ADVERTISEMENT

ಗೃಹಲಕ್ಷ್ಮಿಗೆ ಜಿಎಸ್‌ಟಿ ನೋಂದಣಿ ಅಡ್ಡಿ; ಸಮಸ್ಯೆ ಬಗೆಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:34 IST
Last Updated 2 ಜೂನ್ 2025, 15:34 IST
ಗದಗ ನಗರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ನಡೆದ ಗದಗ ತಾಲ್ಲೂಕು ಮಟ್ಟದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿದರು
ಗದಗ ನಗರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ನಡೆದ ಗದಗ ತಾಲ್ಲೂಕು ಮಟ್ಟದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿದರು   

ಗದಗ: ‘ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಂಡಿದೆ. ಈ ಮೊದಲು ಜಿಎಸ್‌ಟಿಯಲ್ಲಿ ನೋಂದಣಿಯಾಗಿ, ನಂತರ ರದ್ದುಪಡಿಸಿದ ಮೇಲೂ ಅನೇಕ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕ್ರಮವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಸೂಚಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ನಡೆದ ಗದಗ ತಾಲ್ಲೂಕು ಮಟ್ಟದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಮಾತನಾಡಿದರು.

‘ತಾಂತ್ರಿಕ ಸಮಸ್ಯೆ ಕಾರಣಕ್ಕೆ ಯೋಜನೆಯಿಂದ ಯಾರೂ ಹೊರಗುಳಿಯುವಂತೆ ಆಗಬಾರದು. ಜಿಎಸ್‌ಟಿ ನೋಂದಣಿ ರದ್ದುಗೊಂಡ ನಂತರವೂ ಯೋಜನೆಯ ಲಾಭ ಸಿಗದವರ ಸಮಸ್ಯೆ ಬಗೆಹರಿಸಲು ತ್ವರಿತ ಕ್ರಮ ಅನುಸರಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಜಿಎಸ್‌ಟಿಯಿಂದ ವಂಚಿತರಾದವರ ಪಟ್ಟಿಯನ್ನು ಈಗಾಗಲೇ ರಾಜ್ಯ ಕಚೇರಿಗೆ ಕಳುಹಿಸಲಾಗಿದೆ. ಆಗಸ್ಟ್‌ ಒಳಗಾಗಿ ಜಿಎಸ್‌ಟಿ ಪೋರ್ಟಲ್‌ನಿಂದ ಅವರ ಹೆಸರುಗಳನ್ನು ತೆಗೆದು ಹಾಕಿ, ಗೃಹಲಕ್ಷ್ಮಿ ಯೋಜನೆಯ ಲಾಭ ದೊರಕುವಂತೆ ಮಾಡಲಾಗುವುದು’ ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಆಹಾರ ಇಲಾಖೆ ಅಧಿಕಾರಿಗಳು ಪಡಿತರ ಅಂಗಡಿದಾರರ ಜತೆಗೆ ಸಭೆ ನಡೆಸಬೇಕು. ಒಂದು ವರ್ಷದಿಂದ ಪಡಿತರ ಅಕ್ಕಿ ಪಡೆಯದೇ ಇರುವ ಪಡಿತರ ಕಾರ್ಡ್‌ಗಳ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಗದಗ ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ‘ಯೋಜನೆಯ ಪ್ರಗತಿಯ ಕುರಿತು ನಿಖರ ಮಾಹಿತಿ ಒದಗಿಸಬೇಕು. ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು’ ಎಂದರು.

ಗದಗ ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಪಡೆಯುತ್ತಿದ್ದ ಕೆಲವು ಮಹಿಳೆಯರು ಮರಣ ಹೊಂದಿದ ಹಿನ್ನಲೆಯಲ್ಲಿ ಅವರ ಹೆಸರನ್ನು ಫಲಾನುಭವಿಯ ಪಟ್ಟಿಯಿಂದ ಕೈ ಬಿಡಬೇಕು ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಅಸೂಟಿ, ‘ಒಂದು ಮನೆಯ ಯಜಮಾನ ಗೃಹಜ್ಯೋತಿ ಯೋಜನೆಯ ಫಲಾನುಭವಿಯಾಗಿದ್ದು, ಎಷ್ಟು ಕಡಿಮೆ ವಿದ್ಯುತ್ ಉಪಯೋಗಿಸಿದರೂ ಬಿಲ್ ಬರುತ್ತಿದೆ ಎಂದು ಹೇಳುತ್ತಿದ್ದಾರೆ’ ಎಂದು ಸಮಸ್ಯೆಯನ್ನು ಸಭೆಯ ಮುಂದಿಟ್ಟರು.

ಇದಕ್ಕೆ ಉತ್ತರಿಸಿದ ಹೆಸ್ಕಾಂ ಅಧಿಕಾರಿಗಳು, ‘ಗೃಹಜ್ಯೋತಿ ಫಲಾನುಭವಿಗಳಿಗೆ 2022-23ನೇ ಸಾಲಿನಲ್ಲಿ ಉಪಯೋಗಿಸಿದ ವಿದ್ಯುತ್‌ ಅನ್ನು ಮಾಪನವಾಗಿ ತೆಗೆದುಕೊಳ್ಳುತ್ತೇವೆ. ಹಾಗಾಗಿ ಹಿಂದಿನ ಒಂದು ವರ್ಷ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅತ್ಯಂತ ಕಡಿಮೆ ವಿದ್ಯುತ್ ಬಳಕೆಯಾಗಿದ್ದು ಸರ್ಕಾರದ ಆದೇಶದ ಅನುಸಾರ ಹಿಂದಿನ ವರ್ಷದ ವಿದ್ಯುತ್ ಬಳಕೆಯನ್ನು ಮಾಪನವಾಗಿ ತೆಗೆದುಕೊಂಡಿರುವುದರಿಂದ ಹೀಗಾಗಿದೆ’ ಎಂದರು.

ಬಳಿಕ, ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯವನಿಧಿ ಯೋಜನೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಪ್ರಗತಿಯ ವಿವರವನ್ನು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯರಾದ ಶಂಭು ಕಾಳೆ, ಮೀನಾಕ್ಷಿ ಬೆನಕಣ್ಣವರ, ಸಂಗು ಕರಕಲಮಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ್, ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ, ಷರೀಫ್, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ರುದ್ರಪ್ಪ ಬಾವಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಿತ ಅಧಿಕಾರಿಗಳು ಇದ್ದರು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಜೀವನದಲ್ಲಿ ನಿಜವಾದ ಶಕ್ತಿ ಬಂದಂತಾಗಿದೆ. ಮಹಿಳೆಯರು ಸ್ವಾವಲಂಬನೆಯ ಬದುಕು ನಡೆಸಲು ಸಹಕಾರಿಯಾಗಿದೆ
ಎಚ್‌.ಕೆ.‍ಪಾಟೀಲ ಸಚಿವ
ಗೃಹಲಕ್ಷ್ಮಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಕಾರ್ಯಕರ್ತೆಯರ ಸಭೆ ಕರೆದು ಸಮೀಕ್ಷೆ ಕಾರ್ಯ ಚುರುಕುಗೊಳಿಸಬೇಕು
ಅಶೋಕ ಮಂದಾಲಿ ಗದಗ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.