ಶಿರಹಟ್ಟಿ: ತಾಲ್ಲೂಕಿನಲ್ಲಿ ಗಾಂಜಾ ಸೇರಿದಂತೆ ಇತರೆ ಮಾದಕವಸ್ತುಗಳ ಮತ್ತಿಗೆ ಕೆಲ ವಿದ್ಯಾರ್ಥಿಗಳು, ಯುವಕರು, ವಯೋವೃದ್ಧರು ಮಾರುಹೋಗುತ್ತಿದ್ದು, ಕಡಿವಾಣ ಹಾಕಬೇಕಿದ್ದ ಇಲಾಖೆಗಳು ಕೈಚೆಲ್ಲಿ ಕುಳಿತಿವೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಗಾಂಜಾ, ಇಸ್ಪೀಟ್, ಸಿಗರೇಟ್, ಮದ್ಯ ಹಾಗೂ ತಂಬಾಕು ಸೇವನೆಯಂತಹ ಮಾದಕವಸ್ತುಗಳು ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದ್ದರೂ ಅದಕ್ಕೆ ಕಡಿವಾಣ ಇಲ್ಲದಂತಾಗಿದೆ. ದುಪ್ಪಟ್ಟು ಲಾಭಕ್ಕಾಗಿ ದಂಧೆಕೋರರು ಗೋಪ್ಯವಾಗಿ ವಹಿವಾಟು ನಡೆಸಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಈ ಕುರಿತು ಕ್ರಮ ತೆಗೆದುಕೊಳ್ಳಬೇಕಿದ್ದ ಇಲಾಖೆಗಳು ಕಾಟಾಚಾರಕ್ಕೆ ಬೆರಳೆಣಿಕೆಯಷ್ಟು ಪ್ರಕರಣ ದಾಖಲಿಸಿ, ಜಾರಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಸೃಷ್ಟಿಸಿದೆ ಎಂದು ಪ್ರಜ್ಞಾವಂತರು ಕಿಡಿಕಾರಿದ್ದಾರೆ.
ನಿತ್ಯ ಗಾಂಜಾ ಅಮಲು:
ಪಟ್ಟಣದ ಹಳೆಯ ಡಿ.ಇಡಿ ಕಾಲೇಜಿನ ಆವರಣ, ಗದಗ ಹೊನ್ನಾಳಿ ನೂತನ ರಾಜ್ಯ ಹೆದ್ದಾರಿ, ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯಗಳೇ ಗಾಂಜಾ ಗಿರಾಕಿಗಳ ಅಡ್ಡವಾಗಿ ಮಾರ್ಪಟ್ಟಿವೆ.
1 ಕೆ.ಜಿ. ಗಾಂಜಾ ಸೊಪ್ಪು ₹1 ಲಕ್ಷದಿಂದ ₹1.50 ಲಕ್ಷದವರೆಗೆ ಮಾರಾಟವಾಗುತ್ತಿದ್ದು, ವ್ಯಸನಿಗಳು ಒಂದು ಪ್ಯಾಕೆಟ್‌ಗೆ (10ರಿಂದ 15 ಗ್ರಾಂ) ₹300ರಿಂದ ₹500ರ ವರೆಗೆ ಖರೀದಿಸಿ ರಾಜಾರೋಷವಾಗಿ ಸೇವನೆ ಮಾಡುತ್ತಿದ್ದಾರೆ. ಅಷ್ಟು ಸಲೀಸಾಗಿ ಗಾಂಜಾ ಪ್ಯಾಕೆಟ್‌ಗಳು ಸಿಗುತ್ತಿವೆ. ಅಲ್ಲದೇ ತಾಲ್ಲೂಕಿನ ಕಡಕೋಳ, ಬೆಳ್ಳಟ್ಟಿ, ನಾರಾಯಣಪುರ, ಮಾಗಡಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಗಾಂಜಾ ಸೇವನೆ ಜೋರಾಗಿದ್ದು, ದಿನದಿಂದ ದಿನಕ್ಕೆ ಪಟ್ಟಣದ ಸಾಮಾಜಿಕ ಆರೋಗ್ಯ ಕುಸಿಯುತ್ತಿದೆ.
ಬೆರಳೆಣಿಕೆಯಷ್ಟು ಪ್ರಕರಣ:
ಗಾಂಜಾದ ಅಮಲು ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಏರುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅದನ್ನು ಇಳಿಸುವ ಗೋಜಿಗೆ ಹೋಗುತ್ತಿಲ್ಲ. ಬದಲಾಗಿ ಕಂಡರೂ ಕಾಣದ ರೀತಿಯ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಳೆದ ವರ್ಷದಿಂದ ಅಬಕಾರಿ ಇಲಾಖೆಯಿಂದ ಕೇವಲ 3 ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಇಲಾಖೆಯಲ್ಲಿ ಜ.1ರಿಂದ ಇಲ್ಲಿಯವರೆಗೆ ಶಿರಹಟ್ಟಿ, ನಾರಾಯಣಪುರ ಹಾಗೂ ಬೆಳ್ಳಟ್ಟಿ ಸೇರಿದಂತೆ ಎನ್‌ಡಿಪಿಸ್ ಕಾಯ್ದೆ ಅಡಿಯಲ್ಲಿ ಕೇವಲ 4 ಪ್ರಕರಣಗಳನ್ನು ದಾಖಲಿಸಲಾಗಿದೆ.
ವಿಪರೀತ ತಂಬಾಕು ಸೇವನೆ:
ಕೋಟ್ಪಾ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಅಪರಾಧ ಎಂಬ ಕಾನೂನಿನ ಅರಿವಿದ್ದರೂ ಮಾರಾಟ ಮಾತ್ರ ನಿಲ್ಲುತ್ತಿಲ್ಲ. ಸ್ಥಳೀಯ ಪೇಟೆ ಆಂಜನೇಯ ದೇವಸ್ಥಾನದ ಹತ್ತಿರ ಇರುವ ಪ್ರಾಥಮಿಕ ಶಾಲೆಗಳ ಮುಂಭಾಗದ ಫುಟ್‌ಪಾತ್‌ನಲ್ಲಿ ಡಬ್ಬಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳನ್ನು ತಂಬಾಕು ಸೇವನೆಗೆ ಪ್ರೇರೆಪಿಸಿದಂತಾಗುತ್ತಿದೆ. ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹೆಚ್ಚಾಗಿ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದರೂ ಪಂಚಾಯಿತಿ ಅಧಿಕಾರಿಗಳು ಮಾತ್ರ ಕಂಡರೂ ಕಾಣದ ಹಾಗೇ ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.
ಬೆರಳೆಣಿಕೆಯಷ್ಟು ಪ್ರಕರಣ ದಾಖಲು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ
ಗಾಂಜಾ ಹಾಗೂ ಜೂಜಾಟ ನಡೆಸಲು ಯಾವುದೇ ಅವಕಾಶ ಇಲ್ಲ. ಒಂದು ವೇಳೆ ಈ ಬಗ್ಗೆ ಸಾರ್ವಜನಿಕರು ಖಚಿತ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದುಬಿ.ಎಸ್.ನೇಮನಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಗಾಂಜಾ ಇಸ್ಪೀಟ್‌ನಂತಹ ಜೂಜಾಟಗಳಿಗೆ ಯುವಕರು ಬಲಿಯಾಗುತ್ತಿದ್ದು ಇದಕ್ಕೆ ಸಂಬಂಧಪಟ್ಟ ಇಲಾಖೆಯ ನಿಷ್ಕಾಳಜಿಯೇ ಕಾರಣ. ಕಡಿವಾಣ ಹಾಕದೆ ಹೋದಲ್ಲಿ ಜನರ ಆರೋಗ್ಯ ಇನ್ನಷ್ಟು ಹದಗೆಡುತ್ತದೆಸಂತೋಷ ಕುರಿ ಎಐಸಿಸಿ ಮಾನವ ಹಕ್ಕುಗಳ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ
ಗಾಂಜಾ ಬೆಳೆ ಮತ್ತು ಮಾರಾಟ
ಶಿರಹಟ್ಟಿ ತಾಲ್ಲೂಕಿನ ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ಗ್ರಾಮಗಳು ತುಂಗಭದ್ರಾ ನದಿಪಾತ್ರದ ಗ್ರಾಮಗಳಲ್ಲಿ ಮೆಕ್ಕೆಜೋಳ ಹತ್ತಿ ಕಬ್ಬು ತೊಗರಿ ಬೆಳೆ ನಡುವೆ ಭಾರಿ ಪ್ರಮಾಣದಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅರಣ್ಯ ಭೂಮಿಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಬೆಳೆಯಲಾಗುತ್ತಿದ್ದು ಇಲ್ಲಿ ಭೂಮಿ ಯಾರದ್ದು ಎಂದು ಗುರುತಿಸಲು ದಾಖಲೆಗಳು ಇಲ್ಲದ ಲೋಪವನ್ನು ಬಳಸಿಕೊಂಡು ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆಂಬ ಆರೋಪವಿದೆ. ಅಮಾಯಕ ರೈತರಿಗೆ ಹಣದಾಸೆ ತೋರಿಸಿ ಗಾಂಜಾವನ್ನು ಬೆಳೆಸಿ ಬಳಿಕ ಸೊಪ್ಪನ್ನು ಹೊರಗೆ ಸಾಗಿಸುವ ದಂಧೆಕೋರರು ದುಪ್ಪಟ್ಟು ಲಾಭ ಗಳಿಸುತ್ತಿದ್ದಾರೆ. ಮುಳಗುಂದ ಗದಗ ಹಾವೇರಿಯಿಂದ ಗಾಂಜಾ ಪ್ಯಾಕೆಟ್‌ಗಳು ಪಟ್ಟಣಕ್ಕೆ ಆವಕವಾಗುತ್ತಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ನಿಲ್ಲದ ಜೂಜಾಟಗಳು
ಗಾಂಜಾ ಮಾರಾಟದ ಜತೆಗೆ ಇಸ್ಪೀಟು ಹಾಗೂ ಮಟ್ಕಾ ದಂಧೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಇಲಾಖೆ ಮಾತ್ರ ಮುಗುಮ್ಮಾಗಿ ಕುಳಿತುಕೊಂಡಿದೆ. ತಾಲ್ಲೂಕಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಇಸ್ಪೀಟು ಆಡಲು ಪೊಲೀಸ್ ಇಲಾಖೆ ಪರವಾನಗಿ ಕೊಡುತ್ತಿದ್ದು ಕೆಲ ಕಡೆಗಳಲ್ಲಿ ಕಮಿಷನ್ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮಾಹಿತಿ ನೀಡಿದರೆ ಇಸ್ಪೀಟು ಅಡ್ಡಾ ಬಿಟ್ಟು ಬೇರೆಡೆಗೆ 3-4 ಜನರನ್ನು ಕರೆತಂದು ಅವರ ಮೇಲೆ ಹೆಸರಿಗಷ್ಟೇ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಅಲ್ಲದೇ ಗ್ರಾಮ ಹಾಗೂ ಪಟ್ಟಣದ ಹೊರವಲಯದ ಗುಡ್ಡ ಹಾಗೂ ಕೆಲ ಅರಣ್ಯ ಪ್ರದೇಶವನ್ನು ಇಸ್ಪೀಟು ಅಡ್ಡೆಯನ್ನಾಗಿ ಮಾಡಿಕೊಂಡ ಜೂಜುಕೋರರು ನಿತ್ಯ ತಮ್ಮ ಕಾಯಕದಲ್ಲಿ ಬ್ಯುಸಿ ಇರುತ್ತಾರೆ. ಇದು ಒಂದೆಡೆಯಾದರೆ ಮಟ್ಕಾ ದಂಧೆ ಸಲೀಸಾಗಿ ನಡೆಯುತ್ತಿರುವುದು ಇನ್ನೊಂದೆಡೆಯಾಗಿದೆ. ಸಂಜೆಯಾಗುತ್ತಿದ್ದಂತೆ ಜೂಜುಕೋರರು ತಮಗೆ ಬೇಕಾದ ನಂಬರಿನ ಮೇಲೆ ದಲ್ಲಾಳಿಗಳ ಬಳಿ ಹಣ ಕಟ್ಟಿ ಪಟ್ಟಿ ಬರೆಸುತ್ತಾರೆಂಬ ವದಂತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.