ADVERTISEMENT

ಲಕ್ಷ್ಮೇಶ್ವರ | ಒಣಗಿದ ಕೊಳವೆಬಾವಿ: ಶೇಂಗಾ ಹರಗಿದ ಅನ್ನದಾತ

ನಾಗರಾಜ ಎಸ್‌.ಹಣಗಿ
Published 13 ಫೆಬ್ರುವರಿ 2024, 7:45 IST
Last Updated 13 ಫೆಬ್ರುವರಿ 2024, 7:45 IST
ಲಕ್ಷ್ಮೇಶ್ವರ ತಾಲ್ಲೂಕಿನ ಉಂಡೇನಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ಕೊಳವೆ ಬಾವಿ ಬತ್ತಿದ ಕಾರಣ ಬಿತ್ತನೆ ಮಾಡಿದ್ದ ಶೇಂಗಾ ಹರಗಿದ್ದಾರೆ
ಲಕ್ಷ್ಮೇಶ್ವರ ತಾಲ್ಲೂಕಿನ ಉಂಡೇನಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ಕೊಳವೆ ಬಾವಿ ಬತ್ತಿದ ಕಾರಣ ಬಿತ್ತನೆ ಮಾಡಿದ್ದ ಶೇಂಗಾ ಹರಗಿದ್ದಾರೆ   

ಲಕ್ಷ್ಮೇಶ್ವರ: ಅಂತರ್ಜಲಮಟ್ಟ ಕುಸಿದ ಕಾರಣ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಇದರಿಂದಾಗಿ ಬಿತ್ತನೆ ಮಾಡಿದ ಬೇಸಿಗೆ ಶೇಂಗಾ ಬೆಳೆಯನ್ನು ರೈತರು ಹರಗುತ್ತಿದ್ದಾರೆ.

ಕೊಳವೆ ಬಾವಿ ಸೌಲಭ್ಯ ಇರುವ ರೈತರು ಈ ಬಾರಿ ನೂರಾರು ಹೆಕ್ಟೇರ್‌ನಲ್ಲಿ ಬೇಸಿಗೆ ಶೇಂಗಾ ಬಿತ್ತನೆ ಮಾಡಿದ್ದರು. ಲಕ್ಷ್ಮೆಶ್ವರದ ರೈತ ಸಂಪರ್ಕ ಕೇಂದ್ರದ ವತಿಯಿಂದ ಈ ವರ್ಷ 550 ಕ್ವಿಂಟಲ್ ಶೇಂಗಾ ಬೀಜ ಮಾರಾಟ ಮಾಡಲಾಗಿತ್ತು. ಅದರಂತೆ ರೈತರು ಕಷ್ಟಪಟ್ಟು ಶೇಂಗಾ ಬಿತ್ತನೆ ಕೂಡ ಮಾಡಿದ್ದರು. ಆದರೆ ಈಗ ಕೊಳವೆಬಾವಿಗಳು ಬತ್ತುವ ಹಂತಕ್ಕೆ ಬಂದಿದ್ದು ಶೇಂಗಾ ಬೆಳೆಗೆ ನೀರು ಸಾಕಾಗುತ್ತಿಲ್ಲ.

ಹೀಗಾಗಿ ಬಿತ್ತನೆ ಮಾಡಿದ ಬೆಳೆಯನ್ನು ರೈತರು ಹರಗುತ್ತಿದ್ದಾರೆ. ಉಂಡೇನಹಳ್ಳಿ ಗ್ರಾಮದ ಮಾಳವ್ವ ನಂದಗಾವಿ ಎಂಬ ರೈತ ಮಹಿಳೆ ಒಂದು ಎಕರೆಯಲ್ಲಿ ಬೆಳೆದಿದ್ದ ಬೇಸಿಗೆ ಶೇಂಗಾವನ್ನು ಈಗಾಗಲೇ ಹರಿಗಿದ್ದಾರೆ. ಅದರಂತೆ ಅದೇ ಗುರುಸಿದ್ದಪ್ಪ ಸಂಗೂರ, ಗುಡದಯ್ಯ ಮಾಡಳ್ಳಿ, ನಾಗಪ್ಪ ಈಳಿಗೇರ, ಗುಡ್ಡಪ್ಪ ಸಂಕ್ಲೀಪೂರ ಸೇರಿದಂತೆ ನೂರಾರು ರೈತರು ಬೆಳೆಯನ್ನು ಹರಗಿದ್ದಾರೆ.

ADVERTISEMENT

ಲಕ್ಷ್ಮೇಶ್ವರ ತಾಲ್ಲೂಕಿನಾದ್ಯಂತ ಒಟ್ಟು 4.592 ಕೊಳವೆ ಬಾವಿಗಳು ಇದ್ದು ಲಕ್ಷ್ಮೇಶ್ವರ ಸಮೀಪದ ಉಂಡೇನಹಳ್ಳಿ ಗ್ರಾಮದಲ್ಲಿಯೇ ಬರೋಬ್ಬರಿ 450ಕ್ಕೂ ಕೊಳವೆ ಬಾವಿಗಳನ್ನು ರೈತರು ಕೊರೆಸಿದ್ದಾರೆ. ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆಗಳು ಸರಿಯಾಗಿ ಸುರಿಯದ ಕಾರಣ ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದು ಕೊಳವೆ ಬಾವಿಗಳನ್ನೇ ಹೆಚ್ಚಿದ್ದ ರೈತರ ಜಂಘಾಬಲನೇ ಉಡುಗಿಸಿದೆ. ಶೇಂಗಾ ಬಿತ್ತನೆಗಾಗಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಬಾವಿಗಳಲ್ಲಿ ನೀರು ಕಡಿಮೆ ಆಗುತ್ತಿರುವುದು ಅವರಲ್ಲಿ ಆತಂಕ ಮೂಡಿಸಿದೆ. ‘ಬೋರ್ ನಂಬಿ ಸೇಂಗಾ ಬಿತ್ತೇವ್ರೀ. ಆದರ ಇದ್ದ ಬೋರ್ ಒಣಗಾಕತ್ತಾವು. ಹಿಂಗಾಗಿ ಸೇಂಗಾ ಹರಗೇವ್ರೀ’ ಎಂದು ಗುಡದಯ್ಯ ಮಾಡಳ್ಳಿ ನೋವಿನಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.