
ಗಜೇಂದ್ರಗಡ: ‘ಸಹಕಾರ ತತ್ವದಡಿಯಲ್ಲಿ ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿದ ದಿ.ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯ ಶ್ಲಾಘನೀಯ’ ಎಂದು ಸಚಿವ, ಪಟ್ಟಣ ಸಹಕಾರ ಬ್ಯಾಂಕ್ ಮಹಾಮಂಡಳಿಯ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದ ತೋಂಟದಾರ್ಯ ಸಿಬಿಎಸ್‌ಇ ಶಾಲೆ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡ ದಿ.ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನವೀಕೃತ ಕಚೇರಿ ಉದ್ಘಾಟನೆ ಹಾಗೂ ಬ್ಯಾಂಕ್ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದಿ.ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮುಂದಿನ ವರ್ಷದಲ್ಲಿ ತನ್ನ ಠೇವಣಿ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಮಾಜಮುಖಿ ಕಾರ್ಯ ನಡೆಸಬೇಕು. ಬ್ಯಾಂಕ್ ಬೆಳವಣಿಗೆಗೆ ಆಡಳಿತ ಮಂಡಳಿ ಶ್ರಮಿಸಬೇಕು’ ಎಂದರು.
‘ಸಮಾಜದಲ್ಲಿ ಸಣ್ಣ ವ್ಯಾಪಾರಿಗಳಿಗೆ ಅಧಿಕ ಬಡ್ಡಿ ಸಾಲದಿಂದ ಶೋಷಣೆ ನಡೆಯುತ್ತಿದ್ದು, ಅಂತಹವರನ್ನು ಗುರುತಿಸಿ ಸಾಲ ನೀಡುವ ಮೂಲಕ ಶೋಷಣೆಯಿಂದ ಮುಕ್ತಗೊಳಿಸಬೇಕು’ ಎಂದು ಸೂಚಿಸಿದರು.
ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ‘ಬ್ಯಾಂಕ್ ಆಡಳಿತ ಮಂಡಳಿ ಪ್ರತಿಯೊಂದು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯ ನಡೆಸುತ್ತಿದ್ದಾರೆ’ ಎಂದರು.
ಬ್ಯಾಂಕ್ ಅಧ್ಯಕ್ಷ ಎಸ್.ಕೆ. ಚನ್ನಿ, ಉಪಾಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿದರು. ಬ್ಯಾಂಕ್ ಸದಸ್ಯರ ಮಕ್ಕಳಿಗೆ ಲ್ಯಾಪ್‌ಟಾಪ್ ಹಾಗೂ ₹25 ಸಾವಿರ ಧನ ಸಹಾಯ, ಮಹಿಳಾ ಸಬಲೀಕರಣ ಯೋಜನೆ ಅಡಿಯಲ್ಲಿ 10 ಮಹಿಳೆಯರಿಗೆ ತಲಾ ₹50 ಸಾವಿರ ಚೆಕ್ ವಿತರಿಸಲಾಯಿತು. 75 ವರ್ಷ ಬ್ಯಾಂಕ್ ಹಿರಿಯ ಸದಸ್ಯರಿಗೆ ಸನ್ಮಾನಿಸಲಾಯಿತು.
ಈ ವೇಳೆ ಜಿಲ್ಲಾ ಸಹಕಾರ ಸಂಘದ ಉಪ ನಿಬಂಧಕಿ ಎಸ್.ಎಸ್. ಕಬಾಡಿ, ಬ್ಯಾಂಕ್ ನಿರ್ದೇಶಕ ಎಸ್.ಎಸ್. ಪಟ್ಟೇದ, ಡಾ.ಬಿ.ವಿ. ಕಂಬಳ್ಯಾಳ, ಪಿ.ಎಸ್. ಕಡ್ಡಿ, ರಾಮಣ್ಣ ನಿಡಗುಂದಿ, ಪರಸಪ್ಪ ತಳವಾರ, ಪಿ.ಬಿ. ಮ್ಯಾಗೇರಿ, ವಿ.ಎಸ್. ನಂದಿಹಾಳ, ರಾಜಮತಿ ಹೂಲಿ, ಸುಜಾತಾ ಮೆಣಸಗಿ, ಕಲ್ಲಪ್ಪ ಸಜ್ಜನರ, ಬ್ಯಾಂಕ್ ವ್ಯವಸ್ಥಾಪಕ ರಾಜಶೇಖರ ಹೊಸಂಗಡಿ, ಮಹಾಂತೇಶ ಇಂಡಿ, ಪ್ರದೀಪ ಮ್ಯಾಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.