ADVERTISEMENT

ಮುಂಡರಗಿ | ಶವಸಂಸ್ಕಾರಕ್ಕೆ ಇಲ್ಲಿ ನೂರೆಂಟು ವಿಘ್ನ: ಜನರ ಆಕ್ರೋಶ

ಕಾಶಿನಾಥ ಬಿಳಿಮಗ್ಗದ
Published 16 ಫೆಬ್ರುವರಿ 2026, 7:26 IST
Last Updated 16 ಫೆಬ್ರುವರಿ 2026, 7:26 IST
ಪ್ರವಾಹದ ಕಾರಣದಿಂದ ಪ್ರತಿವರ್ಷ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಸ್ಮಶಾನ (ಸಂಗ್ರಹ ಹ ಚಿತ್ರ)
ಪ್ರವಾಹದ ಕಾರಣದಿಂದ ಪ್ರತಿವರ್ಷ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಸ್ಮಶಾನ (ಸಂಗ್ರಹ ಹ ಚಿತ್ರ)   

ಮುಂಡರಗಿ: ತಾಲ್ಲೂಕಿನ ವಿವಿಧ ಗ್ರಾಮಗಳ ಸ್ಮಶಾನಗಳ ಸಮಸ್ಯೆಗಳು ಸಾರ್ವಜನಿಕರನ್ನು ಗಂಭೀರವಾಗಿ ಕಾಡುತ್ತಿದ್ದು, ಸತ್ತವರನ್ನು ಹೂಳಲು ಸೂಕ್ತ ಸ್ಥಳ ದೊರೆಯದೇ ಮೃತರ ಸಂಬಂಧಿಕರು ಹಲವಾರು ಸಮಸ್ಯೆ ಎದುರಿಸುವಂತಾಗಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿರುವ ಹಿಂದು ಸಮಾಜದ ಸ್ಮಶಾನಗಳು ರಸ್ತೆ, ನೀರು, ನೆರಳು, ಸ್ವಚ್ಛತೆ ಮೊದಲಾದ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದ್ದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಸ್ಮಶಾನಕ್ಕೆ ತೆರಳಲು ಹಿಂದೇಟು ಹಾಕುವಂತಾಗಿದೆ.

ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಹಿಂದು ಸ್ಮಶಾನವು ಗ್ರಾಮದಿಂದ ಒಂದೂವರೆ ಕಿ.ಮೀ. ದೂರದಲ್ಲಿದ್ದು, ಅಲ್ಲಿಗೆ ತೆರಳಲು ಸೂಕ್ತ ರಸ್ತೆಗಳಿಲ್ಲ. ಶವ ಹೊತ್ತು ಸಾಗುವವರು ಹಾಗೂ ಅಂತ್ಯಕ್ರೀಯೆಗೆ ತೆರಳುವವರು ಅರ್ಧ ಕಿ.ಮೀ.ಗೂ ಹೆಚ್ಚು ದೂರ ಭತ್ತದ ಗದ್ದೆಗಳ ಕಾಲು ದಾರಿಯಲ್ಲಿ ಸರ್ಕಸ್ ಮಾಡುತ್ತಾ ಸಾಗಬೇಕಿದೆ. ಸ್ಮಶಾನವು ಸಂಪೂರ್ಣವಾಗಿ ಗಿಡ, ಗಂಟೆಗಳಿಂದ ಆವೃತ್ತವಾಗಿದ್ದು, ಸ್ವಚ್ಛತೆ ಮರಿಚಿಕೆಯಾಗಿದೆ.

ADVERTISEMENT

ತಾಲ್ಲೂಕಿನ ವಿರುಪಾಪುರ ಗ್ರಾಮಕ್ಕೆ ಅಧಿಕೃತ ಸ್ಮಶಾನವೇ ಇಲ್ಲದ್ದರಿಂದ ಗ್ರಾಮಸ್ಥರು ಗ್ರಾಮದ ಪಕ್ಕದಲ್ಲಿರುವ ಹಳ್ಳವನ್ನೆ ಸ್ಮಶಾನವನ್ಮಾಗಿ ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಜೋರು ಮಳೆ ಸುರಿದು ಹಳ್ಳದಲ್ಲಿ ನೀರು ಹರಿದರೆ ಶವ ಹೋಳಲು ಅಥವಾ ಅಗ್ನಿಸ್ಪರ್ಶ ಮಾಡಲು ಮೃತರ ಕುಟುಂಬಸ್ಥರು ಪರದಾಡುವಂತಾಗುತ್ತದೆ.

ತಾಲ್ಲೂಕಿನ ಹೆಸರೂರು ಗ್ರಾಮದ ಸ್ಮಶಾನವು ತುಂಗಭದ್ರಾ ನದಿ ದಂಡೆಯಲ್ಲಿದ್ದು, ಅದು ಗ್ರಾಮದಿಂದ ಎರಡು ಕೀ.ಮೀ. ದೂರದಲ್ಲಿದೆ. ಸೂಕ್ತ ವಾಹನ ವ್ಯವಸ್ಥೆ ಇಲ್ಲದ್ದರಿಂದ ಗ್ರಾಮಸ್ಥರು ಶವ ಸಾಗಿಸುವಷ್ಟರಲ್ಲಿ ಹೈರಾಣಾಗಿರುತ್ತಾರೆ. ಅಂತ್ಯಕ್ರಿಯೆಗೆ ತೆರಳಲು ಅಗತ್ಯ ರಸ್ತೆಗಳಿಲ್ಲದ್ದರಿಂದ ವೃದ್ಧರು, ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ತಾಲ್ಲೂಕಿನ ತಿಪ್ಪಾಪುರ ಗ್ರಾಮದ ಹೊರವಲಯದಲ್ಲಿ ಈಚೆಗೆ ಸ್ಮಶಾನಕ್ಕಾಗಿ ಕೇವಲ 20ಗುಂಟೆ ಜಮೀನನ್ನು ಖರೀದಿಸಲಾಗಿದ್ದು, ಅದು ತುಂಬಾ ಕಿರಿದಾಗಿದೆ. ಅಲ್ಲಿಯೂ ಮೂಲ ಸೌಲಭ್ಯಗಳಿಲ್ಲದ್ದರಿಂದ ಗ್ರಾಮಸ್ಥರು ಅಂತ್ಯಕ್ರಿಯೆಗೆ ಪರದಾಡುವಂತಾಗಿದೆ.

ತಾಲ್ಲೂಕಿನ ಹಾರೋಗೇರಿ ಗ್ರಾಮದಲ್ಲಿ ಸಾಕಷ್ಟು ವಿಶಾಲವಾದ ಸ್ಮಶಾನವಿದ್ದು, ಅದಕ್ಕೆ ಕಂಪೌಂಡ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ.

ತಾಲ್ಲೂಕಿನ ತಾಂಬ್ರಗುಂಡಿ ಗ್ರಾಮದ ಸ್ಮಶಾನದ ಜಾಗೆಯು ಖಾಸಗಿ ಮಾಲೀಕತ್ವದಲ್ಲಿದೆ ಎಂದು ಹೇಳಲಾಗುತ್ತಿದ್ದು, ಸಹೋದರರ ನಡುವಿನ ಜಮೀನು ಹಂಚಿಕೆಯ ಕಾರಣದಿಂದ ಅದು ಗೊಂದಲದ ಗೂಡಾಗಿದೆ. ಇದೇ ರೀತಿಯ ಸಮಸ್ಯೆಗಳ ಎಲ್ಲ ಗ್ರಾಮಗಳ ಸ್ಮಶಾನಗಳಲ್ಲಿ ಸಾಮಾನ್ಯವಾಗಿವೆ.

ತಾಲ್ಲೂಕಿನ ಹೊಸಡಂಬಳ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಸ್ಮಶಾನಗಳಿಲ್ಲದ್ದರಿಂದ ಗ್ರಾಮಸ್ಥರು ಹಲವು ಸಮಸ್ಯೆ ಎದುರಿಸುವಂತಾಗಿದೆ. ಸ್ಮಶಾನಗಳಿಲ್ಲದ ಗ್ರಾಮಗಳಿಗೆ ಜಮೀನು ಖರೀದಿಸಲು ಸರ್ಕಾರ ಸಿದ್ಧವಿದೆ. ಆದರೆ, ಗ್ರಾಮದ ಅಕ್ಕಪಕ್ಕದ ರೈತರು ಜಮೀನು ಮಾರಲು ಮುಂದೆ ಬರುತ್ತಿಲ್ಲ. ಹೀಗಾಗಿ ಸ್ಮಶಾನಕ್ಕೆ ಜಮೀನು ಖರೀದಿಸುವುದು ತಾಲ್ಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಖಾಸಗಿ ಜಮೀನೇ ಸ್ಮಶಾನ: ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ 50 ವರ್ಷಗಳಿಂದಲೂ ಖಾಸಗಿ ವ್ಯಕ್ತಿಗಳಿಗೆ ಸೇರಿದ 6ಎಕರೆ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದು, ಜಮೀನಿನ ಮಾಲೀಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರ ವಿರೋಧ ಕಟ್ಟಿಕೊಳ್ಳುವುದು ಸಮಂಜಸವಲ್ಲ ಎಂದು ಈವರೆಗೂ ಸುಮ್ಮನಿದ್ದ ಜಮೀನಿನ ಮಾಲೀಕರು ಈಗ ತಕರಾರು ತೆಗೆಯುತ್ತಿದ್ದಾರೆ.

’ತಮ್ಮ ಕುಟುಂಬಕ್ಕಿದ್ದ ಜಮೀನು ಸ್ಮಶಾನವಾಗಿ ಮಾರ್ಪಾಡಾಗಿದ್ದು, ನಮಗೆ ಉಳುಮೆ ಮಾಡಲು ಜಮೀನು ಇಲ್ಲದಂತಾಗಿದೆ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಗ್ರಾಮದ ಬೇರೆಡೆಗೆ ತಮಗೆ ಸೂಕ್ತ ಜಮೀನು ನೀಡಿದರೆ ಈಗ ಸ್ಮಶಾನವಾಗಿ ಮಾರ್ಪಟ್ಟಿರುವ ಜಮೀನನ್ನು ಸ್ಮಶಾನಕ್ಕೆ ಬಿಟ್ಟುಕೊಡುತ್ತೇವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದ್ದೂ ಇಲ್ಲದಂತಾಗಿರುವ ಸ್ಮಶಾನ

ತಾಲ್ಲೂಕಿನ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಬಿದರಳ್ಳಿ ಗ್ರಾಮವನ್ನು ನವಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ನವಗ್ರಾಮದ ಪಕ್ಕದಲ್ಲಿಯೇ ಸ್ಮಶಾನಕ್ಕಾಗಿ 3ಎಕರೆ ಜಮೀನು ನೀಡಲಾಗಿದೆ. ಸ್ಮಶಾನಕ್ಕೆ ಅಂಟಿಕೊಂಡಿರುವಂತೆ ಗ್ರಾಮಸ್ಥರ ಮನೆಗಳಿದ್ದು, ಅಲ್ಲಿ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ನಿರಾಕರಿಸಿದ್ದಾರೆ. ಹಳೆಯ ಸ್ಮಶಾನವು ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದು, ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಅಲೆದಾಡುವಂತಾಗಿದೆ. ಅದೇ ರೀತಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಗುಮ್ಮಗೋಳ ಗ್ರಾಮಸ್ಥರು ಸ್ಮಶಾನಕ್ಕಾಗಿ ಪರದಾಡುವಂತಾಗಿದೆ.

ಖಬರಸ್ತಾನ ಕೊರತೆ:

ತಾಲ್ಲೂಕಿನ ಚಿಕ್ಕವಡ್ಡಟ್ಟಿ ಹಾಗೂ ಮತ್ತಿತರ ಕೆಲವು ಗ್ರಾಮಗಳಲ್ಲಿ ಮುಸ್ಲಿಂ ಸಮಾಜದ ಜನರ ಅಂತ್ಯ ಸಂಸ್ಕಾರಕ್ಕೆ ಖಬರಸ್ತಾನಗಳು ಇಲ್ಲ. ಈಗಾಗಲೇ ಅಸ್ಥಿತ್ವದಲ್ಲಿರುವ ಭಾಗಶಃ ಖಬರಸ್ತಾನಗಳು ಸ್ವಚ್ಛವಾಗಿದ್ದು, ಸಮಾಜ ಬಾಂಧವರು ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿದ್ದಾರೆ. ಮುಂಡರಗಿ ಪಟ್ಟಣದಲ್ಲಿ 13ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಖಬರಸ್ತಾನವು ನೀರು, ನೆರಳು, ರಸ್ತೆ ಮೊದಲಾದ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ.ತಾಲ್ಲೂಕಿನ ಚಿಕ್ಕವಡ್ಡಟ್ಟಿ ಹಾಗೂ ಮತ್ತಿತರ ಕೆಲವು ಗ್ರಾಮಗಳಲ್ಲಿ ಖಬರಸ್ತಾನಗಳಿಲ್ಲದ್ದರಿಂದ ಮುಸ್ಲಿಂ ಸಮಾಜದವರು ತೊಂದರೆ ಅನುಭವಿಸುತ್ತಿದ್ದಾರೆ. ಖಬರಸ್ತಾನಕ್ಕೆ ಜಮೀನು ನೀಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

50ವರ್ಷಗಳಿಂದ ನಮ್ಮ ಕುಟುಂಬದ ಜಮೀನಿನಲ್ಲಿ ಹಮ್ಮಿಗಿ ಗ್ರಾಮಸ್ಥರು ಶವ ಸಂಸ್ಕಾರ ಮಾಡುತ್ತಿದ್ದು, ಜಮೀನು ಭಾಗಶಃ ಸ್ಮಶಾನವಾಗಿ ಪರಿವರ್ತನೆಯಾಗಿದೆ. ಅರ್ಧ ಜಮೀನು ತುಂಗಭದ್ರಾ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಇನ್ನರ್ಧ ಜಮೀನು ಸ್ಮಶಾನವಾಗಿದೆ. ಸರ್ಕಾರ ನಮಗೆ ಬೇರೆಡೆ ಜಮೀನು ಖರೀಸಿಕೊಟ್ಟರೆ ನಮ್ಮ ಜಮೀನನ್ನು ಸಂಪೂರ್ಣವಾಗಿ ಸ್ಮಶಾನಕ್ಕೆ ಬಿಟ್ಟುಕೊಡುತ್ತೇವೆ.
ಶರಣಯ್ಯ ಕಲ್ಮಠ, ಹಮ್ಮಿಗಿ ಗ್ರಾಮಸ್ಥ
ತಿಪ್ಪಾಪುರ ಗ್ರಾಮ ಸೇರಿದಂತೆ ತಾಲ್ಲೂಕಿನ ಬಹುತೇಕ ಸ್ಮಶಾನಗಳು ರಸ್ತೆ, ನೀರು, ಸ್ವಚ್ಛತೆ ಮೊದಲಾದ ಮೂಲ ಸೌಕರ್ಯಗಳಿಂದ ವಂಚಿತಗೊಂಡಿವೆ. ಸ್ಮಶಾನಗಳ ನಿರ್ವಹಣೆಯು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿದ್ದು, ಆಯಾ ಗ್ರಾಮ ಪಂಚಾಯಿತಿಯವರು ತಮ್ಮ ಗ್ರಾಮಗಳ ಸ್ಮಶಾನಗಳಿಗೆ ಮೂಲ ಸೌಲಭ್ಯ ಒದಗಿಸಿ, ನಿಯಮಿತವಾಗಿ ಅವುಗಳನ್ನು ಸ್ವಚ್ಛ ಮಾಡಬೇಕು.
ದೇವು ಹಡಪದ ಗ್ರಾ.ಪಂ. ಮಾಜಿ ಸದಸ್ಯ ತಿಪ್ಪಾಪುರ
ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆಗಳಿಲ್ಲದ್ದರಿಂದ ಅಂತ್ಯಕ್ರಿಯೆಗೆ ತೆರಳುವ ವೃದ್ಧರು ಹಾಗೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನರೇಗಾ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ತಾಲ್ಲೂಕಿನ ಎಲ್ಲ ಗ್ರಾಮಗಳ ಸ್ಮಶಾನಗಳಿಗೆ ಸುಕ್ತ ರಸ್ತೆ ನಿರ್ಮಿಸಿಕೊಡಬೇಕು. ಆಯಾ ಗ್ರಾಮ ಪಂಚಾಯ್ತಿಗಳಿಗೆ ಶವ ವಾಹನ ಖರೀಧಿಸಲು ಹಾಗೂ ಅದರ ನಿರ್ವಹಣೆಗೆ ಅಗತ್ಯ ಅನುದಾನ ನೀಡಬೇಕು.
ಮೌನೇಶ ಬಡಿಗೇರ, ಹೆಸರೂರು ಗ್ರಾಮಸ್ಥ
ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆಗಳಿಲ್ಲದ್ದರಿಂದ ಅಂತ್ಯಕ್ರಿಯೆಗೆ ತೆರಳುವ ವೃದ್ಧರು ಹಾಗೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನರೇಗಾ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ತಾಲ್ಲೂಕಿನ ಎಲ್ಲ ಗ್ರಾಮಗಳ ಸ್ಮಶಾನಗಳಿಗೆ ಸುಕ್ತ ರಸ್ತೆ ನಿರ್ಮಿಸಿಕೊಡಬೇಕು. ಆಯಾ ಗ್ರಾಮ ಪಂಚಾಯ್ತಿಗಳಿಗೆ ಶವ ವಾಹನ ಖರೀಧಿಸಲು ಹಾಗೂ ಅದರ ನಿರ್ವಹಣೆಗೆ ಅಗತ್ಯ ಅನುದಾನ ನೀಡಬೇಕು.
ಮೌನೇಶ ಬಡಿಗೇರ, ಹೆಸರೂರು ಗ್ರಾಮಸ್ಥ
ಕಪ್ಪತಗುಡ್ಡದ ಅಂಚಿನಲ್ಲಿರುವ ಗ್ರಾಮಗಳ ಅಕ್ಕಪಕ್ಕದಲ್ಲಿ ಕಾಡು ಪ್ರಾಣಿಗಳು ಓಡಾಡುತ್ತಿರುತ್ತವೆ. ಕೆಲವು ಸಂದರ್ಭಗಳಲ್ಲಿ ಕೆಲವು ಕಾಡು ಪ್ರಾಣಿಗಳು ಹೂತ ಶವವನ್ನು ಭಕ್ಷಿಸಲು ಪ್ರಯತ್ನಿಸುತ್ತವೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕಪ್ಪತಗುಡ್ಡದ ಅಂಚಿನಲ್ಲಿರುವ ಗ್ರಾಮಗಳ ಸ್ಮಶಾನಗಳಿಗೆ ಕಡ್ಡಾಯವಾಗಿ ಕಂಪೌಡ್ ನಿರ್ಮಿಸಬೇಕು. ಹಾಗೂ ಸ್ಮಶಾನಗಳಿಗೆ ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಬೇಕು.
ಕುಬೇರ ವೀರಾಪುರ ಹಾರೋಗೇರಿ ಗ್ರಾಮದ ಯುವಕ
ತಾಲ್ಲೂಕಿನ ಚಿಕ್ಕವಡ್ಡಟ್ಟಿ ಹಾಗೂ ಮತ್ತಿತರ ಕೆಲವು ಗ್ರಾಮಗಳಲ್ಲಿ ಖಬರಸ್ತಾನಗಳಿಲ್ಲದ್ದರಿಂದ ಮುಸ್ಲಿಂ ಸಮಾಜದವರು ತೊಂದರೆ ಅನುಭವಿಸುತ್ತಿದ್ದಾರೆ. ಖಬರಸ್ತಾನಕ್ಕೆ ಜಮೀನು ನೀಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ನಬೀಸಾಬ್ ಕೆಲೂರ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ಮುಂಡರಗಿ
ಸ್ಮಶಾನಗಳಿಲ್ಲದ ಗ್ರಾಮಗಳಲ್ಲಿ ಜಮೀನು ಖರೀದಿಸಲು ಕಂದಾಯ ಇಲಾಖೆಯು ಸಿದ್ಧವಿದೆ. ಆದರೆ, ಗ್ರಾಮದ ರೈತರು ಜಮೀನು ಮಾರಲು ಮುಂದೆ ಬರುತ್ತಿಲ್ಲ. ಹೀಗಾಗಿ ಕೆಲವು ಗ್ರಾಮಗಳಲ್ಲಿ ಸ್ಮಶಾನ ಸಮಸ್ಯೆ ಉಂಟಾಗಿದೆ.
‌ವಿಶ್ವನಾಥ ಹೊಸಮನಿ, ಇಒ ತಾ.ಪಂ. ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.