ADVERTISEMENT

ಗುಂಡಿ ಬಿದ್ದು ಹಾಳಾದ ಗೋವನಾಳ-ಶಿಗ್ಲಿ ರಸ್ತೆ: ಐದಾರು ವರ್ಷಗಳಿಂದ ಬಸ್ ಸಂಚಾರ ಬಂದ್

ನಾಗರಾಜ ಎಸ್‌.ಹಣಗಿ
Published 4 ನವೆಂಬರ್ 2025, 5:10 IST
Last Updated 4 ನವೆಂಬರ್ 2025, 5:10 IST
ಗುಂಡಿ ಬಿದ್ದು ಹಾಳಾದ ಗೋವನಾಳ-ಶಿಗ್ಲಿ ರಸ್ತೆ
ಗುಂಡಿ ಬಿದ್ದು ಹಾಳಾದ ಗೋವನಾಳ-ಶಿಗ್ಲಿ ರಸ್ತೆ   

ಲಕ್ಷ್ಮೇಶ್ವರ: ತಾಲ್ಲೂಕಿನ ಗೋವನಾಳ-ಶಿಗ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ಇಡೀ ರಸ್ತೆಯಲ್ಲಿ ಅಡಿಗಡಿಗೆ ದೊಡ್ಡ ದೊಡ್ಡ ಗುಂಡಿಗಳೇ ತುಂಬಿಕೊಂಡಿವೆ. ಗೋವನಾಳದಿಂದ ಆರೇಳು ಕಿಮೀ ದೂರದ ಶಿಗ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಈಗಾಗಲೇ ಆರೇಳು ವರ್ಷಗಳೇ ಕಳೆದಿವೆ. ಆದರೂ ಸಹ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರಸ್ತೆಯನ್ನು ನಿರ್ಮಿಸುವ ಗೋಜಿಗೆ ಹೋಗಿಲ್ಲ ಅಂದರೆ ಅದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಗೋವನಾಳ ಹಾಗೂ ಶಿಗ್ಲಿ ಗ್ರಾಮಗಳ ರೈತರ ನೂರಾರು ಎಕರೆ ಜಮೀನು ಇದೇ ರಸ್ತೆಗೆ ಹೊಂದಿಕೊಂಡಿದ್ದು ಪ್ರತಿದಿನ ಅವರು ಹೊಲಗಳಿಗೆ ಹೋಗಿ ಬರುತ್ತಾರೆ. ಆದರೆ ತೆಗ್ಗು ಬಿದ್ದಿರುವ ರಸ್ತೆಯಲ್ಲಿ ಚಕ್ಕಡಿ, ಟ್ರ್ಯಾಕ್ಟರ್‍ಗಳು ಸಂಚರಿಸಲೂ ಆಗುತ್ತಿಲ್ಲ. ಅಲ್ಲದೆ ಎರಡೂ ಗ್ರಾಮಗಳ ಮಧ್ಯ ಬಸ್ ಸಂಚಾರ ಬಂದ್ ಆಗಿಯೇ ಆರೇಳು ವರ್ಷಗಳೆ ಕಳೆದಿವೆ.

ಗೋವನಾಳದಿಂದ ಹತ್ತಾರು ಮಕ್ಕಳು ಶಿಗ್ಲಿಯಲ್ಲಿನ ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದರು. ಆದರೆ ಬಸ್ ಸಂಚಾರ ಬಂದ್ ಆಗಿರುವುದು ಅವರ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರಿದೆ. ಬಸ್ ಇಲ್ಲದ ಕಾರಣ ಎಷ್ಟೋ ಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಇಡೀ ರಸ್ತೆಯಲ್ಲಿ ಬೃಹತ್ ಗುಂಡಿಗಳು ತುಂಬಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೂ ಇದು ಸವಾಲಾಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.

ADVERTISEMENT

ಜಿಲ್ಲಾ ಪಂಚಾಯ್ತಿ ಇಲಾಖೆಗೆ ಸಂಬಂಧಿಸಿದ ಈ ರಸ್ತೆ ಸಂಪೂರ್ಣ ಕಡೆಗಣನೆಗೆ ಒಳಗಾಗಿದೆ. ರಸ್ತೆ ದುರಸ್ತಿ ಮಾಡಿಸುವಂತೆ ಎರಡೂ ಗ್ರಾಮಗಳ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಷ್ಟು ವರ್ಷ ಕಳೆದರೂ ಸರ್ಕಾರ ರಸ್ತೆ ನಿರ್ಮಾಣಕ್ಕೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲವೇ ಎಂಬ ಅನುಮಾನ ಗ್ರಾಮಸ್ಥರಲ್ಲಿ ಮೂಡಿದೆ.

‘ಗೋವನಾಳದಿಂದ ಶಿಗ್ಲಿಗೆ ಹೋಗುವ ರಸ್ತೆ ತೆಗ್ಗು ಬಿದ್ದು ಹಾಳಾಗಿದೆ. ನಮ್ಮೂರಿನಿಂದ ದಿನಾಲೂ ಬಹಳಷ್ಟು ಜನರು ಶಿಗ್ಲಿಗೆ ಹೋಗಿ ಬರುತ್ತಾರೆ. ಆದರೆ ಹದಗೆಟ್ಟ ರಸ್ತೆಯಿಂದಾಗಿ ಗ್ರಾಮಸ್ಥರು ಕೈಯಲ್ಲಿ ಜೀವ ಹಿಡಿದುಕೊಂಡೇ ತಿರುಗಾಡುತ್ತಿದ್ದಾರೆ. ಕಾರಣ ಆದಷ್ಟು ಬೇಗನೇ ಹಾಳಾದ ರಸ್ತೆಯನ್ನು ನಿರ್ಮಿಸಬೇಕು’ ಎಂದ ಗೋವನಾಳ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನಾಗರಾಜ ದೊಡ್ಡಮನಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.