ADVERTISEMENT

ಲಕ್ಷ್ಮೇಶ್ವರ: ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಕಲರವ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 13:12 IST
Last Updated 28 ನವೆಂಬರ್ 2024, 13:12 IST
ಲಕ್ಷ್ಮೇಶ್ವರದ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ 10ನೇ ವರ್ಷದ ಅಗಡಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕನ್ನಡದ ಹಾಡಿಗೆ ನೃತ್ಯ ಮಾಡಿದರು
ಲಕ್ಷ್ಮೇಶ್ವರದ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ 10ನೇ ವರ್ಷದ ಅಗಡಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕನ್ನಡದ ಹಾಡಿಗೆ ನೃತ್ಯ ಮಾಡಿದರು   

ಲಕ್ಷ್ಮೇಶ್ವರ: ಇಡೀ ಕ್ಯಾಂಪಸ್ ತುಂಬ ಹಳದಿ ಕೆಂಪು ಬಾವುಟಗಳ ಹಾರಾಟ, ಎಲ್ಲೆಲ್ಲೂ ಕನ್ನಡ ನಾಡು, ನುಡಿ ವೈಭವ ಸಾರುವ ಹಾಡುಗಳಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ಯುವಕ ಯುವತಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರ ಕೊರಳಲ್ಲಿ ರಾರಾಜಿಸುತ್ತಿದ್ದ ಕನ್ನಡ ಶಾಲುಗಳಿಂದಾಗಿ ಇಡೀ ಕಾಲೇಜು ಕನ್ನಡಮಯವಾಗಿತ್ತು. ಹೌದು. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಲಕ್ಷ್ಮೇಶ್ವರದ ಶ್ರೀಮತಿ ಕಮಲಮ್ಮ ಮತ್ತು ಶ್ರೀ ವೆಂಕಪ್ಪ ಎಂ. ಅಗಡಿ ಎಂಜಿನೀಯರಿಂಗ್ ಕಾಲೇಜಿನ ಆವರಣದಲ್ಲಿ.

ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ಹತ್ತನೇ ವರ್ಷದ ಅಗಡಿ ಕನ್ನಡ ಹಬ್ಬವನ್ನು ಆಯೋಜಿಸಲಾಗಿತ್ತು. ಪ್ರಾಚಾರ್ಯ ಪರಶುರಾಮ ಬಾರಕಿ ಅವರು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.

ಆನಂತರ 45 ನಿಮಿಷಗಳಲ್ಲಿ ಕನ್ನಡ ನಾಡಿನ ವೈಭವ, ಪರಂಪರೆ, ಸಾರುವ ಕನ್ನಡ ಗೀತೆಗಳಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೊಗಸಾಗಿ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು.

ADVERTISEMENT

ಸೋಜುಗಾದ ಸೂಜಿ ಮಲ್ಲೀಗೆ.. ಮಹಾದೇವ ನಿನ್ನ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಹಾಡಿಗಂತೂ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿ ಕುಣಿದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕನ್ನಡ ಹಬ್ಬದ ನಿಮಿತ್ತ ಕೈ ಮತ್ತು ಕೊರಳಲ್ಲಿ ಕನ್ನಡ ಶಾಲುಗಳನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪ್ರಾಚಾರ್ಯರು, ಉಪನ್ಯಾಸಕ ಸಿಬ್ಬಂದಿ ಧರಿಸಿದ್ದರು.

ಕೇವಲ ಇಂಗ್ಲಿಷ್‌ ಭಾಷೆಯೇ ಕೇಳುತ್ತಿದ್ದ ಕಾಲೇಜಿನ ಆವರಣದಲ್ಲಿ ಕನ್ನಡದ ಹಾಡುಗಳು ಅಲೆ ಅಲೆಯಾಗಿ ತೇಲಿ ಬಂದವು.

ಅಗಡಿ ಪಿಯು ಕಾಲೇಜಿನ ಪ್ರಾಚಾರ್ಯ ಎನ್. ಹಯವದನ, ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ, ನಾಗರಾಜ ಕಳಸಾಪುರ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.