ADVERTISEMENT

ಗದಗ|ಖರೀದಿಗೆ ಬಾರದ ವ್ಯಾಪಾರಸ್ಥರು: ಬೀದಿಗೆ ಬೆಳ್ಳುಳ್ಳಿ ಸುರಿದು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:54 IST
Last Updated 14 ಸೆಪ್ಟೆಂಬರ್ 2025, 4:54 IST
ಬೆಳ್ಳುಳ್ಳಿ ಹರಾಜನ್ನು ಬಂದ್ ಮಾಡಿದ್ದನ್ನು ಖಂಡಿಸಿ ಲಕ್ಷ್ಮೇಶ್ವರದ ಎಪಿಎಂಸಿ ಆವರಣದಲ್ಲಿ ರೈತರು ಬೆಳ್ಳುಳ್ಳಿ ಸುರಿದು ಶನಿವಾರ ಪ್ರತಿಭಟನೆ ನಡೆಸಿದರು
ಬೆಳ್ಳುಳ್ಳಿ ಹರಾಜನ್ನು ಬಂದ್ ಮಾಡಿದ್ದನ್ನು ಖಂಡಿಸಿ ಲಕ್ಷ್ಮೇಶ್ವರದ ಎಪಿಎಂಸಿ ಆವರಣದಲ್ಲಿ ರೈತರು ಬೆಳ್ಳುಳ್ಳಿ ಸುರಿದು ಶನಿವಾರ ಪ್ರತಿಭಟನೆ ನಡೆಸಿದರು   

ಲಕ್ಷ್ಮೇಶ್ವರ: ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿಯನ್ನು ಮಾರಾಟಕ್ಕೆ ತಂದರೆ ಖರೀದಿದಾರರು ಇಲ್ಲ ಎಂಬ ನೆಪ ಹೇಳಿ ದಲಾಲರು ಹರಾಜು ಬಂದ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ರೈತರು ಲಕ್ಷ್ಮೇಶ್ವರದ ಎಪಿಎಂಸಿ ಆವರಣದಲ್ಲಿ ಶನಿವಾರ ಬೀದಿಗೆ ಬೆಳ್ಳುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.

ಮಾರಾಟಕ್ಕಾಗಿ ಬೆಳ್ಳುಳ್ಳಿಯನ್ನು ರೈತರು ಎಪಿಎಂಸಿಗೆ ತಂದಿದ್ದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಬಂದಿಲ್ಲದ ಕಾರಣ ದಲಾಲರು ಬೆಳ್ಳುಳ್ಳಿ ಹರಾಜು ಹಾಕಲು ಮುಂದಾಗಲಿಲ್ಲ. ಇದನ್ನು ಖಂಡಿಸಿದ ರೈತರು ‘ನಾವು ದೂರದ ಊರುಗಳಿಂದ ಬೆಳ್ಳುಳ್ಳಿ ತಂದಿದ್ದೇವೆ. ಆದರೆ ಇದೀಗ ದಲಾಲರು ಹರಾಜು ಹಾಕುತ್ತಿಲ್ಲ. ಮಾರಾಟಕ್ಕೆ ತಂದ ಮಾಲನ್ನು ಹಿಂತಿರುಗಿ ಮನೆಗೆ ತೆಗೆದುಕೊಂಡು ಹೋಗುವುದು ಕಷ್ಟ. ಕಾರಣ ನಮ್ಮ ಮಾಲನ್ನು ಹರಾಜು ಹಾಕಬೇಕು’ ಎಂದು ರೈತರು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ದಲಾಲರು ಹಾಗೂ ರೈತರ ಮಧ್ಯೆ ವಾಗ್ವಾದ ನಡೆಯಿತು.

‘ಈವತ್ತು ಬೆಳ್ಳುಳ್ಳಿ ಖರೀದಿದಾರರು ಹೆಚ್ಚಿನ ಸಂಖ್ಕೆಯಲ್ಲಿ ಬಂದಿಲ್ಲ. ಹೀಗಾಗಿ ಬೆಲೆ ಕಡಿಮೆ ಆಗಬಹುದು. ಕಾರಣ ಮುಂದಿನ ವಾರ ತೆಗೆದುಕೊಂಡು ಬನ್ನಿ’ ಎಂದು ದಲಾಲರು ರೈತರಿಗೆ ಮನವರಿಕೆ ಮಾಡಿದರು. ಆದರೆ ಇದಕ್ಕೆ ಒಪ್ಪದ ರೈತರು ‘ಮೊದಲು ನಾವು ತಂದ ಮಾಲನ್ನು ಇಳಿಸಿಕೊಂಡು ಹರಾಜು ಮಾಡಿರಿ. ನಮಗೆ ಉತ್ತಮ ಬೆಲೆ ಬಂದರೆ ಮಾರುತ್ತೇವೆ. ಇಲ್ಲದಿದ್ದರೆ ವಾಪಸ್ ತೆಗೆದುಕೊಂಡು ಹೋಗುತ್ತೇವೆ’ ಎಂದು ಹಠ ಹಿಡಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ, ‘ರೈತರು ತಂದ ಮಾಲನ್ನು ಮಾರಾಟ ಮಾಡಲು ಪ್ರತಿ ವಾರದಂತೆ ಈಗೂ ಹರಾಜು ಮಾಡಬೇಕು’ ಎಂದು ಸೂಚಿಸಿದರು. ನಂತರ ಬೆಳ್ಳುಳ್ಳಿ ಹರಾಜು ಪ್ರಕ್ರಿಯೆ ಆರಂಭಗೊಂಡಿತು.

ತಾಲ್ಲೂಕಿನ ರಾಮಗೇರಿ, ಯಳವತ್ತಿ, ಮಾಡಳ್ಳಿ, ಬಸಾಪುರ, ಯತ್ತಿನಹಳ್ಳಿ, ಗೊಜನೂರು, ಬಟ್ಟೂರು ಸೇರಿದಂತೆ ಹತ್ತಾರು ಊರುಗಳಿಂದ ರೈತರು ಬೆಳ್ಳುಳ್ಳಿಯನ್ನು ಮಾರಾಟಕ್ಕೆ ತಂದಿದ್ದರು.

ಕಡಿಮೆ ಬೆಲೆಗೆ ಮಾರಾಟ: ಆರೋಪ

ಗದಗ ಬಾಗಲಕೋಟೆ ಹುಬ್ಬಳ್ಳಿ ದಾವಣಗೆರೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೆಳ್ಳುಳ್ಳಿ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತದೆ. ಆದರೆ ಲಕ್ಷ್ಮೇಶ್ವರದಲ್ಲಿ ಬೆಲೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದರು. ‘ಕಳೆದ ವಾರ ಬೆಳ್ಳುಳ್ಳಿ ದರ ಸ್ವಲ್ಪ ಉತ್ತಮವಾಗಿತ್ತು. ಆದರೆ ಈ ವಾರ ಬೆಲೆ ಒಮ್ಮೆಲೇ ಕಡಿಮೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ದರ ಕೊಡದಿದ್ದರೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ’ ಎಂದು ರೈತರಾದ ಮಂಜುನಾಥ ಬೆಟಗೇರಿ ಬಸವರಾಜ ಯಂಗಾಡಿ ಪರಶುರಾಮ ಲಕ್ಕಣ್ಣವರ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.