ADVERTISEMENT

ಮುಂಡರಗಿ: ಸರ್ಕಾರಿ ಪ್ರೌಡಶಾಲೆ ಮಂಜೂರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:24 IST
Last Updated 9 ಆಗಸ್ಟ್ 2025, 4:24 IST
ಮುಂಡರಗಿ ಪಟ್ಟಣಕ್ಕೆ ಸರ್ಕಾರಿ ಪ್ರೌಢ ಶಾಲೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ್ ಕೆ.ರಾಧಾ ಅವರಿಗೆ ಮನವಿ ಸಲ್ಲಿಸಿದರು
ಮುಂಡರಗಿ ಪಟ್ಟಣಕ್ಕೆ ಸರ್ಕಾರಿ ಪ್ರೌಢ ಶಾಲೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ್ ಕೆ.ರಾಧಾ ಅವರಿಗೆ ಮನವಿ ಸಲ್ಲಿಸಿದರು   

ಮುಂಡರಗಿ: ಪಟ್ಟಣಕ್ಕೆ ಒಂದು ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಕಾರ್ಯಕರ್ತರು ಶುಕ್ರವಾರ ಗ್ರೇಡ್-2 ತಹಶೀಲ್ದಾರ್ ಕೆ.ರಾಧಾ ಅವರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯವನರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಪಟ್ಟಣವು ಸುಮಾರು 40 ಸಾವಿರ ಜನಸಂಖ್ಯೆ ಹೊಂದಿದ್ದು, ಇಲ್ಲಿ ಈವರೆಗೂ ಒಂದೂ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿರುವುದಿಲ್ಲ. ಆದ್ದರಿಂದ ಸರ್ಕಾರ ತಕ್ಷಣ ಪಟ್ಟಣಕ್ಕೆ ಒಂದು ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ದೇಶಕ್ಕೆ ಸ್ವಾತಂತ್ರ ದೊರಕಿ ಏಳು ದಶಕಗಳು ಗತಿಸಿದ್ದು, ಇಲ್ಲಿವರೆಗೂ ಸರ್ಕಾರಿ ಪ್ರೌಢಶಾಲೆ ಇಲ್ಲದಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ. ಇಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದ್ದರಿಂದ ಇಲ್ಲಿಯ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬೇಕಿದೆ ಎಂದು ದೂರಿದರು.

ADVERTISEMENT

ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದ್ದರಿಂದ ಇಲ್ಲಿಯ ನೂರಾರು ಬಡ ಮಕ್ಕಳು ಪಟ್ಟಣದ ಅಕ್ಕಪಕ್ಕದ ಗ್ರಾಮಗಳಲ್ಲಿ ಇರುವ ಸರ್ಕಾರಿ ಪ್ರೌಢ ಶಾಲೆಗಳಿಗೆ ತೆರಳಬೇಕಾಗಿದೆ. ಇಲ್ಲಿಯೇ ಒಂದು ಸರ್ಕಾರಿ ಪ್ರೌಢ ಶಾಲೆ ಆರಂಭವಾದರೆ ಇಲ್ಲಿಯ ಮಕ್ಕಳಿಗೆ ತುಂಬಾ ಅನಕೂಲವಾಗಲಿದೆ ಎಂದು ತಿಳಿಸಿದರು.

ಸರ್ಕಾರಿ ಪ್ರೌಢಶಾಲೆ ಮಂಜೂರಾದರೆ ಇಲ್ಲಿಯ ಮಕ್ಕಳು ಬೇರೆ ಗ್ರಾಮಗಳಿಗೆ ಅಲೆದಾಡುವುದು ತಪ್ಪುತ್ತದೆ. ಜೊತೆಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಇಲ್ಲಿಯ ಮಕ್ಕಳಿಗೆ ದೊರೆಯಲಿವೆ. ಆದ್ದರಿಂದ ಸರ್ಕಾರ ತಕ್ಷಣ ಪಟ್ಟಣಕ್ಕೆ ಒಂದು ಸರ್ಕಾರಿ ಪ್ರೌಢ ಶಾಲೆಯನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಮುಖಂಡರಾದ ರವಿಗೌಡ ಪಾಟೀಲ, ಶಂಕರ ಉಳ್ಳಾಗಡ್ಡಿ, ಸತ್ಯಪ್ಪ ಮೋರನಾಳ, ಬಸಪ್ಪ ವಡ್ಡರ, ಶೇಖಪ್ಪ ದಂಡಿನ, ದೇವಪ್ಪ ಇಟಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.