ಲಕ್ಷ್ಮೇಶ್ವರ: ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಗಣಪತಿ ದೇವಸ್ಥಾನದ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜುಲೈ 26, 27 ಮತ್ತು 28ರಂದು ಜರುಗಲಿದೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ್ ಹೇಳಿದರು.
ದೇವಸ್ಥಾನದ ಆವರಣದಲ್ಲಿ ಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಜ.ವೀರಗಂಗಾಧರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಇಚ್ಛೆ ಆಗಿತ್ತು. ಅದಕ್ಕಾಗಿ ನಾವು ವರ್ತಕರೆಲ್ಲ ದೇಣಿಗೆ ಸಂಗ್ರಹಿಸಿ ವರ್ಷದ ಹಿಂದೆ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಿಸಿದ್ದೆವು. ಕೊಲ್ಹಾಪುರ ಹತ್ತಿರ ದೊರೆಯುವ ಜ್ಯೋತಿರ್ಭಾ ಕಲ್ಲುಗಳಿಂದ ಅಲ್ಲಿನ ಶಿಲ್ಪಿಗಳು ರಾಮಮಂದಿರ ಸ್ವರೂಪದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಅಲ್ಲದೆ ರಾಜಸ್ಥಾನದ ಜೈಪುರ ವೈಟ್ ಮಾರ್ಬಲ್‍ನಿಂದ ಸುಂದರ ಗಣೇಶನ ಮೂರ್ತಿ ನಿರ್ಮಾಣಗೊಂಡಿದೆ. ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ವಿವಿಧ ದೇವರ ಮೂರ್ತಿಗಳನ್ನು ಲಕ್ಕುಂಡಿಯ ಕಲಾವಿದರು ನಿರ್ಮಿಸಿದ್ದಾರೆ. ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿಸಲಾಗುವುದು. ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.
ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಎಸ್.ಕೆ.ಕಾಳಪ್ಪನವರ ಮಾತನಾಡಿ, ‘ರಂಭಾಪುರಿ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ದೇವಸ್ಥಾನ ಉದ್ಘಾಟನೆಯಾಗಲಿದೆ. ಜು.26ರಂದು ಗಣಪತಿ, ಈಶ್ವರ, ಬಸವಣ್ಣ, ಆಂಜನೇಯ ಹಾಗೂ ನಾಗದೇವತೆಗಳ ಮೂರ್ತಿಗಳ ಮೆರವಣಿಗೆ, 27ರಂದು ಹೋಮ, ಹವನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು 28ರಂದು ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನ ಲೋಕಾರ್ಪಣೆ ಮತ್ತು ಅದೇ ದಿನ ಮಧ್ಯಾಹ್ನ 12ಕ್ಕೆ ಧರ್ಮ ಸಭೆ ನಡೆಯಲಿದೆ. ಅನೇಕ ಮಠಾಧೀಶರು, ಸಂಸದರು, ಶಾಸಕರು, ಮಾಜಿ ಶಾಸಕರು, ಪುರಸಭೆ ಅಧ್ಯಕ್ಷರು, ಜನಪ್ರತಿನಿಧಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ’ ಎಂದರು.
ಮಹಾದೇವಪ್ಪ ರಗಟಿ, ಸಿದ್ದನಗೌಡ ಬಳ್ಳೊಳ್ಳಿ, ಸಂಗಣ್ಣ ಹನುಮಸಾಗರ, ಶಿವಯೋಗಿ ಗಡ್ಡದೇವರಮಠ, ಬಸವರಾಜ ಮಹಾಂತಶೆಟ್ಟರ, ಗಣೇಶ ಬೇವಿನಮರದ, ತೋಂಟೇಶ ಮಾನ್ವಿ, ವಿಜಯಕುಮಾರ ಹತ್ತಿಕಾಳ, ಸಂತೋಷ ಬಾಳಿಕಾಯಿ, ರಾಜು ಕೊಟಗಿ, ಪುಲಕೇಶಿ ಉಪನಾಳ, ಶಿವಯೋಗಿ ವಡಕಣ್ಣವರ, ವಿಜಯ ಬೂದಿಹಾಳ, ರಾಘವೇಂದ್ರ ಸದಾವರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.