ಲಕ್ಷ್ಮೇಶ್ವರ: ಪ್ರಸ್ತುತ ವರ್ಷ ಹಿಂಗಾರು ಬಿತ್ತನೆಗೆ ಉತ್ತಮ ವಾತಾವರಣವಿದ್ದು, ಸದ್ಯ ತಾಲ್ಲೂಕಿನಾದ್ಯಂತ ರೈತರು ಕಡಲೆ ಬಿತ್ತನೆಯಲ್ಲಿ ನಿರತರಾಗಿದ್ದಾರೆ. ಈ ವರ್ಷದ ಅತಿವೃಷ್ಟಿಗೆ ಬಹುತೇಕ ಮುಂಗಾರು ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಆದರೆ ಈಗ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಕಡಲೆ ಬಿತ್ತನೆಗೆ ಮುಂದಾಗಿದ್ದಾರೆ. ಪ್ರಸ್ತುತ ವರ್ಷ 8,860 ಹೆಕ್ಟೇರ್ ಭೂಮಿಯಲ್ಲಿ ಕಡಲೆ ಬಿತ್ತನೆ ಆಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಆದರೆ ಬಿತ್ತನೆ ಪ್ರದೇಶ ಇದಕ್ಕೂ ಹೆಚ್ಚಾಗಬಹುದು ಎನ್ನುತ್ತಾರೆ ರೈತರು.
ಹಿಂಗಾರು ಬಿತ್ತನೆಗೆ ಭೂಮಿ ಹದ ಮಾಡಿಕೊಂಡ ರೈತರು ಈಗ ಕಡಲೆ ಬಿತ್ತನೆಗೆ ಮುಂದಾಗಿದ್ದಾರೆ.
ಸಣ್ಣ ಬೇರಿನ ಬೆಳೆಗಳಲ್ಲಿ ಒಂದಾದ ಕಡಲೆಗೆ ಹೆಚ್ಚಿನ ತೇವಾಂಶದ ಅಗತ್ಯ ಇರುವುದಿಲ್ಲ. ಕೇವಲ ತಂಪು ವಾತಾವರಣಕ್ಕೆ ಬೆಳೆ ಚೆನ್ನಾಗಿ ಬರುತ್ತದೆ. ಎರೆ ಭೂಮಿಯಲ್ಲಿ ಕಡಲೆ ಚೆನ್ನಾಗಿ ಬೆಳೆಯುತ್ತದೆ. ತಾಲ್ಲೂಕಿನ ಮಾಡಳ್ಳಿ, ಯಳವತ್ತಿ, ರಾಮಗೇರಿ, ಗೋವನಾಳ, ಶಿಗ್ಲಿ, ಲಕ್ಷ್ಮೇಶ್ವರ ಭಾಗದ ಧರ್ಮಾಪುರ, ಗೊಜನೂರು, ಅಡರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಲೆ ಬೆಳೆಯಲಾಗುತ್ತಿದೆ. ಕೇಂದ್ರ ಸರ್ಕಾರ ಕಡಲೆಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ.
‘ಈ ವರ್ಷದ ಮಳೆಗೆ ಮುಂಗಾರು ಬೆಳೆ ಹಾಳಾಗಿ ರೈತರಿಗೆ ನಷ್ಟ ಉಂಟಾಗಿದೆ. ಹಿಂಗಾರು ಬೆಳೆಗಳಾದರೂ ಬರಲಿ ಎಂದು ರೈತರು ಕಡಲೆ ಬಿತ್ತುತ್ತಿದ್ದಾರೆ’ ಎಂದು ರೈತ ಮುಖಂಡ ಟಾಕಪ್ಪ ಸಾತಪುತೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.