
ಸೈಬರ್ ಕ್ರೈಂ ಹ್ಯಾಕ್
(ಪ್ರಾತಿನಿಧಿಕ ಚಿತ್ರ)
ಗದಗ: ಡಿಜಿಟಲ್ ನೆಟ್‌ವರ್ಕ್‌ಗಳನ್ನು ಬಳಸಿ ಜನರನ್ನು ವಂಚಿಸುವ ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ಜಾಗ್ರತೆ ವಹಿಸಬೇಕು. ಸೈಬರ್ ವಂಚಕರ ವಂಚನೆಯ ತಂತ್ರವನ್ನು ಸಾರ್ವಜನಿಕರು ಊಹಿಸುವುದು ಕಷ್ಟಸಾಧ್ಯ. ಪ್ರತಿನಿತ್ಯ ಹೊಸ ಬಗೆಯಲ್ಲಿ ಬಲೆ ಬೀಸುತ್ತಲೇ ಇರುತ್ತಾರೆ. ಸೈಬರ್ ಸುರಕ್ಷತೆ ನಮ್ಮ ನಿತ್ಯದ ಬದುಕಿನ ಭಾಗವಾಗಿದ್ದರೆ ಭವಿಷ್ಯದಲ್ಲಿ ಬದುಕುವುದೇ ಕಷ್ಟವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
2025ರಲ್ಲಿ ಗದಗ ಜಿಲ್ಲೆಯಲ್ಲಿ 50 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಸೆನ್ ಪೊಲೀಸ್ ಠಾಣೆಯಲ್ಲಿ 26 ಪ್ರಕರಣಗಳು ಹಾಗೂ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 24 ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳಲ್ಲಿ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಜನರು ಕಳೆದುಕೊಂಡ ಮೊತ್ತ ₹5.34 ಕೋಟಿ.
2024ರಲ್ಲಿ 67 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸೆನ್ ಪೊಲೀಸ್ ಠಾಣೆಯಲ್ಲಿ 51 ಪ್ರಕರಣಗಳು, ಉಳಿದ ಠಾಣೆಗಳಲ್ಲಿ 16 ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹6.64 ಕೋಟಿ ಹಣವನ್ನು ವಂಚಕರು ದೋಚಿದ್ದಾರೆ.
2025ರಲ್ಲಿ ನಡೆದಿರುವ ಸೈಬರ್ ವಂಚನೆಗಳ ಪೈಕಿ ಆರು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ₹84 ಲಕ್ಷ ರಿಕವರಿ ಮಾಡಿದ್ದಾರೆ. ಅದೇರೀತಿ, 2024ರಲ್ಲಿ 10 ಪ್ರಕರಣಗಳನ್ನು ಪತ್ತೆಹಚ್ಚಿ ₹1.04 ಕೋಟಿ ರಿಕವರಿ ಮಾಡಿದ್ದಾರೆ. ವಶಪಡಿಸಿಕೊಂಡ ಮೊತ್ತವನ್ನು ನ್ಯಾಯಾಲಯದ ಮೂಲಕ ದೂರುದಾರರಿಗೆ ನೇರವಾಗಿ ಹಿಂದಿರುಗಿಸಲಾಗಿದೆ. ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲೇ ರಿಕವರಿ ಹೆಚ್ಚು ಎಂಬುದು ಗಮನಾರ್ಹ.
ಯಾವ ರೀತಿ ವಂಚನೆ?:
ಗದಗ ಜಿಲ್ಲೆಯಲ್ಲಿ ನಡೆದಿರುವ ಸೈಬರ್ ವಂಚನೆಗಳ ಪೈಕಿ ಹೂಡಿಕೆ ಆಮಿಷಗಳಿಗೆ ಬಲಿಯಾಗಿ ಜನ ಹಣ ಕಳೆದುಕೊಂಡಿರುವ ಪ್ರಕರಣಗಳು ಜಾಸ್ತಿ ಇವೆ.
ರಾತ್ರೋರಾತ್ರಿ ಶ್ರೀಮಂತರಾಗಬೇಕು ಎಂಬ ಆಸೆ, ಅತಿಯಾದ ಬಡ್ಡಿ ಆಸೆ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಗಂಟೆಗಳಲ್ಲೇ ಲಕ್ಷ ಲಕ್ಷ ದುಡ್ಡು ಸಿಗುತ್ತದೆ ಎಂಬ ವಂಚಕರ ಆಮಿಷದ ಗಾಳಕ್ಕೆ ಬಿದ್ದು 2025ನೇ ಸಾಲಿನಲ್ಲಿ ಹಣ ಕಳೆದುಕೊಂಡ ಪ್ರಕರಣಗಳು 18 ದಾಖಲಾಗಿವೆ. ಐದು ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹಾಗೂ ಉಳಿದವು ಎಪಿಕೆ ಫೈಲ್ ಡೌನ್‌ಲೋಡ್ ಮತ್ತು ಒಟಿಪಿ ಹೇಳಿ ಹಣ ಕಳೆದುಕೊಂಡ ಪ್ರಕರಣಗಳು ದಾಖಲಾಗಿವೆ.
ಪ್ರತಿದಿನವೂ ಹೊಸ ರೂಪ:
ಸೈಬರ್ ವಂಚಕರು ಜನರನ್ನು ಒಂದೇ ಮಾದರಿ ವಂಚಿಸುವುದಿಲ್ಲ. ಪ್ರತಿದಿನವೂ ಹೊಸ ರೂಪದಲ್ಲಿ ವಂಚನೆಯ ಗಾಳ ಬೀಸುತ್ತಾರೆ. ಎಷ್ಟೇ ವಿದ್ಯಾವಂತರಾದರೂ ಜಾಗ್ರತೆ ವಹಿಸದಿದ್ದರೆ ಅವರ ಜಾಲದಿಂದ ನುಣುಚಿಕೊಳ್ಳುವುದು ಸಾಧ್ಯವೇ ಇಲ್ಲ. ಹಾಗಾಗಿ, ಇದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುವುದೇ ಮದ್ದು ಎನ್ನುತ್ತಾರೆ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು.
‘ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೈಬರ್ ಕ್ರೈಂ ಕುರಿತಾಗಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆದರೆ, ನಾವು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ನಾವು ಜನರಿಗೆ ನೀಡುವ ಮಾಹಿತಿ ಔಟ್‌ಡೇಟೆಡ್ ಆಗುತ್ತಿರುತ್ತದೆ. ವಂಚಕರು ಜನರಿಂದ ಹಣ ಕಸಿಯಲು ಪ್ರತಿದಿನ ಹೊಸ ರೂಪದಲ್ಲಿ ಬರುತ್ತಿರುತ್ತಾರೆ’ ಎನ್ನುತ್ತಾರೆ ಪೊಲೀಸರು.
ಖಾತೆಗಳ ಸುರಕ್ಷತೆಗೆ ಗಮನಹರಿಸಿ:
ಜನರು ತಮ್ಮ ಮೊಬೈಲ್‌ಗಳಿಗೆ ಇನ್‌ಸ್ಟಾಲ್ ಮಾಡಿಕೊಂಡಿರುವ ಯಾವುದೇ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಎರಡು ಹಂತದ ದೃಢೀಕರಣ ಆಯ್ಕೆಯನ್ನು ಆನ್ ಮಾಡಿಕೊಳ್ಳಬೇಕು. ಪ್ರತಿಯೊಂದಕ್ಕೂ ಬದಲಿ ಇ–ಮೇಲ್ ಐಡಿ, ಮೊಬೈಲ್ ನಂಬರ್ ಹಾಕಬೇಕು. ಆಟೊ ಡೌನ್‌ಲೋಡ್ ಆಯ್ಕೆ ಆಫ್ ಮಾಡಿರಬೇಕು. ಯಾವುದೇ ಕಾರಣಕ್ಕೂ ಒಟಿಪಿ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಮತ್ತೊಬ್ಬರಿಗೆ ಕೊಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಸ್‌ಆರ್ ಫಂಡ್, ವೈಯಕ್ತಿಕ ಸಾಲ, ಪಿಂಚಣಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವುದಾಗಿ ಹೇಳಿ ಕೆಲವು ದಲ್ಲಾಳಿಗಳು ಬ್ಯಾಂಕ್ ಹಾಗೂ ವೈಯಕ್ತಿಕ ವಿವರಗಳನ್ನು ಪಡೆದು ಕಮಿಷನ್ ಆಸೆಗೆ ವಂಚಕರಿಗೆ ಮಾರುತ್ತಾರೆ. ಇದು ಸೈಬರ್ ವಂಚನೆಗೆ ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೈಬರ್ ಪ್ರಕರಣ ಭೇದಿಸಲು ನಿರಂತರ ತರಬೇತಿ:
ಕೊಲೆ, ದರೋಡೆ ಪ್ರಕರಗಳನ್ನು ವಾರದೊಳಗೆ ಭೇದಿಸುವ ಪೊಲೀಸರಿಗೆ ಸೈಬರ್ ವಂಚನೆ ಪ್ರಕರಣಗಳು ಪ್ರತಿ ಹೆಜ್ಜೆಗೂ ಸವಾಲು ಒಡ್ಡುತ್ತಿವೆ. ಆ ಸವಾಲುಗಳನ್ನು ಮೀರಿ ಪ್ರಕರಣ ಭೇದಿಸಲು ಪೊಲೀಸರಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಮೊಬೈಲ್ ಕಳವು ಪತ್ತೆಗೆ ಹಾಗೂ ಮೊಬೈಲ್ ಹ್ಯಾಕ್ ಆಗಿರುವುದನ್ನು ಭೇದಿಸುವ ಕಲೆ ಕಲಿಸಲಾಗಿದೆ. ಸೈಬರ್ ಪ್ರಕರಣಗಳನ್ನು ಹೇಗೆ ತನಿಖೆ ನಡೆಸಬೇಕು ಎಂಬುದರ ಕುರಿತಾಗಿಯೂ ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಗಳಿಗೆ ರಾಜ್ಯ ಮಟ್ಟದಲ್ಲಿ ಈ ಬಗ್ಗೆ ತರಬೇತಿ ಸಿಗುತ್ತಿದೆ.
2025ರಲ್ಲಿ 50 ಪ್ರಕರಣ ದಾಖಲು | ಅತಿಯಾಸೆಯಿಂದ ಹಣ ಕಳೆದುಕೊಂಡ ಜನತೆ | ಪ್ರಕರಣ ಬೇಧಿಸಲು ಪೊಲೀಸರಿಗೆ ನಿರಂತರ ತರಬೇತಿ
ಸೈಬರ್ ಕ್ರೈಂಗಳಲ್ಲಿ ಬ್ಯಾಂಕ್‌ಗಳು ಏಜೆನ್ಸಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಮುಂದೆ ಸಾಗಬೇಕಿರುವುದರಿಂದ ಪ್ರಕರಣಗಳನ್ನು ಪತ್ತೆ ಹಚ್ಚುವುದು ದೀರ್ಘವಾಗುತ್ತಿದೆ. ಪ್ರಕರಣ ಭೇದಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆರೋಹನ್ ಜಗದೀಶ್ ಎಸ್‌ಪಿ
ಸೈಬರ್ ಕ್ರೈಂ ಬಗ್ಗೆ ಎಚ್ಚರದಿಂದ ಇರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ವಿಡಿಯೊಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರನ್ನು ತಲುಪಲಾಗಿದೆಮಹಾಂತೇಶ ಸಜ್ಜನರ ಪ್ರಭಾರ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ