
ಮುಂಡರಗಿ (ಗದಗ ಜಿಲ್ಲೆ): ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ಕ್ಷೌರಿಕರಿಂದ ನಿರಾಕರಣೆ ಹಿಂದೆಯೇ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರದ ವತಿಯಿಂದಲೇ ಗ್ರಾಮದಲ್ಲಿ ಕ್ಷೌರದ ಅಂಗಡಿ ತೆರೆದಿದ್ದಾರೆ.
ಗ್ರಾಮದ ಹಡಪದ ಕುಟುಂಬಗಳು ಗ್ರಾಮದ ಅಧಿದೇವತೆ ವೀರಭದ್ರೇಶ್ವರನ ಭಕ್ತರು. ಹಿಂದಿನಿಂದಲೂ ದಲಿತರಿಗೆ ಕ್ಷೌರ ಮಾಡುತ್ತಿರಲಿಲ್ಲ. ಅದಕ್ಕೆ ಹಿರಿಯ ತಲೆಮಾರಿನ ದಲಿತರ ಒಪ್ಪಿದ್ದರು ಎನ್ನಲಾಗಿದೆ. ಈಚೆಗೆ ಹಡಪದ ಸಮಾಜದವರು ಗ್ರಾಮದಲ್ಲಿ ತೆರೆದಿದ್ದ ಕ್ಷೌರದ ಅಂಗಡಿಯಲ್ಲೂ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದರು.
‘ಗ್ರಾಮ ಪಂಚಾಯಿತಿ ಪರವಾನಗಿ ಪಡೆದು ಅಂಗಡಿ ತೆರೆದಿದ್ದೀರಿ. ಎಲ್ಲರಿಗೂ ಕ್ಷೌರ ಮಾಡಬೇಕು’ ಎಂದು ದಲಿತರು ಆಗ್ರಹಿಸಿದರು. ಅದಕ್ಕೆ ಹಡಪದ ಕುಟುಂಬದವರು ಅಂಗಡಿ ಬಂದ್ ಮಾಡಿದ್ದರು. ಅಗತ್ಯವಿದ್ದಾಗ ತಮಗೆ ಬೇಕಾದವರ ಮನೆಗಳಿಗೆ ತೆರಳಿ ಕ್ಷೌರ ಮಾಡುವುದನ್ನು ರೂಢಿಸಿಕೊಂಡಿದ್ದರು.
ವಿಷಯ ತಿಳಿದ ತಕ್ಷಣ ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿದರು. ಕ್ಷೌರ ಮಾಡುವಂತೆ ಮನ ಒಲಿಸಲು ಪ್ರಯತ್ನಿಸಿದರು. ಹಡಪದ ಸಮಾಜದ ಕೆಲವರಿಗೆ ನೋಟಿಸ್ ಕೂಡಾ ನೀಡಿದ್ದರು. ಆದರೂ ಕ್ಷೌರಿಕರು ಒಪ್ಪಿರಲಿಲ್ಲ. ಕ್ಷೌರದ ಅಂಗಡಿ ಬಂದ್ ಆಗಿದ್ದರಿಂದ ದಲಿತರು ಸೇರಿ ಗ್ರಾಮಸ್ಥರು ಕ್ಷೌರಕ್ಕಾಗಿ ಅಕ್ಕಪಕ್ಕದ ಗ್ರಾಮಗಳಿಗೆ ತೆರಳಬೇಕಾಯಿತು.
ಅಂತಿಮವಾಗಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಎಲಿವಾಳ ಅವರು ಗ್ರಾಮ ಪಂಚಾಯಿತಿ ಮತ್ತು ಶರಣ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ದೇವು ಹಡಪದ ಅವರನ್ನು ಸಂಪರ್ಕಿಸಿ ಗ್ರಾಮದಲ್ಲಿ ಒಂದು ನೂತನ ಕಟಿಂಗ್ ಶಾಪ್ ತೆರೆಯಲು ನಿರ್ಧರಿಸಿದರು.
ಅದರಂತೆ, ಫೆ.26ರಂದು ತಹಶೀಲ್ದಾರ್ ಎರ‍್ರಿಸ್ವಾಮಿ ಪಿ.ಎಸ್. ಸೇರಿ ಜಿಲ್ಲೆ ಮತ್ತು ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದಲ್ಲಿ ಸರ್ಕಾರಿ ಕ್ಷೌರದ ಅಂಗಡಿಯನ್ನು ಆರಂಭಿಸಲಾಯಿತು.
‘ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ದೇವು ಹಡಪದ ಅವರ ಸಹೋದರ ಬಸವರಾಜ ಹಡಪದ ಮುಂಡರಗಿಯಲ್ಲಿ ವಾಸವಿದ್ದಾರೆ. ಅವರು ನಿತ್ಯ ಶಿಂಗಟಾಲೂರು ಗ್ರಾಮಕ್ಕೆ ತೆರಳಿ ಕ್ಷೌರ ಮಾಡುವರು. ಕ್ಷೌರ, ಶೇವಿಂಗ್‌ಗೆ ₹100 ಮತ್ತು ಕ್ಷೌರಕ್ಕೆ ₹75 ದರ ನಿಗದಿಪಡಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಹಡಪದ ಅಪ್ಪಣ್ಣ ಸೇರಿ ಬಸವಾದಿ ಶರಣರು ಎಲ್ಲರನ್ನೂ ಸಮಾನವಾಗಿ ಕಾಣಲು ತಿಳಿಸಿದ್ದಾರೆ. ಅವರ ಆಶಯದಂತೆ ಶಿಂಗಟಾಲೂರ ಗ್ರಾಮದಲ್ಲಿ ಜಾತಿ ಭೇದಗಳಿಲ್ಲದೆ ಎಲ್ಲರಿಗೂ ಮುಕ್ತವಾಗಿ ಕ್ಷೌರ ಮಾಡಲಾಗುವುದುದೇವು ಹಡಪದ, ಅಧ್ಯಕ್ಷ ಹಡಪದ ಅಪ್ಪಣ್ಣ ಸಮಾಜ ರಾಜ್ಯ ಘಟಕ
ವಿವಿಧ ಇಲಾಖೆಗಳ ನೆರವಿನೊಂದಿಗೆ ಶಿಂಗಟಾಲೂರದಲ್ಲಿ ಕ್ಷೌರದ ಅಂಗಡಿ ತೆರೆಯಲಾಗಿದೆ. ಇದು ಮಾದರಿ ಕ್ರಮವಾಗಿದೆ. ಇದರಿಂದ ತಾರತಮ್ಯ ನಿವಾರಣೆಯಾದರೆ ಶ್ರಮ ಸಾರ್ಥಕಎರ್ರಿಸ್ವಾಮಿ ಪಿ.ಎಸ್, ತಹಶೀಲ್ದಾರ್
ದಲಿತರೂ ಸೇರಿ ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕ್ಷೌರದ ಅಂಗಡಿ ತೆರೆಯಲಾಗಿದೆಉದಯಕುಮಾರ ಎಲಿವಾಳ, ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.