ADVERTISEMENT

ಲಕ್ಷ್ಮೇಶ್ವರ | ಹೋರಾಟ ನೆಪದಲ್ಲಿ ಬಂದ್ ಸರಿಯಲ್ಲ: ಜಿ.ಎಂ. ಮಹಾಂತಶೆಟ್ಟರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:03 IST
Last Updated 21 ನವೆಂಬರ್ 2025, 8:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಲಕ್ಷ್ಮೇಶ್ವರ: ‘ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಆದರೆ, ಹೋರಾಟದ ನೆಪದಲ್ಲಿ ಊರು ಬಂದ್ ಮಾಡುವುದು ಸರಿ ಅಲ್ಲ’ ಎಂದು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಹೇಳಿದರು.

ADVERTISEMENT

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಬಲ ಬೆಲೆ ಘೋಷಿಸಿದ್ದರಿಂದ ರೈತರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಈಗಾಗಲೇ ಖರೀದಿ ಕೇಂದ್ರ ಆರಂಭಿಸಬೇಕಿತ್ತು. ಆದರೆ ಗ್ಯಾರಂಟಿ ಯೋಜನೆಗಾಗಿ ಖಜಾನೆ ಖಾಲಿ ಆಗಿದ್ದು, ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಈಗ ಮೆಕ್ಕೆಜೋಳ ಖರೀದಿಸುವುದು ಸರ್ಕಾರಕ್ಕೆ ಆಗದ ಕೆಲಸ’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಚರ್ಚಿಸಿ, ನಿರ್ಧಾರ ತೆಗೆದುಕೊಂಡಾಗ ಮಾತ್ರ ಖರೀದಿ ಕೇಂದ್ರ ಆರಂಭವಾಗಬಹುದು. ಇಲ್ಲದಿದ್ದರೆ, ಎಷ್ಟೇ ಹೋರಾಟ ಮಾಡಿದರೂ ಪ್ರಯೋಜನ ಇಲ್ಲ’ ಎಂದು ತಿಳಿಸಿದರು.

‘ಪ್ರತಿಭಟನೆ ನಡೆಸಿದರೆ ಸಮಸ್ಯೆ ಇಲ್ಲ. ಆದರೆ, ಉಪವಾಸ ಸತ್ಯಾಗ್ರಹ ನಡೆಸುವುದು ಸರಿ ಅಲ್ಲ. ಅಮರಣಾಂತ ಉಪವಾಸ ನಡೆಸುತ್ತಿರುವ ಕುಮಾರ ಮಹಾರಾಜರಿಗೆ ಏನಾದರೂ ಸಮಸ್ಯೆ ಉಂಟಾದರೆ, ಇಡೀ ಊರಿಗೆ ಕೆಟ್ಟ ಹೆಸರು ಬರುತ್ತದೆ’ ಎಂದರು.

‘ಪದೇ ಪದೇ ಊರು ಬಂದ್ ಮಾಡುವುದರಿಂದ ಸಾರ್ವಜನಿಕರು, ಕೂಲಿಕಾರರು, ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಬಂದ್‍ಗೆ ಕರೆ ನೀಡುವ ಮೊದಲು ಹೋರಾಟಗಾರರು ಸಾಕಷ್ಟು ಬಾರಿ ವಿಚಾರ ಮಾಡಬೇಕು. ರೈತರ ನ್ಯಾಯಯುತ ಬೇಡಿಕೆಗೆ ಯಾವಾಗಲೂ ನಮ್ಮ ಬೆಂಬಲ ಇರುತ್ತದೆ’ ಎಂದು ಹೇಳಿದರು.

ಎಸ್.ಪಿ. ಪಾಟೀಲ, ವಿ.ಜಿ. ಪಡಿಗೇರಿ, ಸೋಮಣ್ಣ ಉಪನಾಳ, ಬಸವೇಶ ಮಹಾಂತಶೆಟ್ಟರ, ಅಪ್ಪಣ್ಣ ಸಾಲಿ ಮಾತನಾಡಿದರು.

ಚಂಬಣ್ಣ ಬಾಳಿಕಾಯಿ, ಡಿ.ಬಿ. ಬಳಿಗಾರ, ನಿಂಗಪ್ಪ ಬನ್ನಿ, ಶಾಂತಣ್ಣ ಬಳ್ಳಾರಿ, ನಿಂಗಪ್ಪ ಹುನಗುಂದ, ಹನಮಂತಪ್ಪ ತಳವಾರ, ಎನ್.ಎನ್. ನೆಗಳೂರ, ಬಸಣ್ಣ ಹಂಜಿ, ಮಹಾದೆವಪ್ಪ ಅಣ್ಣಿಗೇರಿ, ಸೋಮಣ್ಣ ಡಾಣಗಲ್ಲ, ವೀರಣ್ಣ ಪವಾಡದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.