ADVERTISEMENT

ಗದಗ | ಅವಕಾಶ ವಂಚಿತರಾದರೆ ದಯಾಮರಣಕ್ಕೆ ಅರ್ಜಿ: ಹನಮಂತಗೌಡ ಕಲ್ಮನಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:18 IST
Last Updated 27 ನವೆಂಬರ್ 2025, 5:18 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ   

ಗದಗ: ‘ಅತಿಥಿ ಉಪನ್ಯಾಸಕರನ್ನು ಮಾನವೀಯತೆ ಆಧಾರದ ಮೇಲೆ ಸೇವೆಯಲ್ಲಿ ಮುಂದುವರಿಸಬೇಕು. ಇಲ್ಲವಾದರೆ, ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನಮಂತಗೌಡ ಕಲ್ಮನಿ ಎಚ್ಚರಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಬುಧವಾರ ಮಾತನಾಡಿದರು.

‘ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಈಗ ಎನ್‌ಇಸಿ, ಸ್ಲೆಟ್‌ ಅರ್ಹತೆ ಹೊಂದಿಲ್ಲ ಎಂಬ ಕಾರಣಕ್ಕೆ ಅವರನ್ನು ಸೇವೆಯಿಂದ ಕೈಬಿಡುವುದು ಸರಿಯಲ್ಲ. ಪ್ರಸ್ತುತ ಸೇವೆಯಲ್ಲಿರುವವರನ್ನು ಮುಂದುವರಿಸಬೇಕು. ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಹೊರಗುಳಿದ ಅತಿಥಿ ಉಪನ್ಯಾಸಕರನ್ನೂ ಕೌನ್ಸಿಲಿಂಗ್‌ ಮೂಲಕ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಅತಿಥಿ ಉಪನ್ಯಾಸಕಿ ದೊಡ್ಡಬಸಮ್ಮ ಮಾತನಾಡಿ, ‘20 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಾ ಬಂದಿರುವ ನಮ್ಮ ಕೈಯಲ್ಲಿ ಶಿಕ್ಷಣ ಪಡೆದವರು ಇಂದು ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ, ಯುಜಿಸಿ ಮಾನದಂಡದ ಹೆಸರು ಹೇಳಿ ಈಗ ನಮ್ಮನ್ನು ಬೀದಿಗೆ ಹಾಕುತ್ತಿದ್ದಾರೆ. ಮಕ್ಕಳ ಭವಿಷ್ಯ ಕಟ್ಟುತ್ತಾ ಬಂದಿರುವ ನಮ್ಮ ಭವಿಷ್ಯವೇ ಇಂದು ಬೀದಿಗೆ ಬಿದ್ದಿಗೆ’ ಎಂದು ಅಲವತ್ತುಕೊಂಡರು.

‘ನಮಗೆ ಈಗ ವಯಸ್ಸಾಗಿದೆ. ಮಾನವೀಯತೆ ಆಧಾರದ ಮೇಲೆ ಸರ್ಕಾರ ನಮಗೂ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಬೀದರ್‌ ಜಿಲ್ಲೆಯ ಅತಿಥಿ ಉಪನ್ಯಾಸಕ ಅನಿಲ್‌ಕುಮಾರ ಸಿಂಧೆ ಮಾತನಾಡಿ, ‘ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಮುಂದುವರಿಸಬೇಕು. ಉಳಿದಂತೆ ಬೋಧನಾ ಕಾರ್ಯಭಾರಕ್ಕೆ ಕೌನ್ಸೆಲಿಂಗ್ ನಡೆಸಲಿ. 2009ರಲ್ಲಿ ಎಂ.ಪಿಲ್ ಪೂರ್ಣಗೊಳಿಸಿರುವ ಪದವೀಧರರಿಗೂ ಅವಕಾಶ ನೀಡಿ, ಸೇವಾ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.

ಅತಿಥಿ ಉಪನ್ಯಾಸಕರಾದ ಮನಮೋಹನ, ಸುರೇಶ, ಅನಿಲ ಹಾರೂಗೇರಿ, ಎನ್‌.ಬಿ. ಬಡಿಗೇರ, ದಾನೇಶ್ವರಿ, ಪಾರ್ವತಿ ತಾರಿಹಾಳ, ಸರಸ್ವತಿ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶಶಿಕಲಾ ಜೋಳದ, ಅಮೃತ್ ದೇಸಾಯಿಗೌಡರ, ಡಾ.ವಿ.ಡಿ. ಮುಳಗುಂದ, ಭಗತ್‌ಸಿಂಗ್‌ ನವಲಕೂರ, ಡಾ.ಚಂದ್ರಕಾಂತ ಶಿರೋಳೆ ಸೇರಿದಂತೆ ಬೀದರ್‌, ಕಲಬುರಗಿ, ಕಾರವಾರ, ಧಾರವಾಡ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಹಾವೇರಿ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.