ADVERTISEMENT

ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ

ಫೆ. 20ರಂದು ಜಿಲ್ಲಾಧಿಕಾರಿ, ತಹಶೀಲ್ದಾರರಿಂದ ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 4:09 IST
Last Updated 18 ಫೆಬ್ರುವರಿ 2021, 4:09 IST

ಗದಗ: ಸರ್ಕಾರದ ಆದೇಶದಂತೆ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿ ಮತ್ತು ಆಯಾ ತಾಲ್ಲೂಕುಗಳ ತಹಶೀಲ್ದಾರರು ಆಯ್ದ ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ.

‘ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ’ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಕಾರ್ಯಕ್ರಮದ ಮೊದಲಿಗೆ ಮುಂಡರಗಿ ತಾಲ್ಲೂಕಿನ ಚುರ್ಚಿಹಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಫೆ.20ರಂದು ವಾಸ್ತವ್ಯ ಹೂಡಲಿದ್ದಾರೆ.

ಫೆ.20ರಂದು ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ಆಯಾ ತಹಶೀಲ್ದಾರರು ಆಯ್ದ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ.

ADVERTISEMENT

ಗದಗ ತಾಲ್ಲೂಕಿನ ಅಂತೂರ ಬೆಂತೂರ, ಶಿರಹಟ್ಟಿ ತಾಲ್ಲೂಕಿನ ವಡವಿಹೊಸೂರ, ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗಿರಿ, ನರಗುಂದ ತಾಲ್ಲೂಕಿನ ಗಂಗಾಪುರ, ಗಜೇಂದ್ರಗಡ ತಾಲ್ಲೂಕಿನ ನಿಡಗುಂದಿಕೊಪ್ಪ ಹಾಗೂ ರೋಣ ತಾಲ್ಲೂಕಿನ ಬಾಚಲಾಪುರ ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಗ್ರಾಮವಾಸ್ತವ್ಯದಲ್ಲಿ ಕಾರ್ಯಕ್ರಮಗಳು:

ಜಿಲ್ಲಾಧಿಕಾರಿ ಮತ್ತು ಆಯಾ ತಾಲ್ಲೂಕಿನ ತಹಶೀಲ್ದಾರರು ವಾಸ್ತವ್ಯ ಹೂಡಲು ನಿಗದಿಪಡಿಸಲಾದ ಗ್ರಾಮಗಳಿಗೆ ತೆರಳಿ ಗ್ರಾಮದ ಪಹಣಿಯಲ್ಲಿನ ದೋಷಗಳನ್ನು ಸರಿಪಡಿಸುವುದು. ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ವಹಿಸುವುದು. ಗ್ರಾಮದ ಎಲ್ಲ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸುವುದು. ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವುದು. ಗ್ರಾಮದಲ್ಲಿ ಸ್ಮಶಾನ ಲಭ್ಯತೆ ಬಗ್ಗೆ ಪರಿಶೀಲಿಸುವುದು ಮತ್ತು ಸ್ಮಶಾನ ಇಲ್ಲದಿದ್ದಲ್ಲಿ ಸರ್ಕಾರದ ಆದೇಶದಂತೆ ಕ್ರಮ ವಹಿಸುವುದು. ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನು ಕಾಯ್ದಿರಿಸುವುದು. ಸರ್ಕಾರ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸುವುದು.

ಆಧಾರ್‌ ಕಾರ್ಡ್‌ನ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಆನ್‍ಲೈನ್ ಮುಖಾಂತರ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಜಾಗೃತಿ ಮೂಡಿಸುವುದು. ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು.

ಮತದಾರರ ಪಟ್ಟಿ ಪರಿಷ್ಕರಣೆ, ಬರಪ್ರವಾಹ ಇದ್ದಲ್ಲಿ ಪರಿಹಾರ, ಪ್ರವಾಹದ ಹಾನಿ ತಡೆಗಟ್ಟಲು ಸಲಹೆ ನೀಡುವುದು, ಅತಿವೃಷ್ಟಿ, ಅನಾವೃಷ್ಟಿ ಎದುರಿಸಲು ಮುಂಜಾಗ್ರತೆ ಕ್ರಮ ವಹಿಸುವುದು, ಹದ್ದುಬಸ್ತು ಪೋಡಿ ಮುಕ್ತಗ್ರಾಮ, ದರಖಾಸ್ತು ಪೋಡಿ, ಕಂದಾಯ ಗ್ರಾಮಗಳ ರಚನೆ ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ, ಬಿಸಿಎಂ ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿತಿಯಲ್ಲಿರುವ ಬಗ್ಗೆ ಕ್ರಮ ವಹಿಸುವುದು.

ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಕಲಿಕಾಕ್ರಮದ ಬಗ್ಗೆ ಪರಿಶೀಲಿಸುವುದು. ಎಲ್ಲ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ ದೊರೆತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. ಗುಡಿಸಲು ರಹಿತ ವಾಸದ ಮನೆಗಳ ನಿರ್ಮಾಣಕ್ಕೆ ಇರುವ ಸೌಲಭ್ಯಗಳನ್ನು ಜಾರಿ ಮಾಡಿ ಗುಡಿಸಲು ಮುಕ್ತ ಗ್ರಾಮಗಳಾಗಿಸುವುದು.

ಈ ಎಲ್ಲ ಕ್ರಮಗಳನ್ನು ವಹಿಸಲು ಅಧಿಕಾರಿಗಳು ಖುದ್ದಾಗಿ ಸ್ಪಂದಿಸಲು, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಲು ಅನುಕೂಲವಾಗುವಂತೆ ಸರ್ಕಾರವು ಗ್ರಾಮ ವಾಸ್ತವ್ಯದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.