ನರಗುಂದ: ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ರೈತರ ತೊಂದರೆಯಾಗಿದೆ. ಅದರಲ್ಲೂ ಮುಂಗಾರು ಹಂಗಾಮಿನ ವಾಣಿಜ್ಯ ಬೆಳೆಯಾದ ಹೆಸರು ಬೆಳೆದ ರೈತರ ಪಾಡಂತೂ ಹೇಳತೀರದಾಗಿದೆ.
ಸಕಾಲಕ್ಕೆ ಮಳೆಯಾಗದೇ ಸಮರ್ಪಕವಾಗಿ ಇಳುವರಿ ಬರದ ರೀತಿಯಲ್ಲಿ ಹೆಸರು ಬೆಳೆದು ಕಟಾವು ಹಂತಕ್ಕೆ ಬಂದು ನಿಂತಿವೆ. ಆದರೆ, ಕಟಾವಿನ ಸಂದರ್ಭದಲ್ಲಿ ಮಳೆ ನಿರಂತರ ಸುರಿಯುತ್ತಿದ್ದು, ಇದರಿಂದ ಹೆಸರು ರಾಶಿ ಮಾಡದಂತಾಗಿದೆ. ಅತಿಯಾದ ಮಳೆ ಹೊಲಕ್ಕೆ ಕಾಲಿಡದಂತೆ ಮಾಡಿದೆ.
ಕಟಾವು ಯಂತ್ರಗಳು ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿವೆ. ಮಳೆನಿಂತರೂ ಕಟಾವು ಮಾಡಲು ಅವಕಾಶ ಸಿಗದಂತಾಗಿದೆ. ಕಟಾವು ಯಂತ್ರ ಹೊಲ ಪ್ರವೇಶಿಸಿದರೆ ಹೆಸರು ಕಾಳು ಸಿಡಿದು ಅರ್ಧ ನೆಲದ ಪಾಲು ಆಗುವ ಭೀತಿ ಹೆಚ್ಚಾಗಿದೆ. ಇನ್ನು ಕೂಲಿಕಾರರಿಂದ ಹೆಸರು ಬಿಡಿಸಬೇಕೆಂದರೆ ಸಾಧ್ಯವಾಗುತ್ತಿಲ್ಲ. ಹೆಸರು ಬೆಳೆ ಜಲಾವೃತಗೊಂಡು ಒಣಗಿದ ಹೆಸರು ಮಳೆಯ ಪರಿಣಾಮ ಮೊಳಕೆ ಒಡೆಯುವ ಹಂತಕ್ಕೆ ತಲುಪಿವೆ.
ಅತಿವೃಷ್ಟಿಯಿಂದ ರೈತ ಕಂಗಾಲು: ಪ್ರಸ್ತುತ ಹೆಸರು ಬೆಳೆ ಕ್ವಿಂಟಲ್‌ಗೆ ₹9 ಸಾವಿರದಿಂದ ₹10 ಸಾವಿರಕ್ಕೆ ಮಾರಾಟವಾಗುತ್ತಿದೆ. ಸರ್ಕಾರದ ಬೆಂಬಲ ಬೆಲೆಯೇ ₹8 ಸಾವಿರದಷ್ಟಿದೆ. ಇಷ್ಟು ಲಾಭ ನೀಡುವ ಬೆಳೆ ಅತಿವೃಷ್ಟಿಯಿಂದ ಹಾನಿಗೊಳಗಾಗುತ್ತಿದೆ. ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ.
ಮಳೆ ನಡುವೆಯೂ ಹೆಸರು ರಾಶಿ: ಸುರಕೋಡ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಕೆಲವು ರೈತರು ಮಳೆಯಲ್ಲಿಯೇ ಹೆಸರು ಬಿಡಿಸಲು ಮುಂದಾಗಿದ್ದಾರೆ. ಆದರೆ, ಮಂಗಳವಾರ ಅತಿ ಜೋರಾದ ಮಳೆ ಸುರಿದ ಪರಿಣಾಮ ಅರ್ಧಕ್ಕೆ ಹೊಲದಿಂದ ಮನೆಯತ್ತ ತೆರಳಿದರು.
ಬೀಡು ಬಿಟ್ಟ ಯಂತ್ರಗಳು: ತಾಲ್ಲೂಕಿನಲ್ಲಿ 100ಕ್ಕೂ ಹೆಚ್ಚು ಹೆಸರು ಕಾಳು ಕಟಾವು ಯಂತ್ರಗಳು ಧಾರವಾಡ, ಬಾಗಲಕೋಟಿ, ಬೆಳಗಾವಿ, ವಿಜಯಪುರ, ಗಂಗಾವತಿ, ಸಿಂದನೂರು ಸ್ಥಳಗಳಿಂದ ಬಂದಿವೆ. ಇವುಗಳಿಗೆ ಕೆಲಸವಿಲ್ಲದೇ ನಿಂತಿದ್ದು ಇವುಗಳನ್ನು ನೋಡಿಕೊಳ್ಳುವವರು ತೊಂದರೆ ಪಡುವಂತಾಗಿದೆ. ನಿತ್ಯ ವಸತಿ, ಊಟಕ್ಕೂ ಕಷ್ಟಪಡುವಂತಾಗಿದೆ ಎಂದು ವಿಜಯಪುರದ ಕಟಾವು ಯಂತ್ರದ ರಮೇಶ ಹೇಳಿದರು.
ಮುಂಗಾರು ಸಂದರ್ಭದ ವಾಣಿಜ್ಯ ಬೆಳೆ ಹೆಸರು ಹಾನಿಯಾಗಿದೆ. ಅನಾವೃಷ್ಟಿ ಹಾಗೂ ಅತಿವೃಷ್ಟಿ ರೈತರಿಗೆ ತೊಂದರೆಯಾಗಿದೆ. ಆದ್ದರಿಂದ ಸರ್ಕಾರ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆಯನ್ನು ಕೂಡಲೇ ಬಿಡುಗಡೆ ಮಾಡಬೇಕುನಾಗೇಶ ಅಪ್ಪೋಜಿ ರೈತ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.