ಮಾತ್ರ ಸಾಧ್ಯ. ಆತ್ಮವಿಶ್ವಾಸ ಆತ್ಮಪ್ರಜ್ಞೆ ವಿಶ್ರಾಂತಿ ಮತ್ತು ಉತ್ತಮ ಮನಃಸ್ಥಿತಿ ಹೊಂದಲು ಯೋಗ ಸಹಕಾರಿ
ಡಾ. ಕಲ್ಲೇಶ ಮೂರಶಿಳ್ಳಿನ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.