ಲಕ್ಷ್ಮೇಶ್ವರ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯ ಹಣ ಮೂರು ತಿಂಗಳಿಂದ ಬಂದಿಲ್ಲ. ಇದರಿಂದಾಗಿ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಗೃಹಲಕ್ಷ್ಮಿ ಹಣ ನೇರವಾಗಿ ಫಲಾನುಭವಿ ಮಹಿಳೆಯರ ಖಾತೆಗೆ ಜಮೆ ಆಗುತ್ತದೆ. ಈ ಕುರಿತು ಮೊಬೈಲ್‍ಗೆ ಸಂದೇಶ ಕೂಡ ಬರುತ್ತದೆ.
ಆದರೆ ಇಂಗ್ಲಿಷ್ ಬಾರದ ಮಹಿಳೆಯರು ಗೃಹಲಕ್ಷ್ಮಿ ಹಣ ಬಂದಿದೆಯೇ ಎಂದು ಕೇಳಲು ಬ್ಯಾಂಕಿನಿಂದ ಬ್ಯಾಂಕಿಗೆ ಅಲೆಯುತ್ತಿದ್ದಾರೆ.
‘ಕಾಂಗ್ರೆಸ್ ಉಚಿತ ಯೋಜನೆಗಳ ಭರವಸೆ ಕೊಟ್ಟು ಅಧಿಕಾರದ ಗದ್ದುಗೆ ಹಿಡಿದು ಮೋಸ ಮಾಡುತ್ತಿದೆ. ಅಲ್ಲದೆ ನುಡಿದಂತೆ ನಡೆದುಕೊಳ್ಳದಿದ್ದರೆ ಮುಂದೆ ತಕ್ಕ ಪಾಠ ಕಲಿಸುತ್ತೇವೆ’ ರುದ್ರವ್ವ ಎಚ್ಚರಿಕೆ ನೀಡಿದ್ದಾರೆ.
ಲಕ್ಷ್ಮೇಶ್ವರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಫಲಾನುಭವಿಗಳು ‘ಸಿಎಂ ಸಿದ್ಧರಾಮಯ್ಯನವರು ಪದೇ ಪದೇ ‘ನಮ್ಮದು ನುಡಿದಂತೆ ನಡೆದ ಸರ್ಕಾರ’ ಎನ್ನುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಪ್ರತಿ ತಿಂಗಳು ಹಣ ವರ್ಗಾವಣೆ ಮಾಡುತ್ತೇವೆ ಎಂದಿದ್ದರು. ಆದರೆ ಈಗ ಮೂರು ತಿಂಗಳಾದರೂ ಹಣ ಬಂದಿಲ್ಲ. ಸರ್ಕಾರದ ಹಣದ ಮೇಲೆ ಅವಲಂಬಿತರಾಗಿದ್ದೆವು. ಈಗ ಹಣ ಬರದೆ ಇರುವುದರಿಂದ ಮನೆ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೂ ಹೊಡೆತ ಬಿದ್ದಿದೆ’ ಎಂದು ಲಕ್ಷ್ಮೇಶ್ವರದ ನಿವಾಸಿ ಲಕ್ಷ್ಮವ್ವ ಅಳಲು ತೋಡಿಕೊಂಡರು.
‘ಆದಷ್ಟು ಬೇಗನೇ ಗೃಹಲಕ್ಷ್ಮೀ ಹಣ ಹಾಕಬೇಕು’ ಎಂದು ಮಹಿಳೆಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.