ಗದಗ: ಬಿಂಕದಕಟ್ಟಿಯ ಗದಗ ಮೃಗಾಲಯದಲ್ಲಿನ ಶಿವ ಮತ್ತು ಗಂಗಾ ಹೆಸರಿನ ಸಿಂಹದ ಜೋಡಿ ಆರು ತಿಂಗಳ ಹಿಂದೆ ಎರಡು ಮರಿಗಳಿಗೆ ಜನ್ಮನೀಡಿದ್ದವು. ಇನ್ನು ಕೆಲವೇ ದಿನಗಳಲ್ಲಿ ಅವುಗಳನ್ನು ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಿಸುವ ಸಿದ್ಧತೆಯನ್ನು ಮೃಗಾಲಯದ ಸಿಬ್ಬಂದಿ ಆರಂಭಿಸಿದ್ದಾರೆ.
ಸಿಂಹದ ಮರಿಗಳನ್ನು ಹೊರಜಗತ್ತಿಗೆ ಪರಿಚಯಿಸುವುದಕ್ಕೂ ಮುನ್ನ ಅವುಗಳ ಬೆಳವಣಿಗೆಗೆ ಸ್ವಲ್ಪ ಕೂಡ ಅಡಚಣೆ ಆಗದಂತೆ ಮೃಗಾಲಯದ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ. ಇದರಿಂದಾಗಿ ಸಿಂಹದ ಮರಿಗಳು ತಾಯಿಯ ಆರೈಕೆಯಲ್ಲಿ ದಷ್ಟಪುಷ್ಟವಾಗಿ ಬೆಳೆದಿವೆ. ಚುರುಕಿನಿಂದಲೂ ಕೂಡಿವೆ. ಇಲ್ಲಿನ ಸಿಬ್ಬಂದಿ ಆರು ತಿಂಗಳವರೆಗೆ ತಾಯಿ ಮತ್ತು ಮರಿಗಳ ಚಟುವಟಿಕೆಯನ್ನು ಸಿಸಿಟಿವಿ ಮೂಲಕವೇ ವೀಕ್ಷಣೆ ಮಾಡಿದ್ದಾರೆ. ಅವುಗಳಿಗೆ ಮನುಷ್ಯ ಸಂಪರ್ಕ ಏರ್ಪಡದಂತೆ ನಿಗಾ ವಹಿಸಿದ್ದಾರೆ.
‘ಕಾಡಿನ ಸಿಂಹಗಳು ಮರಿಹಾಕುವ ಸಂದರ್ಭದಲ್ಲಿ ತಾವೇ ಸುರಕ್ಷಿತ ಜಾಗ/ಗುಹೆ ಹುಡುಕಿಕೊಳ್ಳುತ್ತವೆ. ಅದೇರೀತಿ, ಮೃಗಾಲಯದಲ್ಲೂ ಕೂಡ ತಾಯಿ ಸಿಂಹಕ್ಕೆ ನೈಸರ್ಗಿಕ ವಾತಾವರಣ ರೂಪಿಸಿ, ಗುಹೆ ಮಾಡಿಕೊಡಲಾಗಿತ್ತು. ತಾಯಿ ಸಿಂಹ ಮರಿಗಳಿಗೆ ಜನ್ಮನೀಡುವುದಕ್ಕೂ ಮುನ್ನ ಲಸಿಕೆಗಳನ್ನು ಹಾಕಿರುವುದರಿಂದ ಮರಿಗಳು ದೊಡ್ಡ ಆಗುವವರೆಗೆ ಅದರ ಅಗತ್ಯ ಇರುವುದಿಲ್ಲ. ತಾಯಿ ತನ್ನ ಮರಿಗಳನ್ನು ತುಂಬ ಚೆನ್ನಾಗಿ ಆರೈಕೆ ಮಾಡಿದೆ’ ಎಂದು ಗದಗ ಮೃಗಾಲಯದ ಅಧಿಕಾರಿ ನಿಖಿಲ್ ಕುಲಕರ್ಣಿ ತಿಳಿಸಿದರು.
‘ಒಂದು ತಿಂಗಳವರೆಗೆ ಮರಿಗಳು ತಾಯಿಯ ಹಾಲು ಕುಡಿಯುತ್ತವೆ. ಬಳಿಕ ಹಾಲುಹಲ್ಲು ಬರುತ್ತವೆ. ಒಂದೂವರೆ ತಿಂಗಳ ಬಳಿಕ ಮರಿಗಳು ಮಾಂಸ ಕಚ್ಚುವುದು, ಎಳೆದು ತಿನ್ನುವ ಪ್ರಯತ್ನ ಆರಂಭಿಸುತ್ತವೆ. ಈ ವೇಳೆ ನಾವು ಹಾಲಿನ ಜತೆಗೆ ಕೈಮಾ ಬೆರೆಸಿ ಕೊಡುತ್ತೇವೆ. ಹಲ್ಲು ಸ್ವಲ್ಪ ಬಲಿತ ನಂತರ ಮಾಂಸ ತಿನ್ನುವ ಕಲೆಯನ್ನು ಮರಿಗಳಿಗೆ ತಾಯಿಯೇ ಹೇಳಿಕೊಡುತ್ತದೆ. ಹೀಗೆ ಮರಿಗಳು ತಾಯಿಯಿಂದಲೇ ಎಲ್ಲ ಗುಣಗಳನ್ನು ಕಲಿಯುವುದರಿಂದ ಮುಂದೆ ಅವು ಮರಿ ಹಾಕಿದಾಗ ತನ್ನ ಮರಿಗಳನ್ನು ಕಾಳಜಿ ಮಾಡುತ್ತವೆ’ ಎನ್ನುತ್ತಾರೆ ಅವರು.
ಈಗ ತಾಯಿ ಸಿಂಹ ಗಂಗಾಗೆ ಮೂರುವರೆ ವರ್ಷ. ಶಿವನಿಗೆ ಐದು ವರ್ಷ ವಯಸ್ಸು. ಒಂದೂವರೆ ವರ್ಷ ಆಗುವವರೆಗೂ ಮರಿಗಳು ತಾಯಿಯ ಜತೆಗೆ ಬೆಳೆಯುತ್ತವೆ. ಮರಿಗಳು ಸ್ವತಂತ್ರವಾಗಿ ಬದುಕುವುದನ್ನು ಕಲಿತ ನಂತರ ಗಂಡು ಹೆಣ್ಣು ಸಿಂಹಗಳು ಮತ್ತೇ ಒಂದಾಗುತ್ತವೆ. ಸಿಂಹದ ಜೋಡಿಗಳಿಗೆ ನಾಲ್ಕೈದು ಬಾರಿ ಮರಿಗಳಿಗೆ ಜನ್ಮನೀಡುವ ಶಕ್ತಿ ಇರುತ್ತದೆ.
‘ಸದ್ಯ ತಾಯಿ ಸಿಂಹಕ್ಕೆ ಕೋಳಿ ಮತ್ತು ಎಮ್ಮೆ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲಾಗುತ್ತಿದೆ. ಈಗ ಜನಿಸಿರುವ ಮರಿಗಳ ಲಿಂಗಪತ್ತೆಗೂ ನಾವು ಗಮನ ಹರಿಸಿಲ್ಲ. ತಾಯಿ ಮತ್ತು ಮರಿಗಳು ಕಾಡಿನ ಪರಿಸರದಲ್ಲಿ ಬೆಳೆದಂತೆ ಸ್ವಚ್ಛಂದವಾಗಿ ಯಾವುದೇ ಅಡಚಣೆ ಇಲ್ಲದೇ ಬೆಳೆಯಬೇಕು ಎಂಬುದಷ್ಟಕ್ಕೆ ಮಾತ್ರ ಗಮನ ಕೊಟ್ಟಿರುವುದರಿಂದ ಮರಿಗಳು ಆರೋಗ್ಯವಾಗಿ ಬೆಳೆದಿವೆ’ ಎಂದು ನಿಖಿಲ್ ತಿಳಿಸಿದರು.
2022ರಲ್ಲಿ ಇಂದೋರ್‌ನಿಂದ ಬಂದಿದ್ದ ಸಿಂಹದ ಜೋಡಿಗಳು ಗದಗ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡು ಎರಡು ಮರಿಗಳಿಗೆ ಜನ್ಮನೀಡಿವೆ. ಸದ್ಯದಲ್ಲೇ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದುಸ್ನೇಹಾ ಗದಗ ಮೃಗಾಲಯ ಆರ್‌ಎಫ್‌ಒ
ಸಿಂಹದ ಮರಿಗಳು ತನ್ನ ತಾಯಿಯಿಂದ ಏನೆಲ್ಲಾ ಗುಣ ಕೌಶಲಗಳನ್ನು ಕಲಿಯಬೇಕೋ ಅದನ್ನು ನೈಸರ್ಗಿಕ ಕಲಿಯಲು ಅವಕಾಶ ಮಾಡಿಕೊಟ್ಟಿದ್ದೇವೆ. ಆರು ತಿಂಗಳವರೆಗೆ ಒಂಚೂರು ಅಡಚಣೆ ಮಾಡಿಲ್ಲನಿಖಿಲ್ ಕುಲಕರ್ಣಿ ಮೃಗಾಲಯದ ಅಧಿಕಾರಿ
ಗದಗ ಮೃಗಾಲಯದಲ್ಲಿರುವ ಶಿವಾ– ಗಂಗಾ ಜೋಡಿ 2024ರ ಮೇ 28ರಂದು ಎರಡು ಮರಿಗಳಿಗೆ ಜನ್ಮ ನೀಡಿದ್ದು ಆರೋಗ್ಯದಿಂದ ಬೆಳೆದಿವೆ. ತಾಯಿ ಸಿಂಹ ಮರಿಗಳನ್ನು ಚೆನ್ನಾಗಿ ಪೋಷಣೆ ಮಾಡಿದ್ದು ಈವರೆಗೆ ಮರಿಗಳು ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರಲಿಲ್ಲ. ಪ್ರತಿ ಮಂಗಳವಾರ ಮೃಗಾಲಯಕ್ಕೆ ರಜೆ ಇದ್ದು ಆ ದಿನಗಳಲ್ಲಿ ಮರಿಗಳನ್ನು ಹೊರ ಜಗತ್ತಿಗೆ ಹೊಂದಿಸುವ ಪ್ರಯತ್ನ ಆರಂಭಿಸಲಾಗಿದೆ. ‘ಒಂದು ದಿನ ಒಂದು ಮರಿಯನ್ನು ಹೊರಕ್ಕೆ ಬಿಡುವುದು. ಮತ್ತೊಂದು ದಿನ ಇನ್ನೊಂದು ಮರಿ ಹೊರಕ್ಕೆ ಬಿಡುವುದು. ಇನ್ನೊಮ್ಮೆ ತಂದೆ ತಾಯಿ ಜತೆಗೆ ಮರಿಗಳನ್ನು ಒಟ್ಟಾಗಿ ಬಿಟ್ಟು ಪರಿಸರವನ್ನು ರೂಢಿ ಮಾಡಿಸಲಾಗುತ್ತಿದೆ. ಅವುಗಳ ಹೊರಜಗತ್ತಿಗೆ ಹೊಂದಿಕೊಳ್ಳಲು ಆರಂಭಿಸಿದ್ದು ಇನ್ನು ಕೆಲವೇ ದಿನಗಳಲ್ಲಿಯೇ ಜನರ ವೀಕ್ಷಣೆಗೆ ಲಭ್ಯವಾಗಿಸಲಾಗುವುದು’ ಎಂದು ಗದಗ ಮೃಗಾಲಯದ ಕಾರ್ಯನಿರ್ವಾಹ ನಿರ್ದೇಶಕ ಲೇಖರಾಜ್ ಮೀನಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.