ADVERTISEMENT

ಗದಗ: ಹೆದ್ದಾರಿವರೆಗೆ ಮೃಗಾಲಯ ವಿಸ್ತರಣೆ; ಹೈಟೆಕ್ ಸ್ಪರ್ಶ ನೀಡಲು ಮಾಸ್ಟರ್‌ಪ್ಲಾನ್

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 21 ಮಾರ್ಚ್ 2025, 4:19 IST
Last Updated 21 ಮಾರ್ಚ್ 2025, 4:19 IST
ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಪ್ರವೇಶದ್ವಾರದ ಉದ್ದೇಶಿತ ವಿನ್ಯಾಸ
ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಪ್ರವೇಶದ್ವಾರದ ಉದ್ದೇಶಿತ ವಿನ್ಯಾಸ   

ಗದಗ: ಪ್ರತಿ ವರ್ಷ ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆಯುವ ಇಲ್ಲಿನ ಗದಗ ಮೃಗಾಲಯವನ್ನು ಅಭಿವೃದ್ಧಿ ವಿಷಯದಲ್ಲಿ ಮತ್ತೊಂದು ಹಂತ ಮೇಲಕ್ಕೆತ್ತುವ ಯೋಜನೆಯನ್ನು ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ ರೂಪಿಸಿದ್ದು, ಅದರಂತೆ ಗದಗ ಮೃಗಾಲಯವು ಹುಬ್ಬಳ್ಳಿ– ಹೊಸಪೇಟೆ ಹೆದ್ದಾರಿವರೆಗೆ ವಿಸ್ತರಣೆಗೊಳ್ಳಲಿದೆ.

ಪ್ರಸ್ತುತ 40.02 ಎಕರೆಯಲ್ಲಿರುವ ಮೃಗಾಲಯವು ಹೊಸ ಸೌಲಭ್ಯಗಳ ಜತೆಗೆ 13.20 ಎಕರೆಯಷ್ಟು ವಿಸ್ತಾರಗೊಳ್ಳಲಿದೆ. ಹೆದ್ದಾರಿಗೆ ಹೊಂದಿಕೊಂಡಂತೆ ಆಕರ್ಷಕ ಪ್ರವೇಶದ್ವಾರ ನಿರ್ಮಾಣ ಈ ಯೋಜನೆಯ ಪ್ರಮುಖ ಭಾಗವಾಗಿದೆ. ಜತೆಗೆ ಆ್ಯಂಪಿಥಿಯೇಟರ್‌ ನಿರ್ಮಾಣ, ಕ್ಲಾಕ್‌ರೂಮ್‌ ಸೌಲಭ್ಯ, ಫುಡ್‌ಕೋರ್ಟ್‌– ರೆಸ್ಟೋರೆಂಟ್‌ ಸ್ಥಾಪನೆ, ಕರಕುಶಲ ವಸ್ತುಗಳ ಮಾರಾಟ ಮಳಿಗೆ, ವಿಶಾಲವಾದ ಪಾರ್ಕಿಂಗ್‌ ಏರಿಯಾ ಸೇರಿದಂತೆ ಪ್ರವಾಸಿಗರಿಗೆ ಅತ್ಯಾಧುನಿಕ ಹಾಗೂ ಆರಾಮದಾಯಕ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ.

ಅರಣ್ಯ ಸಚಿವರಾಗಿದ್ದ ಕೆ.ಎಚ್‌. ಪಾಟೀಲ ಅವರಿಂದ 1972ರಲ್ಲಿ ಪ್ರಾರಂಭಗೊಂಡ ಬಿಂಕದಕಟ್ಟಿ ಮೃಗಾಲಯ ಅಭಿವೃದ್ಧಿ ವಿಚಾರದಲ್ಲಿ ಆರಂಭದಿಂದ ಈವರೆಗೆ ಗಮನಾರ್ಹ ಹೆಜ್ಜೆಗಳನ್ನು ಇರಿಸುತ್ತ ಬಂದಿದೆ. ಪ್ರಸ್ತುತ ಗದಗ ಮೃಗಾಲಯವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ಪ್ರವಾಸಿಗರಿಗೆ ಮನರಂಜನೆ ಜತೆಗೆ ಮಾಹಿತಿಯನ್ನೂ ಒದಗಿಸುತ್ತಿದೆ.

ADVERTISEMENT

ಹುಲಿ, ಸಿಂಹ, ಚಿರತೆ ಹಾಗೂ ಇನ್ನಿತರ ಪ್ರಾಣಿಗಳನ್ನೊಳಗೊಂಡು ಸುಮಾರು 42 ವಿವಿಧ ಪ್ರಭೇದಗಳ 450ಕ್ಕೂ ಹೆಚ್ಚಿನ ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಜತೆಗೆ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯದಲ್ಲೂ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.

ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದು, ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವುದರ ಜತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಮೃಗಾಲಯ ವಿಸ್ತರಣೆ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಗದಗ ಅರಣ್ಯ ಇಲಾಖೆ ಮಾಸ್ಟರ್‌ಪ್ಲಾನ್‌ ರೂಪಿಸಿದೆ. ಗದಗ ಮೃಗಾಲಯ ಅಭಿವೃದ್ಧಿಗಾಗಿ ಭೂಸ್ವಾಧೀನ ಪಡಿಸಿಕೊಂಡ ಭೂಮಿಯ ಶಂಕುಸ್ಥಾಪನೆ ಕೂಡ ನೆರವೇರಿದೆ ಎಂದು ಗದಗ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಗದಗ ಮೃಗಾಲಯ ಅಭಿವೃದ್ಧಿಪಡಿಸಲು ವಿಶೇಷ ಆಸಕ್ತಿ ವಹಿಸಿರುವ ಸಚಿವ ಎಚ್‌.ಕೆ. ಪಾಟೀಲ ಅವರ ದೂರದೃಷ್ಟಿತ್ವದಂತೆ ಮೃಗಾಲಯವನ್ನು ಹೆದ್ದಾರಿವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. ಮೂರು ಹಂತದಲ್ಲಿ ಅನುಷ್ಠಾನಗೊಳ್ಳಲಿದೆ
ಸಂತೋಷ್‌ ಕುಮಾರ್‌ ಕೆಂಚಪ್ಪನವರ, ಡಿಸಿಎಫ್‌ ಗದಗ
ಮುಂಬರುವ ದಿನಗಳಲ್ಲಿ ಜಿರಾಫೆ ಜೀಬ್ರಾ ಕಾಡುಕೋಣಗಳಂತಹ ಆಕರ್ಷಕ ಪ್ರಾಣಿಗಳನ್ನು ತಂದು ಗದಗ ಮೃಗಾಲಯವನ್ನು ದೊಡ್ಡಮಟ್ಟಕ್ಕೆ ಏರಿಸುವ ಉದ್ದೇಶ ಹೊಂದಲಾಗಿದೆ. ಇದು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನೊಂದು ಹಂತಕ್ಕೆ ಮೇಲೆತ್ತಲಿದೆ
ಸ್ನೇಹಾ ಕೊಪ್ಪಳ, ಗದಗ ಮೃಗಾಲಯ ಆರ್‌ಎಫ್‌ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.