
ಲಕ್ಷ್ಮೇಶ್ವರ: 28 ಸದಸ್ಯ ಬಲ ಹೊಂದಿರುವ ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶಿಗ್ಲಿ ಗ್ರಾಮ ಪಂಚಾಯಿತಿ ಹೊರವಲಯದ ಮುಖ್ಯ ರಸ್ತೆ, ಚರಂಡಿಗಳ ಮೇಲೆ ಬರೀ ಕಸದ ರಾಶಿಯೇ ತುಂಬಿಕೊಂಡಿದ್ದು, ಆ ಭಾಗದಲ್ಲಿ ಗಬ್ಬು ವಾಸನೆ ಹೊರಸೂಸುತ್ತಿದೆ. ಇದರಿಂದಾಗಿ, ಸಾರ್ವಜನಿಕರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.
ಗ್ರಾಮದ ಸೇವಾ ಮಂದಿರದ ಹಿಂಭಾಗದ ರಸ್ತೆಯ ಎರಡೂ ಬದಿಯಲ್ಲಿ ಕಸದ ಗುಡ್ಡೆಗಳು ಇದ್ದು ಕಸದ ರಾಶಿಯಲ್ಲಿನ ಪ್ಲಾಸ್ಟಿಕ್ ಹಾಳೆಗಳು ಇಡೀ ರಸ್ತೆ ತುಂಬ ಹಾರಾಡುತ್ತಿರುತ್ತವೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯ ಚರಂಡಿಗಳಲ್ಲಿ ಬಿದ್ದು ಕೊಳಚೆ ನೀರು ಸುಲಭವಾಗಿ ಹರಿದುಹೋಗಲು ಅಡ್ಡಿ ಉಂಟಾಗಿದೆ. ಇದರಿಂದಾಗಿ ಕೊಳಕು ಅಲ್ಲೇ ನಿಂತು, ದುರ್ನಾತ ಊರಿಗೆಲ್ಲಾ ಹಬ್ಬಿದೆ.
ಇನ್ನು ಗೋವನಾಳ ರಸ್ತೆಯ ಎರಡೂ ಬದಿಯಲ್ಲಿ ಸಾಕಷ್ಟು ಕಸದ ರಾಶಿ ಬಿದ್ದಿದ್ದು, ಅಲ್ಲಿಯೂ ಕಲುಷಿತ ವಾತಾವರಣ ಇದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಆಗಾಗ ಇಲ್ಲಿನ ಕಸವನ್ನು ವಿಲೇವಾರಿ ಮಾಡಿ, ಗ್ರಾಮದ ಸ್ವಚ್ಛತೆಗೆ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ರಸ್ತೆ ಪಕ್ಕದಲ್ಲಿಯೇ ಅಂಗನವಾಡಿ ಇದ್ದು, ಇಲ್ಲಿನ ಕಲುಷಿತ ವಾತಾವರಣ ಚಿಕ್ಕಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಇದೆ ಎಂದು ಪೋಷಕರು ಹೇಳಿದ್ದಾರೆ.
ಊರಿನ ಸ್ವಚ್ಛತೆಗೆ ಸ್ಥಳೀಯ ಆಡಳಿತ ತುರ್ತು ಕ್ರಮವಹಿಸಬೇಕು. ಇಲ್ಲವಾದರೆ, ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಗ್ರಾಮದ ಹೊರವಲಯದ ರಸ್ತೆಗಳಲ್ಲಿ ಗ್ರಾಮಸ್ಥರು ತಿಪ್ಪೆ ಹಾಕಿರುವುದರಿಂದ ಮಲಿನತೆ ಉಂಟಾಗುತ್ತಿದೆ. ಅಲ್ಲದೆ ಕೆಲವರು ಕಸಕಡ್ಡಿ ಇಲ್ಲಿಯೇ ಹಾಕುತ್ತಾರೆ. ಹೀಗಾಗಿ ಕಸದ ರಾಶಿ ಉಂಟಾಗಿದ್ದು ಬೇಗನೇ ತೆರವುಗೊಳಿಸಲಾಗುವುದು
– ಆರ್.ಎಸ್.ಕೊರಕನವರ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.