ADVERTISEMENT

ಕಡಲೆ ಬೆಳೆಗೆ ಕುಂಕುಮ ರೋಗ: ರೈತರಲ್ಲಿ ಆತಂಕ

ರೋಗ ನಿಯಂತ್ರಣಕ್ಕೆ ಸಲಹೆ ನೀಡಿದ ಕೃಷಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:19 IST
Last Updated 1 ಜನವರಿ 2026, 6:19 IST
ಲಕ್ಷ್ಮೇಶ್ವರದ ವಿರುಪಾಕ್ಷಪ್ಪ ಆದಿ ಅವರ ರೋಗಪೀಡಿತ ಕಡಲೆ ಬೆಳೆ ಹೊಲಕ್ಕೆ ಬುಧವಾರ ಕೃಷಿ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಲಕ್ಷ್ಮೇಶ್ವರದ ವಿರುಪಾಕ್ಷಪ್ಪ ಆದಿ ಅವರ ರೋಗಪೀಡಿತ ಕಡಲೆ ಬೆಳೆ ಹೊಲಕ್ಕೆ ಬುಧವಾರ ಕೃಷಿ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಲಕ್ಷ್ಮೇಶ್ವರ: ಹಿಂಗಾರು ಹಂಗಾಮಿನ ಪ್ರಮುಖ ದ್ವಿದಳ ಧಾನ್ಯದ ಬೆಳೆಯಾಗಿರುವ ಕಡಲೆಗೆ ಕುಂಕುಮ ರೋಗ ಬಾಧೆ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

ಕೆಲ ಹೊಲಗಳಲ್ಲಿನ ಕಡಲೆ ಬೆಳೆ ಸಂಪೂರ್ಣ ಕೆಂಬಣ್ಣಕ್ಕೆ ತಿರುಗಿದ್ದು ಗಿಡಗಳಿಂದ ಕೆಂಪು ಬಣ್ಣದ ಹೊಟ್ಟು ಉದುರಿ ಬೀಳುತ್ತಿದೆ. ಬೆಳೆಗೆ ಕುಂಕುಮ ರೋಗ ಕಾಣಿಸಿಕೊಂಡ ಮಾಹಿತಿ ಪಡೆದ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳ ತಂಡ ಬುಧವಾರ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಸಂಚಾರ ಕೈಗೊಂಡಿದ್ದರು.

ರೋಗಪೀಡಿತ ಪಟ್ಟಣದ ವಿರುಪಾಕ್ಷಪ್ಪ ಆದಿ ಅವರ ಕಡಲೆ ಹೊಲಕ್ಕೆ ತಂಡ ಭೇಟಿ ನೀಡಿ ರೋಗದ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಿದರು.

ADVERTISEMENT

ಕೃಷಿ ಇಲಾಖೆ ಉಪನಿರ್ದೇಶಕಿ ಸ್ಪೂರ್ತಿ ಎಂ. ಮಾತನಾಡಿ, ‘ಒಂದೇ ಭೂಮಿಯಲ್ಲಿ ಪದೇ ಪದೇ ಒಂದೇ ಬೆಳೆ ಬೆಳೆಯುವುದರಿಂದ ಸಾಮಾನ್ಯವಾಗಿ ರೋಗಗಳು ಕಾಣಿಸಿಕೊಳ್ಳುತ್ತವೆ. ಅತಿಯಾದ ಮಳೆಯಾಗಿ ತೇವಾಂಶ ಹೆಚ್ಚಾದಾಗಲೂ ಸಹ ಬೆಳೆಗಳಿಗೆ ವಿವಿಧ ರೋಗಗಳು ಬರುತ್ತವೆ. ಈ ವರ್ಷ ಜಿಲ್ಲೆಯಾದ್ಯಂತ ಅತಿಯಾದ ಮಳೆ ಸುರಿದಿದ್ದು ಕಡಲೆ ಬೆಳೆಗೆ ರಂಜಕದ ಕೊರತೆ ಉಂಟಾಗಿ ಈ ರೋಗ ಬಂದಿದೆ. ಇದು ಸೊರಗು ರೋಗವಲ್ಲ. ಅತಿಯಾದ ಮಳೆ ಸುರಿದಾಗ ಭೂಮಿಯಲ್ಲಿರುವ ರಂಜಕದ ಪ್ರಮಾಣ ಕಡಿಮೆ ಆಗುತ್ತದೆ. ಆಗ ಬೆಳೆಯ ಬೆಳವಣಿಗೆಗೆ ಪೌಷ್ಟಿಕಾಂಶದ ಕೊರತೆ ಉಂಟಾಗಿ ಈ ರೋಗ ಬರುತ್ತದೆ’ ಎಂದರು.

‘ಕಡಲೆ ಬೆಳೆ ಹೂವು ಬಿಡುವ ಹಂತದಲ್ಲಿದ್ದಾಗ ರೋಗ ಕಾಣಿಸಿಕೊಂಡರೆ ಹತೋಟಿಗೆ ತರುವುದು ಸುಲಭ. ಆದರೆ ಇದೀಗ ಕಾಯಿಬಿಟ್ಟು ಒಕ್ಕಣಿಗೆ ಕಾಯುತ್ತಿದೆ. ಇಂಥ ಸಮಯದಲ್ಲಿ ರೋಗದ ಹತೋಟಿ ಅಸಾಧ್ಯ. ಆದರೆ ತಡವಾಗಿ ಬಿತ್ತನೆ ಮಾಡಿರುವ ರೈತರ ಹೊಲಗಳಲ್ಲಿನ ಬೆಳೆ ಹೂವು ಬಿಡುವ ಹಂತದಲ್ಲಿದ್ದರೆ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಸಿಂಪಡಣೆ ಮಾಡಿದರೆ ರೋಗವನ್ನು ಅಲ್ಪಮಟ್ಟಿಗೆ ತಡೆಗಟ್ಟಬಹುದು’ ಎಂದು ತಿಳಿಸಿದರು.

‘ರೈತರು ಒಂದೇ ಭೂಮಿಯಲ್ಲಿ ಪದೇ ಪದೇ ಒಂದೇ ಬೆಳೆಯುವುದನ್ನು ಬಿಡಬೇಕು. ಬೆಳೆ ಪರಿವರ್ತನೆ ಮಾಡಿದರೆ ಬಹಳಷ್ಟು ರೋಗಗಳನ್ನು ನೈಸರ್ಗಿಕವಾಗಿ ಹತೋಟಿ ಮಾಡಲು ಸಾಧ್ಯ. ಇನ್ನು ಬಿತ್ತನೆ ಸಮಯದಲ್ಲಿ ತಪ್ಪದೇ ಎಲ್ಲ ರೈತರು ಬೀಜೋಪಚಾರವನ್ನು ಕಡ್ಡಾಯವಾಗಿ ಮಾಡಲೇಬೇಕು. ಅಂದರೆ ಮುಂದೆ ಬೆಳೆಗೆ ರೋಗ ಬರುವುದು ಬಹಳಷ್ಟು ಕಡಿಮೆ ಆಗುತ್ತದೆ. ರೈತರು ಮೇಲಿಂದ ಮೇಲೆ ಕೃಷಿ ಇಲಾಖೆಗೆ ಬಂದು ಮಾಹಿತಿ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಸಹಾಯಕಎಂ.ಶಿವಕುಮಾರ ಕಾಶಪ್ಪನವರ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ ನರಸಮ್ಮನವರ. ಪ್ರಕಾಶ ಹೊನ್ನಪ್ಪನವರ, ರೈತರಾದ ವಿರುಪಾಕ್ಷಪ್ಪ ಆದಿ, ಸೋಮನಗೌಡ ಪಾಟೀಲ, ಬಸವರಾಜ ಮೆಣಸಿನಕಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.