
ಗಜೇಂದ್ರಗಡ: ಪಟ್ಟಣದ ಟಗರಗಲ್ಲಿಯಲ್ಲಿ ಇತ್ತೀಚೆಗೆ ಮನೆಯಲ್ಲಿ ನಡೆದ ಕಳವು ಪ್ರಕರಣವನ್ನು ಸ್ಥಳೀಯ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ಒಟ್ಟು ₹4,50,568 ಮೌಲ್ಯದ 78.730 ಗ್ರಾಂ ಚಿನ್ನ, 711.47 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಟಗರಗಲ್ಲಿಯಲ್ಲಿ ಫೆ.17ರ ರಾತ್ರಿ 11.45 ರಿಂದ ಫೆ.18ರ ಬೆಳಗಿನ 6.30ರ ನಡುವೆ ಬಾಷಾಸಾಬ ಡಾಲಾಯತ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಡಿ.ಎಸ್.ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನ, ರೋಣ ಸಿಪಿಐ ವಿಜಯಕುಮಾರ ನೇತೃತ್ವದಲ್ಲಿ ಗಜೇಂದ್ರಗಡ ಠಾಣೆಯ ಪಿಎಸ್‌ಐ ಪ್ರಕಾಶ ಡಿ, ಸಿಬ್ಬಂದಿಗಳಾದ ಜೆ.ಬಿ.ಪೂಜಾರ, ಎಂ.ಎಂ.ಶಿಗೀಹಳ್ಳಿ, ಸದಾಶಿವ ಕದಂ, ಎಂ.ಕೆ.ಮುನೇನಕೊಪ್ಪ, ಎಸ್.ಎ.ಖಾಜಿ, ಆರ್.ಎಸ್.ಬನ್ನಿಗೋಳ, ಎಚ್.ವೈ.ಮ್ಯಾಗಳಮನಿ, ಮುತ್ತಪ್ಪ ಬಾವಿ, ಬೆರಳಚ್ಚು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಫೆ.23 ರಂದು ಕುಷ್ಟಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬ್ರಿಜ್ ಹತ್ತಿರ ಆರೋಪಿಗಳಾದ ನಾಗರಾಜ ದೇವರಮನಿ ಅವರ ಮೇಲೆ ಸಂಶಯಗೊಂಡು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡು, ಇನ್ನೂಳಿದ ಶಿವಮ್ಮ ನಾಗರಾಜ ದೇವರಮನಿ ಇರಿಬಗೇರಿ ಹಾಗೂ ಬಸಮ್ಮ ಹನಮಂತ ಇರಿಬಗೇರಿ ಅವರನ್ನು ರಾಯಚೂರ ಜಿಲ್ಲೆಯ ದೇವದುರ್ಗ ತಾಲ್ಲೂಕು ಗಲಗ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ.
ಆರೋಪಿ ನಾಗರಾಜ ದೇವರಮನಿ ಮೇಲೆ ರಾಯಚೂರ ಜಿಲ್ಲೆಯ ಲಿಂಗಸೂರ, ಮಾನ್ವಿ, ತುರವಿಹಾಳ, ರಾಯಚೂರ ಗ್ರಾಮೀಣ ಬಾಗಲಕೋಟ ಜಿಲ್ಲೆಯ ಇಳಕಲ್, ಬೆಂಗಳೂರಿನ ರಾಜಾಜಿನಗರ, ಬಳ್ಳಾರಿಯ ಗಾಂಧಿನಗರ, ವಿಜಯಪುರ ಜಿಲ್ಲೆಯ ಸಿಂದಗಿ, ಯಾದಗಿರಿ ತಾಲ್ಲೂಕಿನ ಸೈದಾಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.